ಈ ನಮ್ಮ ಭೂಮಿಯು 4.54 ಬಿಲಿಯನ್ ವರ್ಷಗಳ ಹಿಂದೆ ಸೃಷ್ಟಿಯಾಗಿದೆ ಎನ್ನುವ ವಿಷಯವು ನಮಗೆಲ್ಲ ತಿಳಿದೇ ಇದೆ. ಕೋಟ್ಯಾನು ಕೋಟಿ ವರ್ಷಗಳ ಈ ಗ್ರಹದ ಇತಿಹಾಸದಲ್ಲಿ ಇದುವರೆಗು ವಿವಿಧ ಬಗೆಯ ಜೀವಿಗಳು ಇಲ್ಲಿ ಉಗಮಿಸಿ ಕೊನೆಗೆ ಅಂತ್ಯ ಕಂಡಿವೆ. ಆನಂತರ ಹೊಸ ಜೀವಿಗಳ ಉಗಮವಾಗಿದೆ. ಈ ಕ್ರಿಯೆಯು ಭೂಮಿಯ ಆರಂಭದಿಂದ ಇಲ್ಲಿಯವರೆಗೂ ನಡೆಯುತ್ತಲೇ ಬಂದಿದೆ. ಆದರೆ ಪ್ರತಿ ಬಾರಿ ಹೊಸ ಜೀವಿಗಳ ಉಗಮವಾಗುವುದಕ್ಕಿಂತ ಮೊದಲು ಭೂಮಿಯ ಮೇಲೆ ವಾಸಿಸುತ್ತಿರುವ ಜೀವಿಗಳ ಸಾಮೂಹಿಕ ಅಂತ್ಯವಾಗಿದೆ. ಇದುವರೆಗು 5 ಬಾರಿ ನಮ್ಮ ಭೂಮಿಯ ಮೇಲೆ ಜೀವಿಗಳ ಸಾಮೂಹಿಕ ಅಂತ್ಯವಾಗಿದ್ದು ಪ್ರತಿ ಬಾರಿ ಅಂತ್ಯವಾದಾಗ ಶೇಕಡ 80 ರಿಂದ 95 ರಷ್ಟು ಜೀವಿಗಳ ವಿನಾಶವಾಗಿದೆ. ಬನ್ನಿ ಇಂದು 5 ಬಾರಿ ನಮ್ಮ ಭೂಮಿ ಎದುರಿಸಿದ ಆ ಸಾಮೂಹಿಕ ಅಂತ್ಯಗಳ ಕುರಿತು ತಿಳಿದುಕೊಳ್ಳೋಣ.

1) Cretaceous-tertiary Extinction


65 ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ ಈ ಸಾಮೂಹಿಕ ಅಂತ್ಯಕ್ಕೆ ಪ್ರಮುಖ ಕಾರಣ 15 ಕಿಲೋಮೀಟರ್ ನಷ್ಟು ದೊಡ್ಡ ಕ್ಷುದ್ರ ಗ್ರಹದ ತುಂಡೊಂದು ಭೂಮಿಗೆ ಬಂದು ಅಪ್ಪಳಿಸಿದ್ದರಿಂದ. ಈ ಕ್ಷುದ್ರ ಗ್ರಹವು ಅಪ್ಪಳಿಸಿದ ತೀರ್ವತೆಗೆ ಸಮುದ್ರಗಳಲ್ಲಿ ಬೃಹತ್ ಸುನಾಮಿಗಳು ಸೃಷ್ಟಿಯಾಗಿದ್ದವು. ದೂಳಿನ ಕಣಗಳು ಭೂಮಿಯ ವಾತಾವರಣದ ಒಳಗೆ ಸೇರಿಕೊಂಡು ಅನೇಕ ವರ್ಷಗಳ ಕಾಲ ಸೂರ್ಯನ ಕಿರಣಗಳು ಭೂಮಿಗೆ ಬಂದು ತಾಗದ ಹಾಗೆ ಮಾಡಿದ್ದವು. ಇದರಿಂದಾಗಿ 76% ನಷ್ಟು ಜೀವಿಗಳ ಸಂತತಿ ನಾಶವಾಗಿತ್ತು.
ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ ಈಗ ನಾವುಗಳು ಆರನೆಯ ಸಾಮೂಹಿಕ ಅಂತ್ಯದ ಆರಂಭದಲ್ಲಿದ್ದೇವೆ. ಭೂಮಿಯ ವಾತಾವರಣದಲ್ಲಿ ಈಗ ಆಗುತ್ತಿರುವ ಬದಲಾವಣೆಯನ್ನು ಗಮನಿಸುತ್ತಿರುವ ವಿಜ್ಞಾನಿಗಳು ಇನ್ನು ನೂರರಿಂದ ಇನ್ನೂರು ವರ್ಷಗಳ ಒಳಗೆ ನಾವುಗಳು ಖಂಡಿತವಾಗಿ ಆರನೆಯ ಸಾಮೂಹಿಕ ಅಂತ್ಯವನ್ನು ಕಾಣಬಹುದಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಾಮೂಹಿಕ ಅಂತ್ಯವೆಂದರೆ ಕೇವಲ ಪ್ರಾಕೃತಿಕ ವಿಕೋಪವೇ ಕಾರಣವಾಗಬೇಕೆಂದೇನಿಲ್ಲ. ಮನುಷ್ಯನಂತಹ ಜೀವಿಗಳಿಂದಲೂ ಕೂಡ ಈ ಗ್ರಹದ ಮೇಲೆ ಸಾಮೂಹಿಕ ಅಂತ್ಯವಾಗಬಹುದು. ಈಗ ಭೂಮಿಯ ಮೇಲೆ ಮನುಷ್ಯರು ಬೇರೆ ಜೀವಿಗಳ ಮೇಲೆ ಮಾಡುತ್ತಿರುವ ದಬ್ಬಾಳಿಕೆ, ಪ್ರಕೃತಿಯ ನಾಶ ಹಾಗು ಮಾಲಿನ್ಯವನ್ನು ಗಮನಿಸುತ್ತಿರುವ ವಿಜ್ಞಾನಿಗಳು ಇದು ಹೀಗೆ ಮುಂದುವರೆದರೆ ನಾವುಗಳು ಆರನೆಯ ಸಾಮೂಹಿಕ ಅಂತ್ಯವನ್ನು ನೋಡುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.

2) Triassic-jurassic Extinction


201 ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ ಈ ಸಾಮೂಹಿಕ ಅಂತ್ಯದಿಂದ ಭೂಮಿಯ ಮೇಲೆ ವಾಸಿಸುತ್ತಿದ್ದ 80% ನಷ್ಟು ಜೀವಿಗಳ ಸಂತತಿ ನಾಶವಾಗಿತ್ತು. ಈ ಸಾಮೂಹಿಕ ಅಂತ್ಯಕ್ಕೆ ಪ್ರಮುಖ ಕಾರಣ ಅಟ್ಲಾಂಟಿಕ್ ಸಮುದ್ರದ ಒಳಗಿರುವ ಜ್ವಾಲಾಮುಖಿ ಪರ್ವತಗಳು ಸ್ಪೋಟವಾಗಿದ್ದರಿಂದ. ಈ ಜ್ವಾಲಾಮುಖಿ ಪರ್ವತಗಳು ಸ್ಪೋಟವಾಗಿದ್ದರಿಂದ ಅದರ ಒಳಗಿಂದ ಹೊರಬಂದ ವಿಷಪೂರಿತ ಅನಿಲಗಳು ಭೂಮಿಯ ವಾತಾವರಣವನ್ನು ವಿಷವನ್ನಾಗಿಸಿ ಜೀವಿಗಳ ಅಂತ್ಯಕ್ಕೆ ಕಾರಣವಾಯಿತು. ಈ ವಿಷಪೂರಿತ ಅನಿಲಗಳಿಂದ ಭೂಮಿಯ ಮೇಲೆ ಆಸಿಡ್ ಮಳೆಯಾಗುವುದರೊಂದಿಗೆ ಮಹಾಸಾಗರದ ಒಳಗೆ ಆಮ್ಲಜನಕದ ಪ್ರಮಾಣವನ್ನು ಕುಸಿಯುವ ಹಾಗೆ ಮಾಡಿತ್ತು.

3) Permian-triassic Extinction


ಈ ಸಾಮೂಹಿಕ ಅಂತ್ಯಕ್ಕೆ ಪ್ರಮುಖ ಕಾರಣ ಈಗಿನ ಸೈಬೀರಿಯಾ ಭಾಗದಲ್ಲಿ ಕಾಣಸಿಗುವ ಜ್ವಾಲಾಮುಖಿ ಪರ್ವತಗಳು. ಈ ಪರ್ವತಗಳು ಸ್ಪೋಟಗೊಂಡು ಅದರ ಒಳಗಿಂದ ಬಂದ ವಿಷಪೂರಿತ ಅನಿಲಗಳು ಭೂಮಿಯ ವಾತಾವರಣದಲ್ಲಿ ಸೇರಿಕೊಂಡು ವಿಷಪೂರಿತ ವಾತಾವರಣ ಸೃಷ್ಟಿಸುವುದಲ್ಲದೆ ಓಜೋನ್ ಪದರವನ್ನು ಹಾನಿ ಮಾಡಿ ಸೂರ್ಯನ ಅಪಾಯಕಾರಿ ಕಿರಣಗಳು ನೇರವಾಗಿ ಭೂಮಿಗೆ ಬಂದು ತಾಗುವ ಹಾಗೆ ಮಾಡಿದ್ದವು. ಒಂದೆಡೆ ಜ್ವಾಲಾಮುಖಿ ಪರ್ವತಗಳಿಂದ ಹೊರಬಂದ ಲಾವಾರಸವು ಕಾಡುಗಳನ್ನು ಸುಡುತ್ತ ಹೋದರೆ ಮತ್ತೊಂದೆಡೆ ಸೂರ್ಯನ ಅಪಾಯಕಾರಿ ಕಿರಣಗಳು ಅನೇಕ ಜೀವಿಗಳ ಪ್ರಾಣವನ್ನು ತೆಗೆದುಕೊಂಡಿತ್ತು. ಇದರಿಂದಾಗಿ ಭೂಮಿಯ ಮೇಲೆ ಮತ್ತು ನೀರಿನ ಒಳಗಿದ್ದ ಜೀವಿಗಳ ಪೈಕಿ 96% ನಷ್ಟು ಜೀವಿಗಳ ಸಂತತಿ ನಾಶವಾಗಿತ್ತು. 251 ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ ಈ ಸಾಮೂಹಿಕ ಅಂತ್ಯವು ಅದೆಷ್ಟು ಭಯಾನಕವಾಗಿತ್ತೆಂದರೆ ಭೂಮಿಯ ಮೇಲೆ ಮರಳಿ ಸಹಜ ವಾತಾವರಣ ನಿರ್ಮಾಣವಾಗಲು 50 ಸಾವಿರ ವರ್ಷಗಳು ಬೇಕಾಯಿತು.

4) LateDevonian MassExtinction


375 ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ ಈ ಸಾಮೂಹಿಕ ಅಂತ್ಯದಲ್ಲಿ 80% ನಷ್ಟು ಜೀವಿಗಳ ಸಂತತಿಅಂತ್ಯ ಕಂಡಿತ್ತು. ಈ ಸಾಮೂಹಿಕ ಅಂತ್ಯಕ್ಕೆ ಪ್ರಮುಖ ಕಾರಣ ಭೂಮಿಯ ಮೇಲೆ ಜ್ವಾಲಾಮುಖಿ ಪರ್ವತಗಳ ಸ್ಫೋಟ ಮತ್ತು ಕ್ಷುದ್ರ ಗ್ರಹಗಳ ತುಂಡುಗಳು ಬಂದು ಅಪ್ಪಳಿಸಿದ್ದರಿಂದ.

5) Ordovician-silurian MassExtinction


ನಮ್ಮ ಭೂಮಿ ಕಂಡ ಮೊದಲ ಸಾಮೂಹಿಕ ಅಂತ್ಯವನ್ನು “Ordovician-silurian Extinction” ಎಂದು ಕರೆಯಲಾಗಿದೆ. ಇದು ಸಂಭವಿಸಿದ್ದು 440 ಮಿಲಿಯನ್ ವರ್ಷಗಳ ಹಿಂದೆ. ಈ ಸಾಮೂಹಿಕ ಅಂತ್ಯದ ಆರಂಭವು ಈಗಿನ ಉತ್ತರ ಅಮೇರಿಕದ ಸಮುದ್ರದ ಭಾಗಗಳಲ್ಲಿ ಇರುವ ನೀರು ಮಂಜುಗಡ್ಡೆಗಳಾಗಿ ಪರಿವರ್ತನೆ ಆಗುವ ಮೂಲಕ ಆರಂಭವಾಗಿತ್ತು. ಈ ಮಂಜುಗಡ್ಡೆಗಳು ವಾತಾವರಣದಲ್ಲಿ ಇದ್ದ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುವುದರೊಂದಿಗೆ ಭೂಮಿಯ ತಾಪಮಾನವು ಕುಸಿಯತೊಡಗಿತ್ತು. ಇದರಿಂದಾಗಿ ಭೂಮಿಯ ಮೇಲೆ ತಾಪಮಾನವು ಸಂಪೂರ್ಣವಾಗಿ ಇಳಿದು iceageಯುಗವು ಆರಂಭವಾಗತೊಡಗಿತ್ತು. ಇದರಿಂದಾಗಿ ಸಮುದ್ರದಲ್ಲಿ ಆಮ್ಲಜನಕದ ಪ್ರಮಾಣ ಇಳಿದು ಜಲಚರಗಳಿಗೆ ಉಸಿರಾಡಲು ಆಮ್ಲಜನಕದ ಕೊರತೆ ಉಂಟಾಗಿ ಸಾಯಲು ಶುರುಮಾಡಿದ್ದವು. ಈ ಸಾಮೂಹಿಕ ಅಂತ್ಯದಲ್ಲಿ ಭೂಮಿಯ ಮೇಲೆ ವಾಸವಿದ್ದ 86% ನಷ್ಟು ಜೀವಿಗಳು ಅಂತ್ಯವಾಗಿದ್ದವು. ಇದರ ನಂತರ ಹಲವಾರು ವರ್ಷಗಳವರೆಗು ಭೂಮಿಯ ಮೇಲೆ ಜೀವಿಗಳು ವಾಸಿಸುತ್ತಿರಲಿಲ್ಲ. ವರ್ಷಗಳು ಕಳೆದಂತೆ ಭೂಮಿಯ ವಾತಾವರಣದಲ್ಲಿ ಮರಳಿ ಆಮ್ಲಜನಕವು ಬಂದಿತು.

Follow Karunadu Today for more Interesting Facts & Stories. 

Click here to Join Our Whatsapp Group