"ವಿಶ್ವಾಮಿತ್ರ ಹಾಗೂ ರಾಮ ಲಕ್ಷ್ಮಣರ ಮುಂದುವರೆದ ಕಥೆ ಭಾಗ "

ಆಗ ಕುಲಪುರೋಹಿತರಾದ ವಸಿಷ್ಠರು ಮಧ್ಯೆ ಬಂದರು. ದಶರಥನನ್ನು ಕುರಿತು. ”ಮಹಾರಾಜ ! ನೀನು ಆಡಿದ ಮಾತಿಗೆ ತಪ್ಪಬೇಡ. ಹಾಗೆ ಮಾಡಿದರೆ ಲೋಕದಲ್ಲಿ ನಿನಗೆ ಶಾಶ್ವತವಾದ ಕೆಟ್ಟ ಹೆಸರು ಬಂದುಬಿಡುತ್ತದೆ. ವಿಶ್ವಾಮಿತ್ರರ ಅಪೇಕ್ಷೆಯಂತೆ ರಾಮನನ್ನು ಅವರ ಜೊತೆಯಲ್ಲಿ ಕಳುಹಿಸಿಕೊಡು. ಇದರಿಂದ ನಿನಗೆ ಸ್ವಲ್ಪವೂ ಹೆದರಿಕೆ ಬೇಡ ರಾಮನಿಗೆ ರಾಕ್ಷಸರೊಡನೆ ಹೋರಾಡಿ ಅಭ್ಯಾಸವಿಲ್ಲದಿದರೇನಂತೆ, ಅವನು ವಿಶ್ವಾಮಿತ್ರರೊಡನೆ ಇರುವ ತನಕ ರಾಕ್ಷಸರು ಅವನಿಗೆ ಏನನ್ನೂ ಮಾಡಲಾರರು. ವಿಶ್ವಾಮಿತ್ರರನ್ನು ಸಾಮಾನ್ಯ ವ್ಯಕ್ತಿಯೆಂದು ತಿಳಿಯಬೇಡ. ಸಾಕ್ಷಾತ್ ಧರ್ಮವೇ ಅವರ ರೂಪದಲ್ಲಿ ಬಂದಿದೆ. ಅವರು ಮಹಾಪರಾಕ್ರಮಿಗಳೂ ಹೌದು. ಪ್ರಪಂಚದಲ್ಲಿ ಅವರಿಗಿರುವಷ್ಟು ಶಸ್ತ್ರಾಸ್ತ್ರಗಳ ಜ್ಞಾನ ಬೇರಾರಿಗೂ ಇಲ್ಲ. ರಾಕ್ಷಸರನ್ನು ಕೊಲ್ಲುವುದು ವಿಶ್ವಾಮಿತ್ರರಿಗೆ ಅಸಾಧ್ಯವೇನೂ ಅಲ್ಲ. ಒಂದೇ ಘಳಿಗೆಯಲ್ಲಿ ಅವರನ್ನು ಬೂದಿ ಮಾಡಿ ಬಿಡಬಲ್ಲ ಮಹಾಶಕ್ತಿ ಈ ಬ್ರಹ್ಮರ್ಷಿಗಳಿಗೆ ಇದೆ. ಆದರೆ ರಾಕ್ಷಸರನ್ನು ಕೊಂದ ಕೀರ್ತಿ ನಿನ್ನ ಮಗನಿಗೆ ಬರಬೇಕೆಂಬುದು ಅವರ ಅಪೇಕ್ಷೆ ಅದಕ್ಕಾಗಿಯೇ ಅವರು ನಿನ್ನ ಬಳಿಗೆ ಬಂದಿದ್ದಾರೆ. ಆದ್ದರಿಂದ ಕೊಂಚವೂ ಚಿಂತಿಸದೆ ರಾಮನನ್ನು ಅವರ ಸಂಗಡ ಕಳುಹಿಸಿ ಕೊಡು” ಎಂದರು.

ವಸಿಷ್ಠರ ಮಾತು ಕೇಳಿ ದಶರಥನ ಮನಸ್ಸಿಗೆ ಸಮಾಧಾನವಾಯಿತು. ವಿಶ್ವಾಮಿತ್ರರ ಉದ್ದೇಶ ಅರ್ಥವಾಯಿತು. ಅವನು ಮಹರ್ಷಿಗಳಿಗೆ ನಮಸ್ಕರಿಸಿ ಕ್ಷಮೆ ಕೋರಿದ. ನಂತರ ರಾಮ, ಲಕ್ಷ್ಮ ಣರನ್ನು ಬರಮಾಡಿಕೊಂಡ. ವಿಶ್ವಾಮಿತ್ರರು ಆಸ್ಥಾನಕ್ಕೆ ಬಂದಿರುವ ಉದ್ದೇಶವನ್ನು ಅವರಿಗೆ ತಿಳಿಸಿದ “ನೀವಿಬ್ಬರೂ ಈ ಮಹರ್ಷಿಗಳ ಜೊತೆ ಹೋಗಿ ಬನ್ನಿ” ಎಂದ. ರಾಮ, ಲಕ್ಷ್ಮ ಣರಿಬ್ಬರೂ ತಂದೆಯ ಮಾತನ್ನು ನಗುಮೊಗ ದಿಂದ ಆಲಿಸಿದರು. “ಆಗಲಿ ಮಹಾರಾಜ ! ಮಹರ್ಷಿಗಳ ಜೊತೆ ಹೋಗಿ ಬರುತ್ತೇವೆ.” ಎಂದರು. ವಸಿಷ್ಠ, ಮಿಶ್ವಾಮಿತ್ರರಿಗೂ, ದಶರಥ ಮಹಾರಾಜನಿಗೂ, ಆಸ್ಥಾನದಲ್ಲಿದ್ದ ಇತರ ಹಿರಿಯರಿಗೂ ನಮಸ್ಕರಿಸಿದರು. ಅಂತಃಪುರಕ್ಕೆ ಹೋಗಿ ಮೂವರು ತಾಯಂದಿರಿಗೂ ನಮಸ್ಕರಿಸಿ ಆಶೀರ್ವಾದ ಪಡೆದರು. ನಂತರ ಬಿಲ್ಲು ಬಾಣಗಳನ್ನು ಧರಿಸಿ ವಿಶ್ವಾಮಿತ್ರರ ಹಿಂದೆ ಹೊರಟರು.ಮೂವರೂ ನಡೆಯುತ್ತಾ ಹೋದರು. ವಿಶ್ವಾಮಿತ್ರರು ರಾಜಕುಮಾರರಿಗೆ ದಾರಿಯ ಬೇಸರವಾಗದಂತೆ ಅನೇಕ ಕಥೆಗಳನ್ನು ಹೇಳುತ್ತ ಬಂದರು. ಪ್ರಯಾಣ ಮಾರ್ಗದಲ್ಲಿ ಸಿಕ್ಕಿದ ಎಲ್ಲ ಊರುಗಳ, ನದಿಗಳ, ಪರ್ವತಗಳ ಚರಿತ್ರೆಗಳನ್ನು ತಿಳಿಸಿದರು. ರಾಮ-ಲಕ್ಷ್ಮಣರಿಗೂ ಇದೊಂದು ಹೊಸ ಅನುಭವ. ಅವರು ಆಸಕ್ತಿ ಉತ್ಸಾಹಗಳಿಂದ ವಿಶ್ವಾಮಿತ್ರರು ಹೇಳುತ್ತಿದ್ದ ವಿಷಯಗಳನ್ನು ಕೇಳುತ್ತಿದ್ದರು. ‘ಇದುಹೇಗೆ? ಅದು ಏನು?’ ಎಂದು ಪ್ರಶ್ನೆಗಳನ್ನು ಕೇಳಿ ಸಂಶಯ ಬಗೆಹರಿಸಿಕೊಳ್ಳುತ್ತಿದ್ದರು. ಹಾಗೆಯೇ ಸುಮಾರು ಒಂದೂವರೆ ಯೋಜನ ನಡೆದ ಮೇಲೆ, ಸರಯೂ ನದಿಯ ದಕ್ಷಿಣ ತೀರಕ್ಕೆ ಬಂದರು.

ವಿಶ್ವಾಮಿತ್ರರು ರಾಮನನ್ನು ಹತ್ತಿರ ಕೂಡಿಸಿಕೊಂಡು, “ರಾಜಕುಮಾರ, ನೀನು ಈ ಪುಣ್ಯ ನದಿಯ ಜಲವನ್ನು ಆಚಮನ ಮಾಡು ಎಲ್ಲ ಜ್ಞಾನಗಳಿಗೂ ತಾಯಿ ಯಂತಿರುವ ಬಲ ಮತ್ತು ಅತಿಬಲ ಎಂಬ ಮಂತ್ರಗಳನ್ನು ಉಪದೇಶಿಸುತ್ತೇನೆ. ಮಂತ್ರಗಳ ಮಹಿಮೆಯಿಂದ ನಿನಗೆ ಆಯಾಸವೇ ಆಗುವುದಿಲ್ಲ ಹಸಿವು, ಬಾಯಾರಿಕೆಗಳ ಬಾಧೆ ಇರುವುದಿಲ್ಲ. ನೀನು ನಿದ್ರಿಸುತ್ತಿರುವಾಗ ರಾಕ್ಷಸರು ನಿನ್ನ ಸಮೀಪಕ್ಕೂ ಬರಲು ಸಾಧ್ಯವಾಗುವುದಿಲ್ಲ. ಬಾಹುಬಲದಲ್ಲಿ ಯಾರೂ ನಿನ್ನನ್ನು ಮೀರಿಸಲಾಗುವುದಿಲ್ಲ. ಈ ಮಂತ್ರಗಳ ಪ್ರತಿನಿತ್ಯದ ಪಠಣದಿಂದ ನೀನು ಯಶೋವಂತನೂ ಕೀರ್ತಿವಂತನೂ ಆಗುತ್ತೀಯೆ” ಎಂದು ಹೇಳಿದರು. ರಾಮನು ವಿಶ್ವಾಮಿತ್ರರ ಆದೇಶದಂತೆ ನದಿಯಲ್ಲಿ ಸ್ನಾನ ಮಾಡಿ ಆಚಮನ ಮಾಡಿದನು. ‘ಬಲ’ ಮತ್ತು ‘ಅತಿಬಲ’ ಎಂಬ ಆ ಮಂತ್ರಗಳ ಉಪದೇಶ ಪಡೆದನು. ಇದರಿಂದ ಅವನ ಬಲವೂ, ತೇಜಕ್ಕೂ ಇಮ್ಮಡಿಸಿದವು. ಆ ರಾತ್ರಿಯನ್ನು ಅವರು ಸರಯೂ ನದಿಯ ದಡದಲ್ಲೇ ಕಳೆದರು. ಮೂವರೂ ಹುಲ್ಲು- ಹೊಟ್ಟುಗಳ ಹಾಸಿಗೆಯನ್ನು ಮಾಡಿಕೊಂಡು ಅದರ ಮೇಲೆ ಮಲಗಿಕೊಂಡರು. “ನಾವು ರಾಜಕುಮಾರರು; ಇಷ್ಟು ದಿನ ಅರಮನೆಯಲ್ಲಿ ಸುಪ್ಪತ್ತಿಗೆಯ ಮೇಲೆ ಮಲಗುತ್ತಿದ್ದೆವು. ಈಗ ನದಿಯ ಬಯಲಿನಲ್ಲಿ ಹುಲ್ಲಿನ ಮೇಲೆ ಮಲಗಿದ್ದೇವ’ ಎಂದು ರಾಮ-ಲಕ್ಷ್ಮಣರಿಗೆ ಅನ್ನಿಸಲೇ ಇಲ್ಲ. ಮೇಲೆ ಭವ್ಯವಾದ ಆಕಾಶದಲ್ಲಿ ಅಸಂಖ್ಯಾತ ನಕ್ಷತ್ರಗಳು ಮಿನುಗುತ್ತಿದ್ದವು. ಪಕ್ಕದಲ್ಲಿಯೇ ಸರಯೂ ನದಿ ಹರಿಯುತ್ತಿದ್ದ ಇಂಪಾದ ಜುಳುಜುಳು ನಿನಾದದ ಜೋಗುಳ, ವಿಶ್ವಾಮಿತ್ರರು ಮೃದು ಧ್ವನಿಯಲ್ಲಿ ಹೇಳುತ್ತಿದ್ದ ಮಧುರವಾದ ಕಥೆಗಳನ್ನು ಆಲಿಸುತ್ತಿದ್ದರು. ಹಾಗೆಯೇ ಬೊಂಪು ಹತ್ತಿತು. ಹಾಯಾಗಿ ನಿದ್ದೆಹೋದರು.

ರಾತ್ರಿ ಕಳೆಯಿತು. ಬೆಳಗಾಯಿತು. ಹುಲ್ಲಿನ ಹಾಸಿಗೆಯ ಮೇಲೆ ಸುಖವಾಗಿ ನಿದ್ರಿಸುತ್ತಿದ್ದ ರಾಮ-ಲಕ್ಷ್ಮಣರನ್ನು ವಿಶ್ವಾಮಿತ್ರರು ಎಬ್ಬಿಸಿದರು. “ರಾಮ, ಕೌಸಲ್ಯಯ ಸುಪುತ್ರ! ಬೆಳಗಾಗುತ್ತ ಬಂತು ಏಳು. ಸ್ನಾನ-ಸಂಧ್ಯಾವಂದನಾದಿ ಕಾರ್ಯಗಳನ್ನು ಮಾಡು” ಎಂದು ಮಧುರ ಕಂಠದಿಂದ ನುಡಿದರು. ರಾಮ- ಲಕ್ಷ್ಮಣರು ಕೂಡಲೇ ಎದ್ದರು. ಸ್ನಾನ ಮಾಡಿದರು. ಸೂರ್ಯ ಭಗವಾನನಿಗೆ ಅರ್ಥ್ಯವನ್ನಿತ್ತರು. ಗಾಯತ್ರಿ ಮಂತ್ರವನ್ನು ಜಪಿಸಿದರು. ಸಂಧ್ಯಾವಂದನೆ ಮುಗಿಸಿ ವಿಶ್ವಾಮಿತ್ರರಿಗೆ ನಮಸ್ಕರಿಸಿದರು.ಆನಂತರ ಮೂವರು ಪಯಣವನ್ನು ಮುಂದುವರಿಸಿದರು. ದಾರಿಯಲ್ಲಿ ಹೋಗುತ್ತ ಒಂದು ದೊಡ್ಡ ಸಂಗಮ ಸ್ಥಳವನ್ನು ಕಂಡರು. ಅಲ್ಲಿ ಸರಯೂ ನದಿ ಮತ್ತು ಗಂಗಾ ನದಿಗಳು ಸಂಗಮಿಸುತ್ತಿದ್ದವು. ಆ ಸಂಗಮ ಸ್ಥಳದಲ್ಲಿ ಅನೇಕ ಪುಣ್ಯಾಶ್ರಮ ಗಳಿದ್ದವು. ಆ ಆಶ್ರಮಗಳನ್ನು ಕಂಡು ರಾಮ-ಲಕ್ಷ್ಮಣರ ಕುತೂಹಲ ಕೆರಳಿತು. ಅವರು ವಿಶ್ವಾಮಿತ್ರರನ್ನು ಕುರಿತು ‘ಪೂಜ್ಯರೇ ! ಇವು ಯಾರ ಆಶ್ರಮಗಳು? ಇಲ್ಲಿ ಯಾವ ಮುನಿಗಳಿದ್ದಾರೆ ? ಈ ಸ್ಥಳದ ಮಹಿಮೆಯನ್ನು ನಮಗೆ ತಿಳಿಸಿ ಹೇಳಿರಿ” ಎಂದು ಪ್ರಾರ್ಥಿಸಿದರು. ವಿಶ್ವಾಮಿತ್ರರು ಆ ಪ್ರದೇಶದ ಕಥೆಯನ್ನು ಹೇಳಲಾರಂಭಿಸಿದರು.

ಮುಂದಿನ ಭಾಗ ಪಾರ್ವತಿ ಕಲ್ಯಾಣ…

Follow Karunadu Today for more Spiritual Stories.

Click here to Join Our Whatsapp Group