
ಇಂದು ನಮ್ಮ ಭೂಮಿಯ ಮೇಲಿರುವ ಮರಗಳ ನಾಶಕ್ಕೆ ನಾವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣರಾಗಿದ್ದೇವೆ. ರಸ್ತೆ ಆಗಲೀಕರಣದ ಹೆಸರಲ್ಲಿ ಇರಬಹುದು, ಕಟ್ಟಡಗಳ ನಿರ್ಮಾಣಕ್ಕೆ ಇರಬಹುದು ಹೀಗೆ ಇನ್ನು ಅನೇಕ ಕಾರಣಗಳಿಗಾಗಿ ಈ ಮರಗಳನ್ನು ಪ್ರಪಂಚದೆಲ್ಲೆಡೆ ಕಡಿಯಲಾಗುತ್ತಿದೆ. ಅಭಿವೃದ್ದಿಯ ಹೆಸರಲ್ಲಿ ಈ ರೀತಿ ಮರಗಳನ್ನು ಕಡಿಯುತ್ತಿರುವ ಮನುಷ್ಯನು ನಿಧಾನವಾಗಿ ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳುತ್ತಿದ್ದಾನೆ. ಮರಗಳ ಸಂಖ್ಯೆ ಕಡಿಮೆ ಆದಂತೆಲ್ಲ ಭೂಮಿಯ ಮೇಲೆ ತಾಪಮಾನ ಹೆಚ್ಚಾಗುತ್ತ ಹೋಗುತ್ತದೆ ಇದರಿಂದ ಉಸಿರಾಡುವುದಕ್ಕೆ ಆಮ್ಲಜನಕದ ತೊಂದರೆ ಆಗುತ್ತದೆ. ಆದರೆ ನೆನಪಿರಲಿ ಭೂಮಿಯ ಮೇಲೆ ನಾವುಗಳಷ್ಟೇ ಅಲ್ಲ ನಮ್ಮ ಹಾಗೆ ಕೋಟ್ಯಾನು ಕೋಟಿ ಜೀವಿಗಳು ಈ ಆಮ್ಲಜನಕವನ್ನು ನಂಬಿಕೊಂಡು ಬದುಕಿವೆ. ಇದು ತಿಳಿದಿದ್ದರು ಕೂಡ ಮನುಷ್ಯನು ಮರಗಳನ್ನು ಕಡಿಯುತ್ತಿದ್ದಾನೆ.ಆದರೆ ಕೆಲವು ಜನರು ಭೂಮಿಯ ಮೇಲೆ ಇದ್ದು ಈ ಪ್ರಕೃತಿಯನ್ನು ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಮರಗಳನ್ನು ಕಡಿಯುವ ಗುಂಪು ಒಂದೆಡೆ ಇದ್ದರೆ ಇನ್ನೊಂದೆಡೆ ಮರಗಳನ್ನು ಬೆಳೆಸಿ ಭೂಮಿಯ ಮೇಲೆ ಎಲ್ಲಾ ಮನುಷ್ಯರು ಪ್ರಕೃತಿಯನ್ನು ನಾಶ ಮಾಡುವವರಲ್ಲ ಎಂದು ನಿರೂಪಿಸಿದವರು ಇನ್ನೊಂದೆಡೆ. ಇಂದು ನಿಮಗೆ ಈ ರೀತಿ ಮರಗಳನ್ನು ನೆಟ್ಟು ಪ್ರಕೃತಿಯನ್ನು ಉಳಿಸಿದ ಕೆಲ ಭಾರತೀಯ ವ್ಯಕ್ತಿಗಳ ಬಗ್ಗೆ ತಿಳಿಸುತ್ತೇವೆ ಮುಂದೆ ಓದಿ.
1. ಸಾಲುಮರದ ತಿಮ್ಮಕ್ಕ

ಈ ಹೆಸರನ್ನು ಕೇಳಿದರೆ ಸಾಕು ಕರ್ನಾಟಕದ ಜನರು ಹೆಮ್ಮೆ ಪಡುತ್ತಾರೆ. 106 ವರ್ಷದ ಒಬ್ಬ ವೃದ್ದೆಯು ಶಿವಮೊಗ್ಗ ಜಿಲ್ಲೆಯ ಹುಲಿಕಲ್ ಮತ್ತು ರಾಮನಗರ ಜಿಲ್ಲೆಯ ಕುಡೂರ್ ಮಧ್ಯೆ ಇರುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಬರೋಬ್ಬರಿ 4 ಕಿಲೋಮೀಟರ್ ವರೆಗೂ 385 ಬನ್ಯನ್ ಮರಗಳು ಸೇರಿದಂತೆ 8000 ಮರಗಳನ್ನು ಇವರೊಬ್ಬರೇ ಬೆಳೆಸಿದ್ದಾರೆ. ತನಗೆ ಮಕ್ಕಳು ಇಲ್ಲದಿದ್ದರಿಂದ ಆ ನೋವನ್ನು ಮರೆಯಲು ಮರಗಳನ್ನು ಬೆಳೆಸಲು ನಿರ್ಧರಿಸಿದ ಇವರು ಇಂದು ಸಾವಿರಾರು ಮರಗಳ ತಾಯಿಯಾಗಿದ್ದಾರೆ. ಇವರ ಈ ಸಾಧನೆಗೆ ಭಾರತ ಸರ್ಕಾರವು ಅನೇಕ ಪ್ರಶಸ್ತಿ ನೀಡಿದ್ದು ಇತ್ತೀಚೆಗೆ “ಪದ್ಮಶ್ರೀ ಪ್ರಶಸ್ತಿಯನ್ನು” ಕೂಡ ಇವರಿಗೆ ನೀಡಿ ಸತ್ಕರಿಸಿದೆ.
2. ದೀಪಕ್ ಗೌರ್

ಗುರುಗಾವ್ ನಗರದ ಜನರು ಇವರನ್ನು “Tree Man” ಎಂದು ಕರೆಯುತ್ತಾರೆ. 37 ವರ್ಷದ ಈ ವ್ಯಕ್ತಿಯು 2010 ರಿಂದ ಬರೋಬ್ಬರಿ 47 ಸಾವಿರ ಸಸಿಗಳನ್ನು ನೆಟ್ಟು ಅವುಗಳನ್ನು ಕಾಪಾಡುತ್ತಿದ್ದಾರೆ. ತಮ್ಮ ಜೀವನದಲ್ಲಿ ಆದ ಅಪಘಾತದಿಂದ ಮರಗಳ ಬೆಲೆಯನ್ನು ತಿಳಿದುಕೊಂಡ ಇವರು ಅಂದಿನಿಂದ ಈ ರೀತಿ ಸಸಿಗಳನ್ನು ನೆಡಲು ಶುರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಷಾಂತರ ಮರಗಳನ್ನು ಬೆಳೆಸುವ ಯೋಜನೆ ಇವರದ್ದಾಗಿದೆ.
3. ಜಾದವ್ ಮೊಲೈ ಪಯೆಂಗ್

ಇವರನ್ನು “Forest man of india” ಎಂದು ಕರೆಯುತ್ತಾರೆ. ಬ್ರಹ್ಮಪುತ್ರ ನದಿ ದಂಡೆಯ ಮೇಲೆ ಬರೋಬ್ಬರಿ 1360 ಎಕರೆ ಜಾಗದಲ್ಲಿ 1979 ರಿಂದ ಮರಗಳನ್ನು ಬೆಳೆಸುತ್ತಾ ಬಂದಿರುವ ಇವರು ಬೃಹತ್ ಅರಣ್ಯವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸಾಧನೆಯನ್ನು ಪರಿಗಣಿಸಿ ಇಂದು ಆ ಅಭಯಾರಣ್ಯವನ್ನು “ಮೊಲೈ ಅಭಯಾರಣ್ಯ” ಎಂದು ಹೆಸರಿಡಲಾಗಿದೆ. 2015 ರಲ್ಲಿ ಇವರ ಸಾಧನೆಯನ್ನು ಪರಿಗಣಿಸಿ “ಪದ್ಮಶ್ರೀ ಪ್ರಶಸ್ತಿ” ಯನ್ನು ಭಾರತ ಸರ್ಕಾರ ನೀಡಿತು.
4. ಪಮೇಲಾ ಮತ್ತು ಅನಿಲ್ ಮಲ್ಹೋತ್ರ

ಈ ಜೋಡಿಯು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ತಮ್ಮದೇ ಆದ 300 ಎಕರೆ ಅರಣ್ಯ ಪ್ರದೇಶವನ್ನು ಬೆಳೆಸಿದ್ದಾರೆ. ಆದರೆ ಇವರು ಪಟ್ಟ ಶ್ರಮ ಮಾತ್ರ ಅಷ್ಟಿಷ್ಟಲ್ಲ. ಅಮೆರಿಕದಲ್ಲಿ ಇದ್ದ ಈ ಜೋಡಿಯು ಪರಸ್ಪರ ಪ್ರೀತಿಸಿ ಮದುವೆಯಾದವರು. ಒಂದು ಕಾಡನ್ನು ಬೆಳೆಸಬೇಕು ಎನ್ನುವುದು ಇವರಿಬ್ಬರ ಕನಸಾಗಿತ್ತು. ಅದಕ್ಕೆಂದೆ ಅಮೆರಿಕದ “ಹವಾಯಿ” ಮತ್ತು ಉತ್ತರ ಭಾರತದ “ಉತ್ತರಾಖಾಂಡ” ದಲ್ಲಿ ಸ್ವಲ್ಪ ಜಾಗವನ್ನು ಖರೀದಿಸಿ ಮರಗಳನ್ನು ಬೆಳೆಸಲು ಶ್ರಮ ಪಟ್ಟಿದ್ದರು. ಆದರೆ ನಾನಾ ಕಾರಣಗಳಿಂದ ಇವರ ಕನಸಿಗೆ ಅನೇಕ ದುಷ್ಟ ವ್ಯಕ್ತಿಗಳು ಕಲ್ಲು ಹಾಕಿದ್ದರು. ಇದರಿಂದ ದೃತಿಗೆಡದೆ ಹೇಗಾದರೂ ಮಾಡಿ ತಮ್ಮ ಗುರಿಯನ್ನು ಮುಟ್ಟಬೇಕು ಎಂದು ದಕ್ಷಿಣ ಭಾರತದ ಕಡೆ ಬಂದಾಗ ಇವರ ಕನಸಿಗೆ ಸಹಾಯವಾಗಿದ್ದು ನಮ್ಮ ಕೊಡಗು ಜಿಲ್ಲೆ. ಕೊಡಗು ಜಿಲ್ಲೆಯಲ್ಲಿ ಕೆಲ ಭೂಮಿಯಲ್ಲಿ ಬೆಳೆ ಬೆಳೆಯಲು ರೈತರು ಕಷ್ಟ ಪಡುತ್ತಿದ್ದರು, ಅಲ್ಲಿನ ವಾತಾವರಣವು ಬೆಳೆ ಬೆಳೆಯಲು ತುಂಬಾ ಅಡ್ಡಿ ಮಾಡುತ್ತಿತ್ತು. ಇದರಿಂದ ಭೂಮಿಯನ್ನು ಮಾರಲು ರೈತರು ತುದಿಗಾಲಲ್ಲಿ ಕಾಯುತ್ತಿದ್ದರು. ಇದೆ ಸಮಯದಲ್ಲಿ ಈ ಜೋಡಿಯು ಆ ಭೂಮಿಗಳನ್ನು ಖರೀದಿಸಿ ಅಲ್ಲಿ ಮರಗಳನ್ನು ಬೆಳೆಸಲು ನಿರ್ಧರಿಸಿದರು. ಹೀಗೆ ರೈತರು ನೀಡಿದ ಭೂಮಿಯನ್ನು ಖರೀದಿಸುತ್ತ ಇಂದು ಬರೋಬ್ಬರಿ 300 ಎಕರೆ ಜಾಗದಲ್ಲಿ ಮರಗಳನ್ನು ಬೆಳೆಸಿ ಅನೇಕ ವನ್ಯ ಜೀವಿಗಳಿಗೆ ಆಶ್ರಯವಾಗುವ ಹಾಗೆ ಮಾಡಿದ್ದಾರೆ ಈ ಜೋಡಿಗಳು.
5. ಯೋಗನಾಥನ್

ತಮಿಳುನಾಡಿನ ಕೊಯಮ್ಮತ್ತೂರ್ ಜಿಲ್ಲೆಯಲ್ಲಿ “ಬಸ್ ಕಂಡಕ್ಟರ್” ಆಗಿ ಕೆಲಸ ಮಾಡುತ್ತಿರುವ ಇವರು ಬಿಡುವಿನ ವೇಳೆಯಲ್ಲಿ ಹತ್ತಿರದ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಮರಗಳನ್ನು ನೆಡುವ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಂದು ಮಗುವಿನ ಕೈಯಿಂದ ಸಸಿಗಳನ್ನು ನೆಡೆಸಿ ಆ ಸಸಿಗಳಿಗೆ ಮಕ್ಕಳ ಹೆಸರನ್ನು ಇಡುತ್ತಿದ್ದಾರೆ. ಈ ಕೆಲಸವನ್ನು 1980ರಿಂದ ಮಾಡುತ್ತಿರುವ ಇವರು ಇದುವರೆಗೂ ಬರೋಬ್ಬರಿ 3 ಲಕ್ಷ ಮರಗಳನ್ನು ತಮಿಳುನಾಡಿನ 32 ಜಿಲ್ಲೆಗಳಲ್ಲಿ ಬೆಳೆಸಿದ್ದಾರೆ.
ಇದೇ ತರಹ ಅನೇಕ ಜನರು ನಮ್ಮ ದೇಶದಲ್ಲಿ ಇದ್ದು ಪ್ರಕೃತಿಯನ್ನು ಉಳಿಸಲು ಶ್ರಮ ಪಡುತ್ತಿದ್ದಾರೆ. ಇವರ ಹಾಗೆ ನಾವುಗಳು ಕೂಡ ಕನಿಷ್ಟಪಕ್ಷ 10 ಮರಗಳನ್ನು ಬೆಳೆಸುತ್ತ ಹೋದರೂ ಸಾಕು ಭೂಮಿಯ ಮೇಲೆ ಮತ್ತೆ ಹಸಿರು ವಾತಾವರಣ ನಿರ್ಮಾಣವಾಗುತ್ತದೆ. ಬುದ್ದಿ ಜೀವಿಗಳಾದ ನಾವುಗಳೆ ನಮ್ಮ ಈ ಭೂಮಿಯನ್ನು ಕಾಪಾಡಿಕೊಳ್ಳದಿದ್ದರೆ ಮುಂದೊಂದು ದಿನ ಈ ಸುಂದರವಾದ ಗ್ರಹದ ವಿನಾಶ ಕಟ್ಟಿಟ್ಟ ಬುತ್ತಿ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ
Follow Karunadu Today for more Interesting Facts & Stories.
Click here to Join Our Whatsapp Group