ನಮ್ಮ ಸೂರ್ಯನಿಗಿಂತ ಕೋಟಿ ಪಟ್ಟು ದೊಡ್ಡದಿರುವ ಮತ್ತು ಹೆಚ್ಚು ಪ್ರಕಾಶಮಾನವನ್ನು ಹೊರಹಾಕುವ ಅನೇಕ ನಕ್ಷತ್ರಗಳು ನಮ್ಮ ಬಾಹ್ಯಾಕಾಶದಲ್ಲಿವೆ ಎಂದು ನಿಮಗೆ ತಿಳಿದಿದೆ. ಆದರೆ ಎಂದಾದರು ಇಷ್ಟೊಂದು ದೊಡ್ಡ ನಕ್ಷತ್ರಗಳು ನಮ್ಮ ಬಾಹ್ಯಾಕಾಶದಲ್ಲಿ ಇದ್ದರೂ ಕೂಡ ಅದೇಕೆ ನಮ್ಮ ಬಾಹ್ಯಾಕಾಶವು ಸದಾ ಬೆಳಕಿನಿಂದ ಕೂಡಿರದೆ ಕತ್ತಲಿನಿಂದ ಕೂಡಿರುತ್ತದೆ ಎನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಿದೆಯೆ? ಅಕಸ್ಮಾತ್ ಆ ಪ್ರಶ್ನೆಯು ಮೂಡಿ ಅದಕ್ಕೆ ಉತ್ತರ ಸಿಗದೆ ಇದ್ದರೆ ನಿಮಗೆ ಇಂದು ವಿವರಿಸುತ್ತೇವೆ. 

ನಮ್ಮ ಬಾಹ್ಯಾಕಾಶವೇಕೆ ಕತ್ತಲಿನಿಂದ ಕೂಡಿದೆ ಎಂದು ನಿಮಗೆ ವಿವರಿಸುವುದಕ್ಕಿಂತ ಮೊದಲು ನಮ್ಮ ಭೂಮಿಯಿಂದ ನೋಡಿದಾಗ ನಮ್ಮ ಆಕಾಶವೇಕೆ ನೀಲಿ ಬಣ್ಣದಲ್ಲಿ ಕಾಣುತ್ತದೆ ಎಂದು ವಿವರಿಸುತ್ತೇವೆ ಕೇಳಿ. ನಮ್ಮ ಭೂಮಿಯು ತನ್ನದೇ ಆದ ವಾತಾವರಣವನ್ನು ಹೊಂದಿದೆ. ಅಂದರೆ ಇದರ ಒಳಗೆ ಆಮ್ಲಜನಕ, ಇಂಗಾಲದ ಡೈ ಆಕ್ಸೈಡ್, ಜಲಜನಕದಂತಹ ಅನಿಲಗಳಿದ್ದು ನೀರು ಮತ್ತು ಮಣ್ಣನ್ನು ಹೊಂದಿದೆ. ಇದನ್ನು ವಾಯುಮಂಡಲ ಎಂದು ಕರೆಯುತ್ತಾರೆ. ಈ ವಾಯುಮಂಡಲದ ಒಳಗೆ ಸೂರ್ಯನ ಕಿರಣಗಳು ಬಂದಾಗ ಆ ಕಿರಣದ ಒಳಗಿರುವ ನೀಲಿ ಬಣ್ಣವನ್ನು ಮಾತ್ರ ಭೂಮಿಯ ವಾತಾವರಣವು ಗಮನಿಸಿಕೊಳ್ಳುತ್ತದೆ.ಇದನ್ನು ಬೆಳಕಿನ ಚದುರುವಿಕೆ(scattering of light) ಎಂದು ಕರೆಯುತ್ತಾರೆ. ಇದರಿಂದ ನೀಲಿ ಬಣ್ಣವು ಸಂಪೂರ್ಣ ಭೂಮಿಯ ವಾತಾವರಣದಲ್ಲೆಲ್ಲ ಹಬ್ಬುತ್ತದೆ. ಆದರೆ ಚಂದ್ರನ ಮೇಲಿಂದ ನೋಡಿದಾಗ ಆಕಾಶವು ಕಪ್ಪು ಬಣ್ಣದಲ್ಲಿ ಕಾಣುತ್ತದೆ. ಏಕೆಂದರೆ ಚಂದ್ರನು ಭೂಮಿಯ ರೀತಿ ವಾತಾವರಣವನ್ನು ಹೊಂದಿಲ್ಲ. ಅಂದರೆ ಅದರ ಮೇಲೆ ಯಾವುದೇ ಗಾಳಿಯಿಲ್ಲ. ಇದೇ ರೀತಿ ಬೇರೆ ಬೇರೆ ಗ್ರಹಗಳಲ್ಲಿ ಅವುಗಳ ಮೇಲಿನ ವಾತಾವರಣಕ್ಕೆ ತಕ್ಕಂತೆ ಆಕಾಶವು ಬೇರೆ ಬೇರೆ ಬಣ್ಣದಲ್ಲಿ ಕಾಣಿಸುತ್ತದೆ.

ಆದರೆ ಬಾಹ್ಯಾಕಾಶದಲ್ಲಿ ಯಾವುದೇ ರೀತಿಯ ವಾತಾವರಣವಿಲ್ಲ.ಅಂದರೆ ಅಲ್ಲಿ ವಾಯುಮಂಡಲವಿಲ್ಲ. ಅಲ್ಲಿ ಕೇವಲ ವಿಷಪೂರಿತ ಕಿರಣಗಳು ಮತ್ತು ದೂಳಿನ ಕಣಗಳಿವೆ. ಒಂದು ನಕ್ಷತ್ರದ ಬೆಳಕಿನ ಕಿರಣಗಳು ವಾಯುಮಂಡಲದ ಒಳಗೆ ಪ್ರವೇಶಿಸಿದಾಗ ಮಾತ್ರ ಅದರಲ್ಲಿರುವ ಒಂದು ಬಣ್ಣವನ್ನು ವಾತಾವರಣವು ಗಮನಿಸಿಕೊಂಡು ಎಲ್ಲೆಡೆ ಹರಡುವ ಹಾಗೆ ಮಾಡುತ್ತದೆ. ಆದರೆ ಬಾಹ್ಯಾಕಾಶದಲ್ಲಿ ಬೆಳಕನ್ನು ಹೀರಿಕೊಳ್ಳುವಂತಹ ಯಾವುದೇ ರೀತಿಯ ವಾತಾವರಣವಿಲ್ಲದ ಕಾರಣ ಅಲ್ಲಿ ಸದಾ ಕತ್ತಲು ಇರುತ್ತದೆ.

ಇನ್ನು ಈಗ ನಮ್ಮ ಬಾಹ್ಯಾಕಾಶವೇಕೆ ಕತ್ತಲಿನಿಂದ ಕೂಡಿದೆ ಎಂದು ಮತ್ತೊಂದು ಕಾರಣವನ್ನು ಹೇಳುತ್ತೇವೆ ಕೇಳಿ. ವಿಜ್ಞಾನಿಗಳ ಪ್ರಕಾರ ನಮ್ಮ ಬ್ರಹ್ಮಾಂಡವು ಬೆಳಕಿನ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಿಸ್ತಾರವಾಗುತ್ತಿದೆ. ಅಂದರೆ ಪ್ರತಿ ಒಂದು ಕ್ಷಣಕ್ಕೆ 3 ಲಕ್ಷ ಕಿಲೋಮೀಟರ್ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬ್ರಹ್ಮಾಂಡವು ವಿಸ್ತಾರವಾಗುತ್ತಿದೆ. ಇದರ ಅರ್ಥ ಒಂದು ನಕ್ಷತ್ರದಿಂದ ನಮ್ಮೆಡೆಗೆ ಬರುತ್ತಿರುವ ಬೆಳಕು ಮೊದಲಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದೆ. ಇದನ್ನು ಒಂದು ಉದಾಹರಣೆಯೊಂದಿಗೆ ನಿಮಗೆ ವಿವರಿಸುತ್ತೇವೆ ಕೇಳಿ. ನೀವು ರಸ್ತೆಯ ಪಕ್ಕ ನಿಂತಿದ್ದೀರಿ ಎಂದು ಭಾವಿಸಿ, ಒಂದು ವಾಹನವು ಜೋರಾಗಿ ಸದ್ದು ಮಾಡುತ್ತ ನಿಮ್ಮ ಬಳಿ ಬರುತ್ತದೆ. ಆ ವಾಹನವು ನಿಮ್ಮ ಹತ್ತಿರ ಬರುತ್ತಿದ್ದಂತೆ ಅದು ಮಾಡುತ್ತಿರುವ ಸದ್ದು ನಿಮಗೆ ಜೋರಾಗಿ ಕೇಳಿಸತೊಡಗುತ್ತದೆ. ಯಾವಾಗ ಆ ವಾಹನವು ನಿಮ್ಮಿಂದ ದೂರ ಹೋಗುತ್ತದೆ ಅದು ಮಾಡುತ್ತಿರುವ ಸದ್ದು ನಿಮಗೆ ಕಡಿಮೆ ಕೇಳಲು ಶುರು ಮಾಡುತ್ತದೆ. ಕೊನೆಗೆ ಅದು ಸಾಕಷ್ಟು ದೂರ ಹೋದಮೇಲೆ ಅದರ ಸದ್ದೇ ಕೇಳುವುದಿಲ್ಲ. ಇದೇ ರೀತಿ ಬಾಹ್ಯಾಕಾಶದಲ್ಲಿ ಇರುವ ನಕ್ಷತ್ರಗಳು ವಾಹನದ ಹಾಗೆ. ನಮ್ಮ ಬ್ರಹ್ಮಾಂಡವು ವಿಸ್ತಾರವಾಗುತ್ತ ಹೋದಂತೆಲ್ಲಾ ಆ ನಕ್ಷತ್ರಗಳು ಕೂಡ ನಮ್ಮಿಂದ ದೂರವಾಗುತ್ತ ಹೋಗುತ್ತದೆ. ಅಂದರೆ ಅವುಗಳು ಹೊರಚಿಮ್ಮಿರುವ ಬೆಳಕು ಕೂಡ ನಿರ್ಧಿಷ್ಟ ದೂರದವರೆಗು ಮಾತ್ರ ಚಲಿಸಬಲ್ಲವು. ಅದಾದ ಬಳಿಕ ಆ ಬೆಳಕಿನ ಕಿರಣಗಳು ಅತಿಗೆಂಪು ಕಿರಣ(infrared rays) ಗಳಾಗಿ ಬದಲಾಗುತ್ತವೆ. ಈ ಕಿರಣಗಳನ್ನು ನೋಡುವ ಶಕ್ತಿ ನಮ್ಮ ಕಣ್ಣುಗಳಿಗೆ ಇಲ್ಲ. ಇದರೊಂದಿಗೆ ಆ ಬೆಳಕಿನ ಕಿರಣಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದ್ದರಿಂದ ಬಾಹ್ಯಾಕಾಶವು ಬೆಳಕಿನಿಂದ ಕೂಡಿರದೆ ಕತ್ತಲಿನಿಂದ ಕೂಡಿದೆ. ಅಕಸ್ಮಾತ್ ನಮ್ಮ ಬ್ರಹ್ಮಾಂಡವು ವಿಸ್ತಾರವಾಗಿರದಿದ್ದರೆ ಆಗ ಬಾಹ್ಯಾಕಾಶವು ಬೆಳಕಿನಿಂದ ಕೂಡಿರುತ್ತಿತ್ತು.