
ಮನುಷ್ಯನ ಕೈಯಲ್ಲಿ ಸಿಕ್ಕು ಅದೆಷ್ಟೋ ಪ್ರಾಣಿ ಪಕ್ಷಿ ಸಂಕುಲಗಳು ಸರ್ವನಾಶವಾಗಿರುವುದು ನಮಗೆಲ್ಲ ತಿಳಿದ ವಿಚಾರವೆ. ಹಾಗಂತ ಎಲ್ಲಾ ಮನುಷ್ಯರು ಕೆಟ್ಟವರಲ್ಲ, ಪ್ರಾಣಿ ಪಕ್ಷಿಗಳ ಸಂಕುಲವನ್ನು ಉಳಿಸಿಕೊಳ್ಳುವ ಸಲುವಾಗಿ ಸಾಕಷ್ಟು ಶ್ರಮ ಪಡುತ್ತಿರುವ ವ್ಯಕ್ತಿಗಳನ್ನು ನಾವು ಕಾಣಬಹುದು. ನಮಗೆಲ್ಲ ತಿಳಿದ ಹಾಗೆ ಹುಲಿ, ಖಡ್ಗಮೃಗದಂತಹ ಅದೆಷ್ಟೋ ಪ್ರಾಣಿಗಳು ಇಂದು ಅಳಿವಿನಂಚಿನಲ್ಲಿವೆ. ಅವುಗಳ ರಕ್ಷಣೆಗೆಂದೆ ನಮ್ಮ ದೇಶದ ಅನೇಕ ರಾಜ್ಯಗಳ ಸರ್ಕಾರವು “ರಾಷ್ಟ್ರೀಯ ಉದ್ಯಾನವನಗಳನ್ನು” ನಿರ್ಮಿಸಿ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸುತ್ತಿವೆ. ಇಂದು ನಿಮಗೆ ಈ ರೀತಿ ಪ್ರಾಣಿಗಳ ರಕ್ಷಣೆಗೆಂದು ನಿರ್ಮಿಸಲಾದ ದೇಶದ 10 ಉತ್ತಮ ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ತಿಳಿಸಿಕೊಡುತ್ತೇವೆ ಮುಂದೆ ಓದಿ.
1) ಕಾಜಿರಂಗ ರಾಷ್ಟ್ರೀಯ ಉದ್ಯಾನವನ, ಅಸ್ಸಾಂ
ಅಸ್ಸಾಂ ರಾಜ್ಯದ “ಕಾಂಚನ್ಜುರಿ” ಯಲ್ಲಿರುವ ಈ ಉದ್ಯಾನವನ 1908 ರಲ್ಲಿ ಸ್ಥಾಪನೆಯಾಗಿದೆ. 430 ಚದುರ ಕಿಲೋಮೀಟರ್ ಜಾಗದಲ್ಲಿ ವಿಸ್ತಾರವಾಗಿರುವ ಈ ಉದ್ಯಾನವನ ಬ್ರಹ್ಮಪುತ್ರ ನದಿಯ ದಂಡೆಯುದ್ದಕ್ಕೂ ಹಬ್ಬಿಕೊಂಡಿದೆ. ದೇಶದ ಬೇರೆ ಯಾವ ಉದ್ಯಾನವನದಲ್ಲು ಕಾಣಸಿಗದ ಒಂದು ಕೊಂಬಿನ 2413 ಖಡ್ಗಮೃಗಗಳು ಇಲ್ಲಿ ಕಾಣಸಿಗುತ್ತದೆ. ಹುಲಿ, ಆನೆಗಳಂತಹ ಪ್ರಾಣಿಗಳನ್ನು ಹೊಂದಿರುವ ಈ ಉದ್ಯಾನವನಕ್ಕೆ ವಿಧ ವಿಧವಾದ ಪಕ್ಷಿಗಳು ಪ್ರತಿ ವರ್ಷ ವಲಸೆ ಬರುತ್ತವೆ.
2) ರನ್ತಂಬೋರ್ ರಾಷ್ಟ್ರೀಯ ಉದ್ಯಾನವನ, ರಾಜಸ್ಥಾನ
ರಾಜಸ್ಥಾನದ “ಸವಾಯಿ ಮಾಧೋಪುರ್” ಬಳಿಯಿರುವ ಈ ಉದ್ಯಾನವನದಲ್ಲಿ “ಬಂಗಾಳದ ಹುಲಿಗಳು” ಕಾಣಸಿಗುತ್ತವೆ. 282 ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿರುವ ಈ ಉದ್ಯಾನವನವನ್ನು 1980 ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಭಾರತ ಸರ್ಕಾರ ಘೋಷಿಸಿತು. ಕೇವಲ ಹುಲಿಗಳು ಮಾತ್ರವಲ್ಲದೆ ಚಿರತೆಗಳು, ಕಾಡು ಹಂದಿಗಳು, ಕತ್ತೆ ಕಿರುಬಗಳು. ಕರಡಿಗಳು, ಸಾರಂಗ ಮತ್ತು ಮೊಸಳೆಗಳು ಈ ಉದ್ಯಾನವನದಲ್ಲಿವೆ. ಈ ಉದ್ಯಾನವನದಲ್ಲಿ ಅದೆಷ್ಟು ಬಂಗಾಳದ ಹುಲಿಗಳಿವೆಯೆಂದರೆ ನೀವು ಯಾವುದೇ ಸಮಯದಲ್ಲಿ ಸಫಾರಿಗೆ ಹೋದರು ಕೂಡ ಸುಲಭವಾಗಿ ಹುಲಿಗಳನ್ನು ಕಾಣಬಹುದಾಗಿದೆ.
3) ಕನ್ಹ ರಾಷ್ಟ್ರೀಯ ಉದ್ಯಾನವನ, ಮಧ್ಯಪ್ರದೇಶ
ಮಧ್ಯ ಪ್ರದೇಶದ ಎರಡು ಜಿಲ್ಲೆಗಳಾದ “ಮಾಂಡ್ಲ ಮತ್ತು ಬಲಘಾಟ್” ನಲ್ಲಿ ವಿಸ್ತಾರವಾಗಿರುವ ಈ ರಾಷ್ಟ್ರೀಯ ಉದ್ಯಾನವನವು ಬರೋಬ್ಬರಿ 1067 ಚದುರ ಕಿಲೋಮೀಟರ್ ಜಾಗದಲ್ಲಿ ಹಬ್ಬಿದ್ದು ಮಧ್ಯ ಭಾರತದ ಅತ್ಯಂತ ದೊಡ್ಡ ರಾಷ್ಟ್ರೀಯ ಉದ್ಯಾನವನ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. 1989 ರಲ್ಲಿ ಇದನ್ನು ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಗಿದ್ದು “ಬಂಗಾಳದ ಹುಲಿಗಳು, ಚಿರತೆಗಳು, ಕರಡಿಗಳು, ಸಾರಂಗ, ಕಾಡೆಮ್ಮೆ ಮತ್ತು ಕತ್ತೆ ಕಿರುಬಗಳನ್ನು ಇಲ್ಲಿ ಕಾಣಬಹುದಾಗಿದೆ.
4) ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಕರ್ನಾಟಕ
ಕರ್ನಾಟಕದ ಚಾಮರಾಜ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಗ್ರಾಮದ ಬಳಿಯಿರುವ ಈ ರಾಷ್ಟ್ರೀಯ ಉದ್ಯಾನವನವು ಒಂದಾನೊಂದು ಕಾಲದಲ್ಲಿ ಮೈಸೂರು ರಾಜರಿಗೆ ಭೇಟೆ ಆಡುವ ಅಚ್ಚು ಮೆಚ್ಚಿನ ಸ್ಥಳವಾಗಿತ್ತು. ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಈ ರಾಷ್ಟ್ರೀಯ ಉದ್ಯಾನವನದಲ್ಲಿ ಸಂರಕ್ಷಿಸಲಾಗಿದೆ. 874 ಚದುರ ಕಿಲೋಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ವಿಸ್ತಾರವಾಗಿರುವ ಈ ಉದ್ಯಾನವನವನ್ನು 1974 ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಯಿತು. ಹುಲಿ, ಚಿರತೆ, ಆನೆ, ಕಾಡೆಮ್ಮೆ, ನರಿ, ಜಿಂಕೆ, ಸಾರಂಗ, ಕರಡಿ ಹೀಗೆ ಅನೇಕ ಪ್ರಾಣಿಗಳನ್ನು ಈ ಸುಂದರವಾದ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಬಹುದಾಗಿದೆ.
5) ಪೆರಿಯರ್ ರಾಷ್ಟ್ರೀಯ ಉದ್ಯಾನವನ, ಕೇರಳ
ಕೇರಳದ ಇಡುಕ್ಕಿ ಜಿಲ್ಲೆಯ “ತೆಕ್ಕಡಿ”ಯಲ್ಲಿರುವ ಈ ರಾಷ್ಟ್ರೀಯ ಉದ್ಯಾನವನವು 925 ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಸ್ತಾರವಾಗಿದೆ. “ಕಾರ್ಡಾಮಾಮ್ ಪರ್ವತಗಳ” ಮಧ್ಯೆ ಇರುವ ಈ ಸುಂದರವಾದ ಉದ್ಯಾನವನವನ್ನು 1982 ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು. ಅನೇಕ ವನ್ಯ ಜೀವಿಗಳಿಗೆ ಆಶ್ರಯ ನೀಡಿರುವ ಈ ಸುಂದರವಾದ ಉದ್ಯಾನವನಕ್ಕೆ ಪ್ರತಿ ವರ್ಷ ದೂರ ದೂರದ ದೇಶಗಳಿಂದ ಪಕ್ಷಿಗಳು ವಲಸೆ ಬರುತ್ತವೆ.
6) ರಾಜಾಜಿ ರಾಷ್ಟ್ರೀಯ ಉದ್ಯಾನವನ, ಉತ್ತರಾಖಂಡ
ಹಿಮಾಲಯ ಪರ್ವತಗಳ ತೊಪ್ಪಲಿಗೆ ಅಂಟಿಕೊಂಡಿರುವ ಈ ಉದ್ಯಾನವನವು ಉತ್ತರಾಖಂಡ ರಾಜ್ಯದ ಹರಿದ್ವಾರ, ಡೆಹ್ರಾಡೂಮ್ ಮತ್ತು ಪೌರಿ ಘರ್ವಾಲ್ ಜಿಲ್ಲೆಗಳಲ್ಲಿ ಹಬ್ಬಿದೆ. ಸ್ವತಂತ್ರ ಹೋರಾಟಗಾರ “ಸಿ.ರಾಜಗೋಪಾಲಚಾರಿ” ಅವರ ನೆನಪಿಗಾಗಿ ಈ ಉದ್ಯಾನವನಕ್ಕೆ ರಾಜಾಜಿ ರಾಷ್ಟ್ರೀಯ ಉದ್ಯಾನವನ ಎಂದು ಹೆಸರಿಡಲಾಗಿದೆ. 820 ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಬ್ಬಿರುವ ಈ ಉದ್ಯಾನವನವನ್ನು 1983ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಯಿತು. “ಬಂಗಾಳ ಹುಲಿ, ಚಿರತೆ, ಆನೆ, ಕಾಳಿಂಗ ಸರ್ಪ, ಹೆಬ್ಬಾವು ಹೀಗೆ ಅನೇಕ ಪ್ರಾಣಿಗಳನ್ನು ಇಲ್ಲಿ ಕಾಣಬಹುದಾಗಿದೆ.
7) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕರ್ನಾಟಕ
ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರಒಲಯದಲ್ಲಿರುವ ಈ ಉದ್ಯಾನವನವು 260.5 ಚದುರ ಕಿಲೋಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ವಿಸ್ತಾರವಾಗಿದೆ. 1974 ರಲ್ಲಿ ರಾಷ್ಟ್ರೀಯ ಉದ್ಯಾನವನವಾದ ಮೇಲೆ ಇಲ್ಲಿ ಸಾಕಷ್ಟು ಪ್ರಗತಿಯಾಗಿದ್ದು ಪ್ರವಾಸಿಗರಿಗೆಂದೆ “ಜೂ” ನಿರ್ಮಿಸಲಾಗಿದೆ. ಸಿಂಹ, ಬಿಳಿ ಹುಲಿ, ಆನೆ, ಜಿಂಕೆ, ಸಾರಂಗ, ನೀರಾನೆ ಹೀಗೆ ಅನೇಕ ಪ್ರಾಣಿಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ.
8) ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ, ಉತ್ತರಾಖಂಡ
ಇದು ನಮ್ಮ ದೇಶದಲ್ಲಿಯೇ ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನವನ. ಬಂಗಾಳ ಹುಲಿಗಳ ಸಂರಕ್ಷಣೆಗಾಗಿ 1936 ರಲ್ಲಿ ಇದನ್ನು “ಹೇಲಿ ರಾಷ್ಟ್ರೀಯ ಉದ್ಯಾನವನ” ಎನ್ನುವ ಹೆಸರಿನಲ್ಲಿ ಬ್ರಿಟೀಷ್ ಅಧಿಕಾರಿ ಸ್ಥಾಪಿಸಿದರು. ಉತ್ತರಾಖಂಡ ರಾಜ್ಯದ ನೈನಿತಾಲ್ ಮತ್ತು ಪೌರಿ ಘರ್ವಾಲ್ ಜಿಲ್ಲೆಗಳಲ್ಲಿ ವಿಸ್ತಾರವಾಗಿರುವ ಈ ಉದ್ಯಾನವನ 520.8 ಚದುರಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ. ಇಲ್ಲಿರುವ ಸುಂದರವಾದ ಬಂಗಾಳ ಹುಲಿಗಳನ್ನು ನೋಡಲು ಪ್ರತಿ ವರ್ಷ 70 ಸಾವಿರಕ್ಕಿಂತ ಹೆಚ್ಚು ಜನರು ಭೇಟಿ ನೀಡುತ್ತಾರೆ.
9) ಗಿರ್ ರಾಷ್ಟ್ರೀಯ ಉದ್ಯಾನವನ, ಗುಜರಾತ್
ಬರೋಬ್ಬರಿ 1412 ಚದುರ ಕಿಲೋಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಹರಡಿರುವ ಈ ಉದ್ಯಾನವನವನ್ನುಸಿಂಹಗಳ ರಕ್ಷಣೆಗಾಗಿ 1965 ರಲ್ಲಿ ಸ್ಥಾಪಿಸಲಾಯಿತು. ಗುಜರಾತಿನ ತಲಾಲ ಗಿರ್ ನಗರದ ಬಳಿಯಿರುವ ಈ ಉದ್ಯಾನವನಕ್ಕೆ ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅತಿಹೆಚ್ಚು ಜನರು ಭೇಟಿ ನೀಡುತ್ತಾರೆ. ಈ ಉದ್ಯಾನವನದಲ್ಲಿರುವ ಸಿಂಹಗಳ ಸಂತತಿಯು ಪ್ರತಿ ವರ್ಷ ಹೆಚ್ಚಾಗುತ್ತಿದ್ದು ಇತ್ತೀಚಿನ ವರದಿಯ ಪ್ರಕಾರ 523 ಸಿಂಹಗಳು ಇಲ್ಲಿವೆ.
10) ಸುಂದರ್ಬನ್ ರಾಷ್ಟ್ರೀಯ ಉದ್ಯಾನವನ, ಪಶ್ಚಿಮ ಬಂಗಾಳ
ಭಾರತ ಮತ್ತು ಬಾಂಗ್ಲಾದೇಶ ಗಡಿಭಾಗದಲ್ಲಿರುವ ಈ ಉದ್ಯಾನವನವು 1330 ಚದುರ ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿ ವಿಸ್ತಾರವಾಗಿದೆ. ಮಂಗ್ರೋ ಅರಣ್ಯದಲ್ಲಿರುವ ಈ ಉದ್ಯಾನವನ “ಬಂಗಾಳದ ಹುಲಿಗಳಿಗೆ” ಹೆಸರುವಾಸಿಯಾಗಿದೆ. ಇದನ್ನು 1984 ರಲ್ಲಿ “ರಾಷ್ಟ್ರೀಯ ಉದ್ಯಾನವನ” ಎಂದು ಘೋಷಿಸಲಾಯಿತು. 1987 ರಲ್ಲಿ ಇದನ್ನು ಯುನೆಸ್ಕೋ ವಿಶ್ವ ಪರಂಪರೆ ತಾಣವನ್ನಾಗಿ ಪರಿಗಣಿಸಲಾಯಿತು. ಈ ಉದ್ಯಾನವನವು ಕೇವಲ ಬಂಗಾಳದ ಹುಲಿಗಳಿಗೆ ಮಾತ್ರವಲ್ಲದೆ ಅನೇಕ ಪಕ್ಷಿಗಳು, ಮೊಸಳೆಗಳು ಮತ್ತು ಸಿಹಿ ನೀರಿನಲ್ಲಿ ವಾಸಿಸುವ ಡಾಲ್ಫಿನ್ ಗಳಿಗೆ ಆಶ್ರಯ ನೀಡಿದೆ.
ಸುಂದರವಾದ ಪ್ರಕೃತಿಯನ್ನು ಮತ್ತು ಪ್ರಾಣಿಗಳನ್ನು ನೋಡುವ ಆಸೆ ನಿಮಗಿದ್ದರೆ ಈ ರಾಷ್ಟ್ರೀಯ ಉದ್ಯಾನವನಗಳಿಗೆ ತಪ್ಪದೆ ಭೇಟಿ ನೀಡಿ. ಆದರೆ ನೆನಪಿರಲಿ ಯಾವುದೇ ಪ್ರಾಣಿಗಳಿಗೆ ತೊಂದರೆ ಕೊಡುವ ಹಾಗೆ ನಡೆದುಕೊಳ್ಳಬೇಡಿ. ಬುದ್ದಿವಂತರಾದ ನಾವುಗಳು ಅವುಗಳನ್ನು ರಕ್ಷಿಸಬೇಕೆ ಹೊರತು ಅವುಗಳಿಗೆ ತೊಂದರೆ ನೀಡಬಾರದು. ಇಲ್ಲವಾದಲ್ಲಿ ನಮಗೂ ಮತ್ತು ಅವುಗಳಿಗು ವ್ಯತ್ಯಾಸವಿರುವುದಿಲ್ಲ.
Follow Karunadu Today for more Interesting Facts & Stories.
Click here to Join Our Whatsapp Group