
ಓಂ ನಮೋ ಭಗವತೇ ವಾಸುದೇವಾಯ..
ಎಲ್ಲರಿಗೂ ನಮಸ್ಕಾರ..
ಭಗವದ್ಗೀತೆ… ಇದು ಸಾಮಾನ್ಯವಾದ ಪುಸ್ತಕವಲ್ಲ. ಸನಾತನ ಧರ್ಮದ ಶಾಸ್ತ್ರ ಪರಂಪರೆ ಇತಿಹಾಸದಲ್ಲಿ ಬಹಳ ಮಹತ್ವದ ಗ್ರಂಥ. ನಮ್ಮ ಪ್ರಾಚೀನರು ಭಗವದ್ಗೀತೆಗೆ ವೇದಗಳಿಗಿಂತ ಶ್ರೇಷ್ಠ ಎನ್ನುವಷ್ಟು ಮಹತ್ವ ಕೊಟ್ಟಿದ್ದಾರೆ. ಎಲ್ಲಾ ಆಧ್ಯಾತ್ಮ ಸಾರವನ್ನು ಹೊತ್ತ ಮಹಾಭಾರತದ ಸಾರವೇ ಭಗವದ್ಗೀತೆ.
ಅರ್ಥದ ಭಾರದಿಂದ ತುಂಬಿರುವ ಮಹಾಭಾರತವು ಶಾಸ್ತ್ರಗಳಲ್ಲೇ ಶ್ರೇಷ್ಠ ಗ್ರಂಥ. ಇಂತಹ ಶ್ರೇಷ್ಠ ಗ್ರಂಥದಲ್ಲಿರುವ ಭಗವದ್ಗೀತೆಯು ಮತ್ತಷ್ಟು ಶ್ರೇಷ್ಠವಾದದ್ದು. ಭಗವದ್ಗೀತೆಯನ್ನು ಸಮಗ್ರವಾಗಿ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದರೆ ಭಾರತೀಯ ತತ್ವಶಾಸ್ತ್ರದ ಸಮಗ್ರ ದರ್ಶನ ನಮಗಾಗುತ್ತದೆ. ಭಗವದ್ಗೀತೆಯು ಮಹಾಭಾರತದಲ್ಲಿರುವ ಏಳು ಪಾತ್ರಗಳ ಮೂಲಕ 18 ಜೀವನ್ಮೌಲ್ಯಗಳ ವಿಶ್ಲೇಷಣೆಯನ್ನು ನಮ್ಮ ಮುಂದಿಡುತ್ತದೆ. ಆ 18 ಮೌಲ್ಯಗಳು ಈ ರೀತಿ ಇವೆ.
೧. ಧರ್ಮರಾಜ – ಧರ್ಮ(೧)
೨. ಭೀಮಸೇನ – ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ(೧೧).
೩. ಅರ್ಜುನ – ಶ್ರವಣ, ಮನನ ಮತ್ತು ನಿದಿಧ್ಯಾಸನ(೧೪)
೪.೫. ನಕುಲ-ಸಹದೇವ – ಶೀಲ ಮತ್ತು ವಿನಯ(೧೬)
೬. ದ್ರೌಪದಿ – ವೇದವಿದ್ಯೆ(೧೭)
೭. ಶ್ರೀಕೃಷ್ಣ – ವೇದವೇದ್ಯ(೧೮)
ನಾವು ಧರ್ಮದ ಚೌಕಟ್ಟಿನ ಮೇಲೆ ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲವೆಂಬ ಹತ್ತು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಶಾಸ್ತ್ರದ ಶ್ರವಣ,ಮನನ ಮತ್ತು ನಿದಿಧ್ಯಾಸನದೊಂದಿಗೆ ಶೀಲ ಮತ್ತು ವಿನಯಗಳು ನಮ್ಮ ನಿತ್ಯ ಸಂಗಾತಿಗಳಾಗಿರಬೇಕು. ಈ ಹದಿನಾರು ಜೀವನ್ಮೌಲ್ಯಗಳಿಂದ ಹದಿನೇಳನೇ ವೇದವಿದ್ಯೆಯನ್ನು ಒಲಿಸಿಕೊಂಡು, ಹದಿನೆಂಟನೇ ವೇದವೇದ್ಯ ಭಗವಂತನನ್ನು ತಲುಪುವುದೇ ಭಗವದ್ಗೀತೆಯ ಒಟ್ಟು ಸಾರಾಂಶ.
ಆ ಹದಿನೆಂಟನೇ ಭಗವಂತನನ್ನು ತಲುಪಲು ನಾವು ಈ ಹದಿನೇಳು ಮೆಟ್ಟಿಲುಗಳನ್ನು ಬಳಸಬೇಕು. ಭಾರತೀಯ ತತ್ವಶಾಸ್ತ್ರದ ಅತ್ಯಂತ ಮಹತ್ವದ ಸಂಖ್ಯೆ ಹದಿನೆಂಟು. ಇದು ತತ್ವಶಾಸ್ತ್ರದ ಎಲ್ಲಾ ರಹಸ್ಯವನ್ನು ಬಸಿರಲ್ಲಿ ಬಚ್ಚಿಟ್ಟುಕೊಂಡ ಸಂಖ್ಯೆ.
ಮಹಾಭಾರತದಲ್ಲಿ ಕೂಡ ಈ ಸಂಖ್ಯಾ ಚಮತ್ಕಾರವನ್ನು ಕಾಣಬಹುದು. ಮಹಾಭಾರತದಲ್ಲಿ ಒಟ್ಟು ಹದಿನೆಂಟು ಪರ್ವಗಳಿವೆ. ಮಹಾಭಾರತದ ಸಾರವಾದ ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿವೆ. ಮಹಾಭಾರತ ಯುದ್ಧ ನಡೆದಿದ್ದು ಹದಿನೆಂಟು ದಿನ. ಯುದ್ಧದಲ್ಲಿ ಪಾಲ್ಗೊಂಡಿದ್ದು ಹದಿನೆಂಟು ಅಕ್ಷೋಹಿಣಿ ಸೈನ್ಯ.
ಮನಃಶಾಸ್ತ್ರೀಯವಾಗಿ ನೋಡಿದಾಗ ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ,ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರನ ಮೂಲಕ ಅಂದರೆ ಅರ್ಜುನನ ಮೂಲಕ ನಮಗೆ ನಾರಾಯಣ ನೀಡಿದ ಗೀತೋಪದೇಶ.
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಇದು ಮಾನವನ ಜೀವನದ ಅಮೂಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ. ಬನ್ನಿ ಇಂತಹ ಅಪೂರ್ವ ಕೃತಿಯನ್ನು ನಮ್ಮ ಯೋಗ್ಯತೆ ಇದ್ದಷ್ಟು ಅರಿಯಲು ಪ್ರಯತ್ನಿಸೋಣ.
ಪ್ರೇರಣೆ – ಬನ್ನಂಜೆ ಗೋವಿಂದಾಚಾರ್ಯರು
ಪ್ರತಿದಿನ ಭಗವದ್ಗೀತೆ ಓದಲು Visit Karunadu Today
Click here to Join Our Whatsapp Group