ಭಾರದ್ವಾಜ ಮುನಿಗಳು ದ್ರೋಣನಿಗೂ, ದೃಪದನಿಗೂ ಚಾಪವಿದ್ಯೆಯಲ್ಲಿ ಧುರೀಣರನ್ನಾಗಿ ಮಾಡಿದ್ದರು. ದ್ರೋಣನನ್ನಂತೂ ತನ್ನ ಮಗನಂತೆಯೇ ನೋಡಿಕೊಂಡು ಬಂದಿದ್ದರು. ಭಾರದ್ವಾಜರ ಮರಣದ ನಂತರ ದ್ರುಪದ ತನ್ನ ದೇಶಕ್ಕೆ ಹಿಂದಿರುಗುವಾಗ, ಗುರುಗಳ ಬಳಿ ತುಂಬಾ ಕಾಲದಿಂದ ದ್ರೋಣರೊಂದಿಗೆ ಇದ್ದುದರ ಫಲವಾಗಿ ಗಾಢ ಸ್ನೇಹ ಪ್ರಾಪ್ತವಾಗಿತ್ತು. ಬೀಳ್ಕೊಡುಗೆ ಸಮಯದಲ್ಲಿ ಅಪ್ಪಿ, ಹೇಳಿದ್ದ – “ದ್ರೋಣಾ, ನಾನೇನಾದರೂ ದೈವವಶಾತ್ ರಾಜನಾಗುವ ಸುಕೃತ ಇದ್ದರೆ ನಿನಗೂ ಅರ್ಧ ರಾಜ್ಯವನ್ನು ಕರುಣಿಸುತ್ತೇನೆ.”
ಬೀಳ್ಕೊಟ್ಟ ನಂತರ ದ್ರುಪದ ಪಾಂಚಾಲ ದೇಶಕ್ಕೆ ಬಂದ. ಅಲ್ಲಿನ ಒಂದು ದೇವಾಲಯದಲ್ಲಿ ಕೆಲಕಾಲ ವಾಸಿಸುತ್ತಿದ್ದ. ಅಲ್ಲಿನ ರಾಜನಿಗೆ ಮಕ್ಕಳೇ ಇರಲಿಲ್ಲ. ಅದೇ ಕೊರಗಿನಲ್ಲಿ ರಾಜ ಸತ್ತು ಹೋದ. ರಾಜ ವಂಶದವರೇ ಯಾರೂ ಇಲ್ಲದಂತಾಯಿತು. ಇದ್ದ ದಾಯಾದಿಗಳು ಸಿಂಹಾಸನಕ್ಕಾಗಿ ನಾನು-ತಾನೆಂದು ಒಬ್ಬರಿಗೊಬ್ಬರು ಬಡಿದಾಡತೊಡಗಿದರು. ಮಂತ್ರಿಗಳು ಸಮಾಲೋಚಿಸಿದರು. ಅವರೆಲ್ಲರನ್ನೂ ಕುಳ್ಳಿರಿಸಿ ಒಂದು ಸಲಹೆ ಇತ್ತರು. “ಪಟ್ಟದಾನೆಯ ಸೊಂಡಿಲಿಗೆ ಒಂದು ಪುಷ್ಪಹಾರವನ್ನಿಟ್ಟು, ರಾಜಧಾನಿಯೊಳಗೆ ಬಿಡೋಣ. ಅದು ತನ್ನ ಸೊಂಡಿಲಿನಲ್ಲಿರುವ ಹಾರವನ್ನು ಯಾರ ಕೊರಳಿಗೆ ಹಾಕಿದರೆ ಅವರನ್ನೇ ರಾಜನನ್ನಾಗಿ ಮಾಡೋಣ” ಎಂದಾಗ ಎಲ್ಲರೂ ಸಲಹೆಯನ್ನು ಅನುಮೋದಿಸಿದರು. ಅದರಂತೆ ಹೂಮಾಲೆಯನ್ನು ಪಟ್ಟದಾನೆ ಸೊಂಡಿಲಿನಲ್ಲಿ ಸಿಕ್ಕಿಸಿದರು. ರಾಜಧಾನಿಯಲ್ಲಿ ತಿರುಗಿಸಲು ಬಿಟ್ಟರು. ಅದು ರಾಜಧಾನಿಯ ಮೂಲೆ-ಮೂಲೆಯಲ್ಲೆಲ್ಲಾ ಸುತ್ತಾಡಿತು. ಕಡೆಗೆ ದೇವಾಲಯದ ಬಳಿ ಕುಳಿತಿದ್ದ ದ್ರುಪದನ ಬಳಿಗೆ ಬಂದ. ಅವನ ಕೊರಳಿಗೆ ಹೂಮಾಲೆ ಹಾಕಿತು. ಅವನನ್ನು ತನ್ನ ಸೊಂಡಿಲಿನಿಂದ ಮೇಲೆತ್ತಿ ಅಂಬಾರಿಯ ಮೇಲೆ ಕುಳ್ಳಿರಿಸಿಕೊಂಡು, ಅರಮನೆಗೆ ಕರೆತಂದಿತು. ಈಗ ನಿಯಮದಂತೆ ಎಲ್ಲರೂ ಕೂಡ, ಅವನನ್ನೇ ಸಿಂಹಾಸನದ ಮೇಲೆ ಕುಳ್ಳಿರಿಸಿ, ರಾಜ್ಯಾಭಿಷೇಕ ಮಾಡಿದರು.
 
ಇತ್ತ ದ್ರೋಣಾಚಾರ್ಯರು ತಮ್ಮ ಹೆಂಡತಿಯಾದ ಕೃಪೆಯೊಂದಿಗೆ ಕಡುಬಡತನದಲ್ಲಿ ಜೀವಿಸುತ್ತಿದ್ದರು. ಅವರಿಗೊಬ್ಬನೇ ಮಗ, ಅಶ್ವತ್ಥಾಮ. ಅವನಿನ್ನೂ ಚಿಕ್ಕ ಮಗು. ದ್ರೋಣರು ಪರಶುರಾಮಾಶ್ರಮದಿಂದ ಹಿಂದಿರುಗಿ ಬಂದು, ತಾವು ತಂದಿರುವ ಶಸ್ತ್ರಗಳ ಮಹತ್ವದ ಬಗ್ಗೆ ಬಣ್ಣಿಸತೊಡಗಿದರು. ಕೃಪೆಗೆ ಮಗುವಾದ ಅಶ್ವತ್ಥಾಮ ಹಾಲಿಗಾಗಿ ಹಸಿವಿನಿಂದ ಅಳುತ್ತಿರುವುದನ್ನು ಕಂಡು, ದ್ರೋಣರ ಬಣ್ಣನೆಯ ಬಗ್ಗೆ ರೇಗಿಹೋಗಿತ್ತು. “ಆ ಅಸ್ತ್ರಗಳನ್ನೆಲ್ಲಾ ಯಾವುದಾದರೂ ಹಳೆಯ ಬಾವಿಯಲ್ಲಿ ಬಿಸಾಡಿ ಬನ್ನಿ. ಮಗುವಿಗೆ ಹಾಲಿಗೂ ಗತಿ ಇಲ್ಲದೆ ನರಳುವಾಗ ಆ ಅಸ್ತ್ರಗಳನ್ನು ಕಟ್ಟಿಕೊಂಡು ನಾವೇನು ತಾನೇ ಸಾಧಿಸಲಾದೀತು?” ಎಂದು ಅಳತೊಡಗಿದಳು. ದ್ರೋಣರಿಗೆ ದ್ರುಪದ ಈಗ ರಾಜನಾಗಿರುವ ವಿಷಯ ತಿಳಿದಿತ್ತು. ಅವನ ಬಳಿಗೆ ಹೋಗಿ, ಬೇಕಾದುದನ್ನೆಲ್ಲಾ ತರುವೆನೆಂದು ತಿಳಿಸಿ, ಪಾಂಚಾಲ ನಗರದ ರಾಜಧಾನಿಗೆ ಬಂದರು. ಅರಮನೆಯ ಬಾಗಿಲ ಬಳಿ ಇದ್ದ ಪಹರೆಯವನಿಗೆ ತಾನು ಬಂದಿರುವ ವಿಚಾರವನ್ನು ದ್ರುಪದ ರಾಜನಿಗೆ ತಿಳಿಸಲು ಅರಿಕೆ ಮಾಡಿಕೊಂಡರು.
 
ದ್ರುಪದ ಅವರನ್ನು ಆದರದಿಂದ ಬರ ಮಾಡಿಕೊಂಡ. ಮೃಷ್ಟಾನ್ನ ಭೋಜನದಿಂದ ತೃಪ್ತಿಪಡಿಸಿ, ಬಂದ ಕಾರಣವನ್ನು ವಿಚಾರಿಸಿದ. ದ್ರೋಣರು ಹಿಂದೆ ದ್ರುಪದನು ತಮಗೆ ಕೊಡುವುದಾಗಿ ಹೇಳಿದ್ದ- ಅರ್ಧ ರಾಜ್ಯದ ಬಗ್ಗೆ ನೆನಪು ಮಾಡಿದರು. ದ್ರುಪದನಿಗೆ ರೇಗಿ ಹೋಯಿತು. ರಾಜ್ಯ ಮದದಿಂದ ಧೋರಣೆಯಿಂದಲೇ ಮೂದಲಿಸಿ ಹೇಳಿದ. “ಅಧಿಕಾರ ಇಲ್ಲದಿರುವಾಗ ಹೇಳಿದ ಮಾತುಗಳನ್ನೆಲ್ಲಾ ನಿಜ ಎಂದು ನಂಬಬಾರದು. ಅರ್ಧ ರಾಜ್ಯವೆಂದರೆ ಎಷ್ಟೊಂದು ಮಹತ್ವ ವಿಚಾರ ಎಂಬುದೂ ಸಹ ನಿನಗೆ ಹೇಗೆ ಗೊತ್ತಾದೀತು? ಇಷ್ಟವಿದ್ದರೆ ನಾಲ್ಕೈದು ದಿನ ರಾಜಗೃಹದಲ್ಲಿಯೇ, ಬೇಕಾದುದನ್ನು ತಿಂದು-ತೇಗಿ, ಮನೆಗೂ ಹೊತ್ತುಕೊಂಡು ಹೋಗು. ಕ್ಷತ್ರಿಯನಿಗೆ ರಾಜ್ಯ ಧರ್ಮ ಶೋಭಿಸುವಂತೆ ಬ್ರಾಹ್ಮಣನಿಗೆ ಶೋಭಿಸದು.”
ದ್ರೋಣರಿಗೆ ತಮ್ಮ ಆತ್ಮಗೌರವಕ್ಕೂ ಧಕ್ಕೆಯುಂಟು ಮಾಡಿದ ಈ ಮದಾಂಧ ರಾಜನ ಬಗ್ಗೆ ತಿರಸ್ಕಾರ ಭಾವನೆ ಹಾಗೂ ಕ್ರೋಧ ಉಮ್ಮಳಿಸಿತು. ಆದರೂ ತಡೆದುಕೊಂಡು ಪ್ರತಿಜ್ಞಾಪೂರ್ವಕವಾಗಿ ನುಡಿದರು. “ದ್ರುಪದಾ, ಪುಣ್ಯವಶಾತ್ ಪರಿಶ್ರಮವಿಲ್ಲದೆ ದೊರೆತ ರಾಜ್ಯ-ವೈಭವದ ಕೊಬ್ಬಿನಿಂದ, ಗೆಳೆಯನೆಂಬುದನ್ನೂ ಮರೆತು ಹೀಗೆಲ್ಲಾ ಹೀಯಾಳಿಸಿ ಮಾತನಾಡಿರುವೆಯಾ? ಮಾತಿಗೆ ತಪ್ಪಿರುವ ನಿನ್ನನ್ನು ಈಗಲೇ ಕೊಂದು ಹಾಕಬಲ್ಲೆ. ಆದರೆ ನನಗೆ ಅದು ಸರಿ ಅನಿಸುತ್ತಿಲ್ಲ. ನಿನ್ನನ್ನು ಹಿಂಗಟ್ಟು-ಮುಂಗಟ್ಟು ಕಟ್ಟಿಸಿ, ನನ್ನ ಮಂಚದ ಕಾಲಿಗೆ ಕಟ್ಟಿಸುವ ಶಿಷ್ಯನನ್ನೇ ತಯಾರು ಮಾಡುತ್ತೇನೆ. ಆಗ ನಿನ್ನ ಮೋರೆಯನ್ನು ಇದೇ ಕಾಲಿನಿಂದ ಒದೆಯುತ್ತೇನೆ” ಎಂದು ಹೇಳಿ ಹೊರಬಂದ. ಮುಂದೆ ತನ್ನ ಪ್ರಿಯ ಶಿಷ್ಯನಾದ ಅರ್ಜುನನಿಗೆ ಸಕಲ ಶಸ್ತ್ರಾಭ್ಯಾಸ ಕಲಿಸಿ ದ್ರುಪದನ ಕೈಕಾಲು ಕಟ್ಟಿ ಎಳೆದುಕೊಂಡು ಬರುವಂತೆ ಮಾಡಿದರು.

Follow Karunadu Today for more Stories like this

Click here to Join Our Whatsapp Group