ವಿಘ್ನೇಶ್ವರ ಗಣಪತಿ ಗಣೇಶ ಲಂಬೋದರ ಏಕದಂತ ಎಂದೇ ಹಲವಾರು ಹೆಸರುಗಳಿಂದ ಕರೆಯಲ್ಪಡುವ ವಿನಾಯಕನಿಗೆ ಹಿಂದೂ ಧರ್ಮದ ದೇವಾನುದೇವತೆಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವಿದೆ . ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ದೇವರಾಗಿದೆ ಗಣೇಶನ ಆಜ್ಞೆ ಇಲ್ಲದೆ ಯಾವುದೇ ರೀತಿಯ ಕಾರ್ಯಕ್ರಮಗಳು ನಡೆಯಲಾಗದು. ಏಕೆಂದರೆ ಯಾವುದಾದರೂ ಒಂದು ಕೆಲಸ ಆಗಬೇಕೆಂದರೆ ಮೊದಲು ವಿನಾಯಕನಿಗೆ ಪೂಜೆ ಸಲ್ಲಿಸಿ ಆನಂತರ ಆ ಕಾರ್ಯವನ್ನು ಮಾಡುತ್ತಾರೆ. ವಿನಾಯಕನಿಗೆ ಪೂಜೆ ಸಲ್ಲಿಸುವುದರಿಂದ ಯಾವುದೇ ರೀತಿಯ ಸಂಕಷ್ಟಗಳು ಬರುವುದಿಲ್ಲ ಎನ್ನುವುದು ನಂಬಿಕೆ ಇದೆ.

ಅದೇ ರೀತಿ ಯಾವುದೇ ಜಾತಿ ಧರ್ಮ ಭೇದಭಾವ ಇಲ್ಲದೆ ಪೂಜಿಸಲ್ಪಡುವ ಏಕೈಕ ದೇವರೆಂದರೆ ಅದು ವಿನಾಯಕ ಮಾತ್ರ, ಈ ವಿನಾಯಕನನ್ನು ಪೂಜಿಸದೇ ಇರುವ ಮನೆಗಳಿಲ್ಲ. ಭಾರತದಲ್ಲಿರುವಂತಹ ಪ್ರತಿಯೊಂದು ಮನೆಯಲ್ಲಿ ಕೂಡ ವಿನಾಯಕನನ್ನು ನಾವು ಕಾಣಬಹುದು. ವಿನಾಯಕನಿಗೆ ಹಲವಾರು ಗುಣಲಕ್ಷಣಗಳಿದ್ದರೂ ಕೂಡ  ಆನೆಯ ತಲೆ ಹಾಗೂ ನಾಲ್ಕು ಕೈಗಳಿಂದ ಸುಲಭವಾಗಿ ಗುರುತಿಸಿಕೊಳ್ಳುತ್ತಾನೆ.

ಗಣೇಶನು ಪಂಥವಿಲ್ಲದ ದೇವರು. ಎಲ್ಲಾ ಪಂಗಡಗಳ ಹಿಂದೂಗಳು ಪ್ರಾರ್ಥನೆಗಳು, ಪ್ರಮುಖ ಕಾರ್ಯಗಳು ಮತ್ತು ಧಾರ್ಮಿಕ ಸಮಾರಂಭಗಳ ಆರಂಭದಲ್ಲಿ ಅವರನ್ನು ಆಹ್ವಾನಿಸುತ್ತಾರೆ.ನೃತ್ಯಗಾರರು ಮತ್ತು ಸಂಗೀತಗಾರರು, ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಗಣೇಶನ ಪ್ರಾರ್ಥನೆಯೊಂದಿಗೆ ಭರತನಾಟ್ಯ ನೃತ್ಯದಂತಹ ಕಲಾ ಪ್ರದರ್ಶನಗಳನ್ನು ಪ್ರಾರಂಭಿಸುತ್ತಾರೆ. ಓಂ ಶ್ರೀ ಗಣೇಶಾಯ ನಮಃ (ಓಂ, ಸುಪ್ರಸಿದ್ಧ ಗಣೇಶನಿಗೆ ನಮಸ್ಕಾರ) ನಂತಹ ಮಂತ್ರಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಗಣೇಶನಿಗೆ ಸಂಬಂಧಿಸಿದ ಅತ್ಯಂತ ಪ್ರಸಿದ್ಧ ಮಂತ್ರವೆಂದರೆ ಓಂ ಗಂ ಗಣಪತಯೇ ನಮಃ

ಗಣಪತಿ ಮತ್ತು ಕುಮಾರಸ್ವಾಮಿಯ ಮಧ್ಯೆ ತಾವಿಬ್ಬರಲ್ಲಿ ಬುದ್ಧಿ ಕುಶಲತೆಯಲ್ಲಿ ಯಾರು ಅಧಿಕರು (ಚತುರರು) ಎಂಬ ವಾದ ಉಂಟಾಯ್ತು. ಈ ವಾದ ವಿವಾದವಾಗಿ ಇಬ್ಬರೂ ಆದಿ ದಂಪತಿಗಳಾದ ತಮ್ಮ ತಾಯಿ ತಂದೆಗೆ ತಮ್ಮ ವಿವಾದವನ್ನು ಹೇಳಿ ತೀರ್ಮಾನಿಸಲು ಕೇಳುತ್ತಾರೆ. ಇದರಿಂದ ಶಿವ ಪಾರ್ವತಿಯು ವಿನಾಯಕನಿಗೂ, ಕುಮಾರಸ್ವಾಮಿಗೂ ಪರೀಕ್ಷೆಯನ್ನಿಡುತ್ತಾರೆ. ಯಾರು ಮೂರು ಲೋಕಗಳನ್ನೂ ಮೂರು ಸಾರಿ ಪ್ರದಕ್ಷಿಣೆ ಮಾಡಿ ಮೊದಲು ತಮ್ಮ ಹತ್ತಿರ ಬರುವರೋ ಅವರೇ ನಿಮ್ಮಲ್ಲಿ ಬುದ್ದಿವಂತರೂ ಅಧಿಕರೂ ಎಂದು ಅರ್ಧನಾರೀಶ್ವರರು ಹೇಳುತ್ತಾರೆ. ಅದನ್ನು ಹೇಳುತ್ತಿದ್ದಂತೆ  ಕುಮಾರಸ್ವಾಮಿಯು ತನ್ನ ನವಿಲು ವಾಹನದ ಮೇಲೆ ವೇಗವಾಗಿ ಹೊರಡುತ್ತಾನೆ. ವಿನಾಯಕನು ತಂದೆ ತಾಯಿ ಸುತ್ತಲೂ ಮೂರು ಪ್ರದಕ್ಷಿಣೆ ಮಾಡುತ್ತಾನೆ. ತಾಯಿ ತಂದೆಯ ಸುತ್ತ ಪ್ರದಕ್ಷಿಣೆ ಮೂರುಲೋಕಗಳ ಸುತ್ತಿದ ಫಲ. ವಿನಾಯಕನು ತಾನೇ ಮೊದಲು ಮೂರು ಲೋಕಗಳನ್ನು ಸುತ್ತಿದನೆಂದು ಹೇಳುತ್ತಾನೆ. ಆದುದರಿಂದಲೇ ವಿನಾಯಕನ ಸುತ್ತಲೂ ಮೂರು ಪ್ರದಕ್ಷಿಣೆ ಮಾಡಿದರೆ ಎಲ್ಲಾ ಲೋಕಗಳನ್ನು ಸುತ್ತಿದ ಫಲದೊಂದಿಗೆ ತಂದೆ ತಾಯಿಯ ಸುತ್ತಲೂ ಮಾಡುವ ಪ್ರದಕ್ಷಿಣೆಯ ಪುಣ್ಯ ಫಲವೂ ಸಿಗುವುದು.

ಮತ್ತೊಂದು ಕಥೆಯ ಅನುಸಾರ ತಾನು ದಪ್ಪ ಉದರದವನಾದುದರಿಂದ ತನ್ನ ತಮ್ಮನ ವಾಹನ ನವಿಲುಗಿಂತಲೂ ತನ್ನ ವಾಹನ ಮೂಷಿಕ ವೇಗವಾಗಿ ಚಲಿಸದೆಂದು ತಾಯಿಯನ್ನು ಪ್ರಾರ್ಥಿಸಿದಾಗ ಪಾರ್ವತೀ ದೇವಿಯೂ ತನ್ನ ಹಿರಿಯ ಮಗನ ಮೇಲಿನ ಪ್ರೀತಿಯಿಂದ ಈ ಪುಣ್ಯ ರಹಸ್ಯವನ್ನು ಹೇಳಿದಳೆಂದು ಹೇಳುತ್ತಾರೆ. ಆದರೆ ಆದಿ ದಂಪತಿಗಳು ಧರ್ಮವನ್ನು ತಪ್ಪುವುದಿಲ್ಲ. ಯಾರ ವಿಷಯದಲ್ಲಾಗಲೀ ವಿನಾಯಕನು ಧರ್ಮಪುಣ್ಯ ಸೂಕ್ಷ್ಮವನ್ನು ಆಚರಿಸಿದುದರಿಂದಲೇ ಅವನು ಎಲ್ಲದರಲ್ಲೂ ಅಧಿಕನೆಂದೂ ನಿರ್ಣಯಿಸುತ್ತಾರೆ.

Follow Karunadu Today for more Spiritual Informations  like this

Click here to Join Our Whatsapp Group