"ಅಧ್ಯಾತ್ಮಿಕ ಕಥೆಗಳು"

ಮನ್ಮಥನು ಸರಿಯಾದ ಸಮಯ ನೋಡಿ ತನ್ನ ಬಿಲ್ಲಿಗೆ ಹೂವಿನ ಬಾಣಗಳನ್ನು ಹೂಡಿ ಶಿವನ ಮೇಲೆ ಪ್ರಯೋಗಿಸಿದ. ಬಾಣಗಳು ಶಿವನ ಶರೀರವನ್ನು ತಾಗಿದವು. ತನಗಾದ ತಪೋಭಂಗದಿಂದ ಶಿವನಿಗೆ ಅಸಾಧ್ಯ ಕೋಪ ಬಂತು. ಅವನಿಗೆ ಹಣೆಯ ಮೇಲೂ ಒಂದು ಕಣ್ಣಿತ್ತು. ಹಾಗಾಗಿ ಶಿವನಿಗೆ ಹಣೆಗಣ್ಣ ಎಂದೂ ಹೆಸರಿದೆ. ಒಟ್ಟು ಮೂರು ಕಣ್ಣುಗಳಿರುವುದರಿಂದ ತ್ರಿನೇತ್ರ, ಮುಕ್ಕಣ್ಣ ಎಂದೂ ಅವನನ್ನು ಕರೆಯುತ್ತಾರೆ. ಶಿವನಿಗೆ ಕೋಪ ಬಂದಾಗ ಅವನು ತನ್ನ ಹಣೆಗಣ್ಣನ್ನು ತೆರೆಯುತ್ತಿದ್ದ. ಆ ಕಣ್ಣಿನ . ಪ್ರಖರತೆಯಿಂದಾಗಿ ಎದುರಿಗಿದ್ದವರು ಸುಟ್ಟು ಬೂದಿಯಾಗಿಬಿಡುತ್ತಿದ್ದರು.

ಮನ್ಮಥನ ಬಾಣದಿಂದ ತಪೋಭಂಗ ಹೊಂದಿದ ಶಿವ ತನ್ನ ಹಣೆಗಣ್ಣನ್ನು ತೆರೆದನು. ಮರೆಯಲ್ಲಿ ನಿಂತು ಈ ದೃಶ್ಯವನ್ನು ವೀಕ್ಷಿಸುತ್ತಿದ್ದ ಉಳಿದ ದೇವತೆಗಳಿಗೆ ಹೆದರಿಕೆಯಾಯಿತು. ಅವರೆಲ್ಲ ಒಂದೇ ಕಂಠದಿಂದ “ಪ್ರಭೋ, ಕೋಪವನ್ನು ಉಪಸಂಹರಿಸು. ಮನ್ಮಥನನ್ನು ರಕ್ಷಿಸಿ” ಎಂದು ಕೂಗಿಕೊಂಡರು. ಆದರೆ ಅಷ್ಟು
ಹೊತ್ತಿಗಾಗಲೇ ಶಿವನ ಹಣೆಗಣ್ಣಿನಿಂದ ಮಿಂಚಿನಂತೆ ಸಿಡಿಲಿನ ಸಂಚಾರವಾಗಿ ಮನ್ಮಥ ನನ್ನು ಸುಟ್ಟು ಬಿಟ್ಟಿತ್ತು. ಎಲ್ಲರೂ ನೋಡನೋಡುತ್ತಿದ್ದಂತೆಯೇ ಮನ್ಮಥನ ದೇಹ ಬೂದಿ ಯಾಗಿಹೋಯಿತು.

ಆನಂತರ ಶಿವನು ಮತ್ತೆ ತಪಸ್ಸಿಗೆ ತೊಡಗಿದನು ಅವನು ಪಾರ್ವತಿಯ ಕಡೆ ತಿರುಗಿಯೂ ನೋಡಲಿಲ್ಲ. ಇದರಿಂದ ದೇವತೆಗಳಿಗೆ ಬಹಳ ನಿರಾಸೆಯಾಯಿತು.

ಪಾರ್ವತಿಗೂ ಸಹ ಶಿವನು ತನ್ನನ್ನು ಉಪೇಕ್ಷಿಸಿದನೆಂದು ಬಹಳ ದುಃಖವಾಯಿತು. ಆದರೆ ಶಿವನನ್ನು ಮೆಚ್ಚಿಸುವ ಸಲುವಾಗಿ ತಾನು ಅನುಸರಿಸಿದ ರೀತಿ ಸರಿ ಹೋಗಲಿಲ್ಲ. ಎಂದು ಅವಳಿಗನ್ನಿಸಿತು. ದೇವತೆಗಳ ಮನಸ್ಸು ಗೆಲ್ಲಬೇಕಾದರೆ ತ್ಯಾಗ, ತಪಸ್ಸುಗಳೇ ಸಾಧನ ಎಂಬುದು ಅವಳಿಗೆ ಮನವರಿಕೆಯಾಯಿತು “ನನ್ನ ಭಕ್ತಿಯಿಂದಲೇ ಪರಮೇಶ್ವರನನ್ನು ಒಲಿಸಿಕೊಳ್ಳುತ್ತೇನೆ” ಎಂದು ನಿಶ್ಚಯಿಸಿದಳು ಘೋರವಾದ ತಪಸ್ಸಿಗೆ ತೊಡಗಿದಳು.

ದೀರ್ಘವಾದ ಕಠೋರ ತಪಸ್ಸಿನಿಂದಾಗಿ ಪಾರ್ವತಿಯ ದೇಹ ಕೃಶವಾಯಿತು. ಆದರೂ ಅವಳು ಧೃತಿಗೆಡಲಿಲ್ಲ. ಕೇವಲ ಗಾಳಿಯನ್ನೇ ಆಹಾರವಾಗಿರಿಸಿಕೊಂಡು ಶಿವನಲ್ಲಿ ತನ್ನ ಮನಸ್ಸು ನೆಟ್ಟಳು. “ಓಂ ನಮಃ ಶಿವಾಯ’ ಎಂಬುದೇ ಅವಳ ಮಂತ್ರ ವಾಯಿತು. ಅವಳ ಉಚ್ಛಾಸ- ವಿಶ್ವಾಸಗಳಲ್ಲಿಯೂ ‘ಶಿವ’ ‘ಶಿವ’ ಎಂಬ ಧ್ವನಿಯೇ ಕೇಳುತ್ತಿತ್ತು. ಅವಳ ಕಣ್ಣಿಗೆ ಶಿವನೊಬ್ಬನೇ ಗೋಚರಿಸುತ್ತಿದ್ದ ಅವಳ ಕಿವಿಯಲ್ಲಿ ಶಿವನ ಹೆಸರು ಮಾತ್ರ ಕೇಳುತ್ತಿತ್ತು ಅವಳ ಮನಸ್ಸನ್ನು ಶಿವನು ಆಕ್ರಮಿಸಿಬಿಟ್ಟಿದ್ದ. ಹೀಗೆ ಅವಳ ಪಾಲಿಗೆ ಶಿವ ಸರ್ವಮಯನಾಗಿದ್ದ ದಿನೇ ದಿನೇ ಪಾರ್ವತಿಯ ತಪಸ್ಸು ಮತ್ತಷ್ಟು ಉಗ್ರವಾಯಿತು. ಅವಳ ತಪೋಜ್ವಾಲೆ ಇಡೀ ಜಗತ್ತನ್ನು ಆವರಿಸಿತು.

ಪಾರ್ವತಿಯನ್ನು ಇನ್ನು ಹೆಚ್ಚು ಕಾಲ ಪರೀಕ್ಷಿಸಬಾರದೆಂದು ಶಿವನಿಗೆ ಅನ್ನಿಸಿತು. ಅವಳ ಮುಂದೆ ಪ್ರತ್ಯಕ್ಷನಾಗಿ, “ಪಾರ್ವತೀ ! ನಿನ್ನ ಪ್ರೀತಿಗೆ ಮೆಚ್ಚಿದ. ನಾನು ನಿನ್ನವನು” ಎಂದನು. ಪಾರ್ವತಿಗೆ ಹಿಡಿಸಲಾರದಷ್ಟು ಆನಂದವಾಯಿತು. ಅವಳು ಶಿವನ ಪಾದಮುಟ್ಟಿ ನಮಸ್ಕರಿಸಿದಳು.

ಎಲ್ಲ ದೇವತೆಗಳೂ ಬ್ರಹ್ಮದೇವರೊಡನೆ ಅಲ್ಲಿಗೆ ಬಂದರು. ಹಿಮವಂತ ಮನೋರಮೆಯರೂ ಬಂದರು. ಶಿವ- ಪಾರ್ವತಿಯರ ಕಲ್ಯಾಣ ಅತ್ಯಂತ ವೈಭವದಿಂದ

ಆಗ ಮನ್ಮಥನ ಪತ್ನಿ ರತೀದೇವಿಯು ಶಿವನ ಬಳಿಗೆ ಬಂದಳು. ತನ್ನ ಪತಿಯನ್ನು ಕಳೆದುಕೊಂಡ ಅವಳ ದುಃಖ ಹೇಳಲು ಸಾಧ್ಯವಾಗಿತ್ತು, ಅವಳು ಶಿವನ ಪಾದಕ್ಕೆ ಬಿದ್ದು “ಪ್ರಭು ! ನನ್ನ ಪತಿಯನ್ನು ಬದುಕಿಸಿಕೊಡಿ” ಎಂದು ಬೇಡಿಕೊಂಡಳು. ಶಿವನಿಗೆ ಅವಳನ್ನು ಕಂಡು ಬಹಳ ಮರುಕವಾಯಿತು. ಲೋಕಕಲ್ಯಾಣದ ಸದುದ್ದೇಶದಿಂದ ಮನ್ಮಥನು ಪ್ರಾಣತ್ಯಾಗ ಮಾಡಿದ್ದನು. ಆದ್ದರಿಂದ ರತೀದೇವಿಗೆ ಆಗಿದ್ದ ಅನ್ಯಾಯವನ್ನು ಸರಿಪಡಿಸುವುದು ತನ್ನ ಧರ್ಮವಾಗಿತ್ತು.

ಶಿವನು ‘ರತಿದೇವಿ ! ದುಃಖಿಸಬೇಡ. ನಿನ್ನ ಪತಿಯು ಮತ್ತೆ ನಿನ್ನ ಜೊತೆಗೂಡು ವಂತೆ ಮಾಡುತ್ತೇನೆ. ಮನ್ಮಥನ ಶರೀರ ಸುಟ್ಟು ಬೂದಿಯಾಗಿ ಹೋಗಿದೆ. ಆದ್ದರಿಂದ ಅವನ ಶರೀರವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದರೆ ಅವನು ಶರೀರವಿಲ್ಲದೆಯೇ ಸದಾ ಕಾಲಕ್ಕೂ ನಿನ್ನೊಡನೆ ಇರುತ್ತಾನೆ. ವರ್ಷದಲ್ಲಿ ಒಂದು ದಿನ ಅಂದರೆ ನಾನು ಅವನನ್ನು ದಹಿಸಿದ ದಿನ ಮಾತ್ರ ಅವನು ತನ್ನ ಮೊದಲ ರೂಪ ಧರಿಸಿ ನಿನ್ನೊಡನೆ ವಿಹರಿಸುತ್ತಾನೆ. ಹೀಗೆ ಅಂಗಗಳನ್ನು ಕಳೆದುಕೊಂಡ ಅವನು ಅನಂಗ ಎಂದು ಪ್ರಸಿದ್ದ ನಾಗುತ್ತಾನೆ. ಇನ್ನು ಮುಂದೆಯೂ ಅವನು ಕಾಮದೇವತೆಯಾಗಿರುತ್ತಾನೆ” ಎಂದನು. ರತೀದೇವಿಗೆ ಇದರಿಂದ ಎಷ್ಟೋ ಸಮಾಧಾನವಾಯಿತು. ಇತರ ದೇವತೆಗಳಿಗೂ ಸಂತೋಷವಾಯಿತು.

ಮನ್ಮಥನು ಶಿವನಿಂದ ದಹನವಾದುದೇ ಕಾಮದಹನ ಅಂದು ‘ಕಾಮನ ಹುಣ್ಣಿಮೆ’ ಎಂದು ಪ್ರಸಿದ್ಧವಾಗಿದೆ.

ಮುಂದೆ ಶಿವ-ಪಾರ್ವತಿಯರಿಗೆ ಒಬ್ಬ ಮಗ ಜನಿಸಿದ ಅವನೇ ಸುಬ್ರಹ್ಮಣ್ಯ. ಅವನು ಚಿಕ್ಕಂದಿನಲ್ಲಿಯೇ ದೇವತಾ ಗುಣಗಳನ್ನು ಹೊಂದಿದ್ದುದರಿಂದ ಅವನಿಗೆ ಕುಮಾರಸ್ವಾಮಿ ಎಂಬ ಹೆಸರೂ ಬಂತು ಪಾರ್ವತೀದೇವಿಯು ಈ ಕುಮಾರನನ್ನು ಪ್ರಸವಿಸಿದ ಸ್ಥಳ ಕುಮಾರಪರ್ವತ ಎಂದು ಪ್ರಸಿದ್ಧವಾಯಿತು.

ಕುಮಾರಸ್ವಾಮಿಯನ್ನು ಪೋಷಿಸಲು ಕೃತ್ತಿಕಾದೇವಿಯರು ನಿಯಮಿಸಲ್ಪಟ್ಟರು. ಹೀಗೆ ಕೃತ್ತಿಕಾದೇವಿಯರಿಂದ ಸಲಹಲ್ಪಟ್ಟಿದ್ದರಿಂದ ಕುಮಾರನಿಗೆ ಕಾರ್ತಿಕೇಯ ಎಂಬ ಹೆಸರೂ ರೂಢಿಯಲ್ಲಿದೆ. ಈ ಕೃತ್ತಿಕಾ ದೇವಿಯರು ಆರು ಜನ ಕುಮಾರಸ್ವಾಮಿಯು ಈ ಆರೂ ಜನರ ಎದೆಹಾಲನ್ನು ಒಟ್ಟಿಗೆ ಕುಡಿಯಲು ಅಪೇಕ್ಷಿಸಿದ್ದರಿಂದ ಅವನಿಗೆ ಆರು ಮುಖಗಳು ಮೂಡಿದುವು. ಇದರಿಂದ ಅವನು ಷಣ್ಮುಖ ಎಂದೂ ಪ್ರಸಿದ್ಧನಾದ. ಅವನ ಇನ್ನೊಂದು ಹೆಸರು ಸ್ಕಂಧ ಮುಂದೆ ಕುಮಾರಸ್ವಾಮಿಯು ತಾರಕಾಸುರನನ್ನು ಎದುರಿಸಿ ದನು. ಅವನೊಡನೆ ಭೀಕರವಾಗಿ ಹೋರಾಡಿ ಅವನನ್ನು ಸಂಹರಿಸಿದನು. ದೇವಲೋಕ ದಲ್ಲಿ ಶಾಂತಿ, ನೆಮ್ಮದಿಗಳು ನೆಲೆಸುವಂತೆ ಮಾಡಿದನು.

ಇಂತಹ ಪ್ರಚಂಡ ವೀರನಾದ ಕುಮಾರಸ್ವಾಮಿಯನ್ನು ದೇವತೆಗಳು ತಮ್ಮ ಸೇನಾಧಿಪತಿಯಾಗಿ ನಿಯಮಿಸಿಕೊಂಡರು.

ವಿಶ್ವಾಮಿತ್ರರು ಈ ಕಥೆಯನ್ನು ಹೇಳಿ, “ರಾಮ ! ಮನ್ಮಥನ ತ್ಯಾಗವನ್ನು ನೋಡಿದಿಯೂ? ಲೋಕಕಲ್ಯಾಣಕ್ಕಾಗಿ ಅವನು ತನ್ನ ಜೀವವನ್ನೇ ಬಲಿಕೊಟ್ಟನು. ಶಿವನ ಕೋಪಕ್ಕೆ ಗುರಿಯಾಗಿ ಮನ್ಮಥನು ತನ್ನ ಶರೀರವನ್ನೇ ಅಂದರೆ ಅಂಗವನ್ನೇ ಕಳೆದು ಕೊಂಡ ಈ ಪ್ರದೇಶಕ್ಕೆ ಅಂಗದೇಶ ಎಂಬ ಹೆಸರು ಬಂದಿದೆ. ಸಾಕ್ಷಾತ್ ಈಶ್ವರನೇ ತಪಸ್ಸು ಮಾಡಿದ ಪುಣ್ಯಾಶ್ರಮ ಇದು. ಈಗಲೂ ಇಲ್ಲಿ ಶಿವನ ಶಿಷ್ಯರು ತಪಸ್ಸು ಮಾಡುತ್ತಿದ್ದಾರೆ. ನಾವು ಈ ರಾತ್ರಿ ಪುಣ್ಯ ಸಂಗಮದ ಬಳಿಯ ಈ ಪವಿತ್ರ ಆಶ್ರಮದಲ್ಲಿ ಉಳಿದುಕೊಳ್ಳೋಣ” ಎಂದರು.

ಇಷ್ಟು ಹೊತ್ತಿಗೆ ವಿಶ್ವಾಮಿತ್ರರು ಅಲ್ಲಿಗೆ ಬಂದ ಸುದ್ದಿ ಎಲ್ಲರಿಗೂ ತಿಳಿಯಿತು. ಆಶ್ರಮವಾಸಿಗಳೆಲ್ಲರೂ ಅವರ ಬಳಿಗೆ ಬಂದರು. ವಿಶ್ವಾಮಿತ್ರರಿಗೆ ನಮಸ್ಕರಿಸಿದರು. ಮೂವರನ್ನೂ ಸತ್ಕರಿಸಿದರು. ಆ ರಾತ್ರಿ ಅಲ್ಲಿಯೇ ಕಳೆಯಿತು.

ಮಾರನೆಯ ಬೆಳಿಗ್ಗೆ ಮೂವರು ಬೇಗನೇ ಎದ್ದರು. ಪ್ರಾತಃಕರ್ಮಗಳನ್ನು ಮುಗಿಸಿ ಗಂಗಾನದಿಯ ತೀರಕ್ಕೆ ಬಂದರು. ಆಶ್ರಮವಾಸಿಗಳು ಅವರಿಗಾಗಿ ಒಂದು ಉತ್ತಮ ವಾದ ದೋಣಿಯನ್ನು ತರಿಸಿದರು. ವಿಶ್ವಾಮಿತ್ರರನ್ನೂ, ರಾಮ ಲಕ್ಷ್ಮಣರನ್ನೂ ಅದರಲ್ಲಿ ಕೂಡಿಸಿ, ಶುಭ ಪ್ರಯಾಣ ಕೋರಿ ಕಳುಹಿಸಿಕೊಟ್ಟರು.

ದೋಣಿ ಮೆಲ್ಲಮೆಲ್ಲನೆ ಮುಂದೆ ಸಾಗಿತು. ನದಿಯ ಮಧ್ಯಭಾಗಕ್ಕೆ ಬಂದಿತು. ಅಲ್ಲಿ ಅಲೆಗಳು ಒಂದಕ್ಕೊಂದು ಬಡಿದು ದೊಡ್ಡಸದ್ದಾಗುತ್ತಿತ್ತು ರಾಮನು “ಮಹರ್ಷಿಗಳೇ ! ಇದೇನು ? ನೀರಿನ ಹೊಡೆತದಿಂದ ಇಷ್ಟೊಂದು ದೊಡ್ಡ ಸದ್ದಾಗುತ್ತಿದೆಯಲ್ಲಾ?” ಎಂದು ಕೇಳಿದನು. ವಿಶ್ವಾಮಿತ್ರರು “ರಾಮ | ಇಲ್ಲಿ ಗಂಗಾನದಿಯೊಡನೆ ಸರಯೂ ನದಿ ಬಂದು ಸೇರುತ್ತದೆ. ಎರಡು ಮಹಾನದಿಗಳು ಸಂಗಮಿಸುವಾಗ ಆಗುವ ಶಬ್ದ ಇದು.

ಹಿಂದೆ ಬ್ರಹ್ಮದೇವರು ಕೈಲಾಸದಲ್ಲಿ ಒಂದು ಸರೋವರ ಇರಬೇಕೆಂದು ಸಂಕಲ್ಪಿಸಿದರು. ಕೂಡಲೇ ಅಲ್ಲಿ ಒಂದು ದೊಡ್ಡ ಸರೋವರ ಹುಟ್ಟಿತು. ಮನಸ್ಸಿನ ಸಂಕಲ್ಪದಿಂದ ಹುಟ್ಟಿದ ಈ ಸರೋವರಕ್ಕೆ ಮಾನಸ ಸರೋವರ ಎಂಬ ಹೆಸರು ಬಂತು. ಆ ಸರೋವರದ ನೀರು ಉಕ್ಕಿ ಉಕ್ಕಿ ಹರಿದು ಒಂದು ನದಿ ಆಯಿತು. ಅದೇ ಸರಯೂ ನದಿ. ಅದು ಆಯೋಧ್ಯಾ ನಗರವನ್ನು ಸುತ್ತಿಹರಿಯುತ್ತದೆ. ನಿಮ್ಮ ರಾಜ್ಯದಲ್ಲಿ ಹರಿಯುವ ಮಹಾನದಿ ಸಾಕ್ಷಾತ್ ಬ್ರಹ್ಮರಿಂದಲೇ ಸೃಷ್ಟಿಯಾದದ್ದು. ಇಲ್ಲಿ ಪವಿತ್ರ ಗಂಗಾ ಮತ್ತು ಸರಯೂ ನದಿಗಳ ಸಂಗಮ ಆಗುತ್ತಿದೆ. ನೀವು ಅದಕ್ಕೆ ನಮಸ್ಕರಿಸಿ” ಎಂದರು. ರಾಮ ಲಕ್ಷ್ಮಣರು ಭಕ್ತಿಯಿಂದ ಆ ಸಂಗಮಕ್ಕೆ ನಮಸ್ಕರಿಸಿದರು.

Follow Karunadu Today for more Spiritual Storie’s like this

Click here to Join Our Whatsapp Group