
ನಮಗೆಲ್ಲ ತಿಳಿದ ಹಾಗೆ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ದೇವರು ಹಾಗೂ ದೇವಾಲಯ ಯಾವುದಾದರೂ ಇದ್ದರೆ ಅದು ಭಾರತದ ಆಂಧ್ರಪ್ರದೇಶ ರಾಜ್ಯದಲ್ಲಿರುವ ತಿರುಪತಿ ತಿಮ್ಮಪ್ಪ ದೇವಸ್ಥಾನ. ತನ್ನ ಅಪಾರವಾದ ಭಕ್ತಾದಿಗಳು ಹಾಗೂ ದೇಣಿಗೆಯಿಂದಲೇ ಹೆಸರುವಾಸಿಯಾದ ತಿರುಮಲ ತಿಮ್ಮಪ್ಪ ದೇವಸ್ಥಾನವು ಜಗತ್ತಿನಲ್ಲಿರುವಂತಹ ಆಧ್ಯಾತ್ಮಿಕ ಸ್ಥಳಗಳಲ್ಲಿ ಇದು ಕೂಡ ಒಂದು. ತನ್ನದೇ ಆದ ವೈಶಿಷ್ಟೆಯನ್ನು ಹೊಂದಿರುವ ಈ ದೇವಾಲಯವು ಬೇರೆ ದೇವಾಲಯಗಳಿಗೆ ಹೋಲಿಸಿದರೆ ವರ್ಷದ 365 ದಿನವೂ ಕೂಡ ಲಕ್ಷಾಂತರ ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನ ಈಡೇರಿಸಲೆಂದು ಭಕ್ತಿ ಪೂರಕವಾಗಿ ದೇಣಿಗೆಗಳನ್ನು ಕೊಟ್ಟು ತಮ್ಮ ಭಕ್ತಿಯನ್ನ ಹೇಗೆ ವ್ಯಕ್ತಪಡಿಸುತ್ತಾರೋ ಅದೇ ರೀತಿ ತಮ್ಮ ತಲೆಯ ಕೂದಲನ್ನು ಕೊಟ್ಟು ದೇವರ ಹತ್ತಿರ ತಮ್ಮ ಪಾಪಗಳು ಮತ್ತು ಅಹಂಕಾರವನ್ನು ತೊಳೆದು ಹಾಕಲು ತಿಮ್ಮಪ್ಪನ್ನ ದೇವಸ್ಥಾನಕ್ಕೆ ತಮ್ಮ ಕೂದಲನ್ನು ದಾನ ಮಾಡುತ್ತಾರೆ ಎನ್ನುವ ನಂಬಿಕೆಯಿದೆ. ಸಾಮಾನ್ಯವಾಗಿ ಪ್ರತಿದಿನ 20,000ಕ್ಕೂ ಹೆಚ್ಚು ಭಕ್ತಾದಿಗಳು ಬಂದು ತಮ್ಮ ಕೂದಲನ್ನು ದಾನ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಸರಿಸುಮಾರು 500ಕ್ಕೂ ಹೆಚ್ಚು ಕ್ಷೌರಿಕರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ನಾವಿಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಕೇವಲ ಗಂಡು ಮಕ್ಕಳು ತಮ್ಮ ತಲೆ ಕೂದಲನ್ನು ಕೊಡುವುದಲ್ಲದೆ ಹೆಣ್ಣು ಮಕ್ಕಳು ಕೂಡ ಅಪಾರ ಸಂಖ್ಯೆಯಲ್ಲಿ ತಮ್ಮ ಕೇಶರಾಶಿಯನ್ನು ದಾನ ಮಾಡುತ್ತಾರೆ.
ಕೂದಲು ಕೊಡುವುದರ ಹಿಂದಿನ ಪೌರಾಣಿಕ ಕಥೆ ಏನು..?
ಪುರಾಣಗಳ ಪ್ರಕಾರ ಪ್ರಾಚೀನ ಕಾಲದಲ್ಲಿ ವೆಂಕಟೇಶ್ವರ ಸ್ವಾಮಿಯ ಕೇಶರಾಶಿಯ ಮೇಲೆ ಅಪಾರವಾದ ಇರುವೆಗಳು ಗೂಡು ಕಟ್ಟಿಕೊಂಡಿದ್ದವು. ಇರುವೆಗಳ ಗೂಡುಗಳಿಗೆ ಪ್ರತಿದಿನ ಒಂದು ಹಸು ಹಾಲು ಕೊಡಲು ಹೋಗುತ್ತಿತ್ತು. ಇದನ್ನು ಗಮನಿಸಿದ ಹಸುವಿನ ಮಾಲೀಕ ಸತ್ಯವನ್ನು ತಿಳಿಯದೆ ಹಸುವಿನ ತಲೆಯನ್ನ ಕೊಡಲಿಯಿಂದ ಕತ್ತರಿಸುತ್ತಾನೆ. ಹಸುವಿಗೆ ಹೊಡೆದ ಪೆಟ್ಟು ವೆಂಕಟೇಶ್ವರ ಸ್ವಾಮಿಗೆ ತಗುಲುತ್ತದೆ. ಆ ಪೆಟ್ಟಿನಿಂದ ವೆಂಕಟೇಶ್ವರ ಸ್ವಾಮಿಯು ಗಾಯಗೊಳ್ಳುತ್ತಾರೆ ಇದರಿಂದಾಗಿ ಗಾಯಗೊಂಡಿರುವ ಜಾಗದಿಂದ ಕೆಲವು ಕೂದಲಗಳು ಉದುರಿ ಹೋಗುತ್ತದೆ.
ಒಮ್ಮೆ ವೆಂಕಟೇಶ್ವರ ಸ್ವಾಮಿಯು ನೀಲಾದ್ರಿ ಪರ್ವತದ ಮೇಲೆ ಮಲಗಿದ್ದಾಗ. ಆ ಸಮಯದಲ್ಲಿ ವೆಂಕಟೇಶ್ವರ ಸ್ವಾಮಿಯನ್ನು ಭೇಟಿ ಮಾಡಲೆಂದು ನೀಲಾದ್ರಿ ದೇವಿಯು ಆಗಮಿಸುತ್ತಾಳೆ ವೆಂಕಟೇಶ್ವರ ಸ್ವಾಮಿಯ ಸೌಂದರ್ಯವನ್ನು ಮೆಚ್ಚುತ್ತಾಳೆ. ಸ್ವಾಮಿಯನ್ನು ನೋಡುತ್ತಾ ನಿಂತಿರುವಾಗ ತಲೆಯ ಮೇಲೆ ಗಾಯದ ಗುರುತುಗಳನ್ನು ಕಂಡು ತನ್ನ ಕೇಶ ರಾಶಿಗಳನ್ನು ಕತ್ತರಿಸಿ ಭಗವಂತನ ತಲೆಯ ಮೇಲೆ ಲೇಪಿಸಿ ಸ್ವಾಮಿಯ ಸೌಂದರ್ಯವನ್ನು ಪೂರ್ಣಗೊಳಿಸಿದಳು. ಈ ದೃಶ್ಯವನ್ನು ಕಂಡ ವೆಂಕಟೇಶರ ಸ್ವಾಮೀಯು ತನಗೆ ಲೇಪಿಸಿದ ಕೂದಲನ್ನು ನೀಲಾದ್ರಿ ದೇವಿಯ ತಲೆಯ ಮೇಲೆ ಸುರಿಯುತ್ತಿರುವ ರಕ್ತವನ್ನು ಕಂಡು ಲೇಪಿಸಿದ ಕೇಶ ರಾಶಿಯನ್ನು ಹಿಂದಿರುಗಿಸಿದನು. ಆದರೆ ನೀಲಾದ್ರಿ ದೇವಿಯು ತಾನು ಕೊಟ್ಟ ತಲೆ ಕೂದಲನ್ನು ಮತ್ತೆ ಹಿಂದಕ್ಕೆ ತೆಗೆದುಕೊಳ್ಳಲು ನಿರಾಕರಿಸಿದಳು. ಮುಂದೆ ನಿಮ್ಮ ಭಕ್ತರು ತಮ್ಮ ಕೇಶ ರಾಶಿಗಳನ್ನ ಭಕ್ತಿಯ ಮೂಲಕ ದಾನ ಮಾಡುವುದರಿಂದ ತಾವು ಮಾಡಿದ ಪಾಪದಿಂದ ಮುಕ್ತಿ ಸಿಗುತ್ತದೆ ಎಂದು ವರವನ್ನು ನೀಡಿದಳು.ಈ ವಿಷಯದಿಂದ ಸಂತಸಗೊಂಡ ವೆಂಕಟೇಶ್ವರ ಸ್ವಾಮಿಯು ಕೇಶರಾಶಿಯು ದೇಹದ ಸೌಂದರ್ಯದ ಒಂದು ಭಾಗವಾಗಿದ್ದು ದೇವಿಯು ತನ್ನ ಕೂದಲನ್ನು ತ್ಯಾಗ ಮಾಡುವುದನ್ನು ಕಂಡು ನಿಜವಾಗಿಯೂ ಪ್ರಭಾವಿತನಾಗಿದ್ದೇನೆ ಎಂದು ಹೇಳುತ್ತಾನೆ. ಈ ಸ್ಥಳಕ್ಕೆ ಯಾವ ವ್ಯಕ್ತಿ ಬಂದು ತಮ್ಮ ಕೇಶ ರಾಶಿಗಳನ್ನು ದಾನ ಮಾಡುತ್ತಾರೆ ಅಂತವರ ಆಸೆಗಳನ್ನ ಶೀಘ್ರದಲ್ಲೇ ಈಡೇರಿಸಲಾಗುತ್ತದೆ ಎಂದು ವೆಂಕಟೇಶ್ವರ ಸ್ವಾಮಿಯು ಆಶೀರ್ವದಿಸಿದನು.ದೇವರ ಮೇಲೆ ಇರುವಂತಹ ನಂಬಿಕೆಯಿಂದ ಅಂದಿನಿಂದ ಇಂದಿನವರೆಗೂ ಭಕ್ತಾದಿಗಳು ಸಾಲು ಸಾಲಾಗಿ ಬಂದು ತಮ್ಮ ಕೂದಲನ್ನ ದಾನದ ರೂಪದಲ್ಲಿ ಕೊಟ್ಟು ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ.
ವೆಂಕಟೇಶ್ವರ ಸ್ವಾಮಿಯು ಕುಬೇರನಿಂದ ಸಾಲವನ್ನು ಪಡೆದಿದ್ದ
ತಿರುಪತಿಯಲ್ಲಿ ಕೇಶಮುಂಡನದ ಪ್ರಾಮುಖ್ಯತೆಯ ಬಗ್ಗೆ ಮತ್ತೊಂದು ಪುರಾಣಕತೆಯು ಬೆನ್ನುಹತ್ತುತ್ತದೆ. ಈ ಕಥೆಯು ಶ್ರೀ ವೆಂಕಟೇಶ್ವರನ ಮತ್ತು ಕುಬೇರನ ನಡುವಿನ ಸಾಲದ ಹಿನ್ನಲೆಯಾಗಿದೆ.
ಶ್ರೀ ವೆಂಕಟೇಶ್ವರ (ವಿಷ್ಣು ದೇವರು)ನು ಭೂಮಿಯ ಮೇಲೆ ತಿರುಮಲಾ ಬೆಟ್ಟದಲ್ಲಿ ವಾಸಿಸುತ್ತಿದ್ದನು. ಅವನು ಪದ್ಮಾವತಿ ದೇವಿಯೊಂದಿಗೆ ವಿವಾಹವಾಗಲು ನಿರ್ಧರಿಸಿದ್ದ. ವಿವಾಹವು ಅತ್ಯಂತ ವೈಭವೋತ್ಪನ್ನವಾಗಿ ನಡೆಯಬೇಕಾಗಿದ್ದರಿಂದ ವೆಂಕಟೇಶ್ವರನು ಹಣದ ಅಭಾವಕ್ಕೆ ಸಿಕ್ಕಿದನು. ಆ ಸಂದರ್ಭದಲ್ಲಿ, ಕುಬೇರನು (ಧನದ ದೇವತೆ) ಸಹಾಯಕ್ಕೆ ಬಂದನು. ವೆಂಕಟೇಶ್ವರನು ಕುಬೇರನಿಂದ ವಿವಾಹದ ವೆಚ್ಚಗಳನ್ನು ನಿಭಾಯಿಸಲು ಸಾಲವನ್ನು ತೆಗೆದುಕೊಂಡನು.ಕುಬೇರನು ನೀಡಿದ ಸಾಲವು ತುಂಬಾ ದೊಡ್ಡ ಮೊತ್ತವಾಗಿದ್ದು, ವೆಂಕಟೇಶ್ವರನು ಈ ಸಾಲವನ್ನು ತೀರಿಸಲು ಭಕ್ತರ ಸಹಾಯವನ್ನು ಕೇಳಿದನು. ಭಕ್ತರು ತಮ್ಮ ಕೇಶವನ್ನು ದಾನ ಮಾಡುವ ಮೂಲಕ, ಮತ್ತು ದೇವಾಲಯಕ್ಕೆ ನೀಡುವ ಉಳಿತಾಯದ ಮೂಲಕ ಈ ಸಾಲವನ್ನು ತೀರಿಸಲು ಸಹಾಯ ಮಾಡುತ್ತಾರೆ. ತಿರುಪತಿಯಲ್ಲಿ ಕೇಶದಾನ ಮಾಡುವ ಮೂಲಕ ಭಕ್ತರು ದೇವರ ಮೇಲಿನ ತಮ್ಮ ಭಕ್ತಿಯನ್ನೂ, ಅರ್ಪಣೆಯನ್ನೂ ಪ್ರದರ್ಶಿಸುತ್ತಾರೆ.ತಿರುಪತಿಯಲ್ಲಿ ಕೇಶಮುಂಡನ ಅಥವಾ ಕೂದಲು ದಾನ ಒಂದು ಪುರಾಣಿಕ ಮತ್ತು ಧಾರ್ಮಿಕ ಆವರಣ ಹೊಂದಿರುವ ಆಚರಣೆ. ಶ್ರೀ ವೆಂಕಟೇಶ್ವರನು ಕುಬೇರನಿಂದ ಪಡೆದ ಸಾಲವನ್ನು ತೀರಿಸಲು ಭಕ್ತರು ತಮ್ಮ ಕೂದಲನ್ನು ದಾನ ಮಾಡುವ ಮೂಲಕ ಸಹಾಯ ಮಾಡುತ್ತಾರೆ. ಈ ಪ್ರಕ್ರಿಯೆ ಭಕ್ತರ ಶ್ರದ್ಧೆ ಮತ್ತು ದೇವರ ಮೇಲಿನ ನಂಬಿಕೆಯನ್ನು ಮೆರೆಯುತ್ತದೆ.
Follow Karunadu Today for more Spiritual information’s
Click here to Join Our Whatsapp Group