
"ಅಧ್ಯಾತ್ಮಿಕ ಕಥೆಗಳು"
"ಪರಶುರಾಮನ ಗರ್ವಭಂಗವಾದ ಕಥೆಯ ಭಾಗ ಮುಂದುವರೆಯುತ್ತದೆ"
ಇಂತಹ ಉಗ್ರಕೋಪಿ ಪರಶುರಾಮನನ್ನು ಕಂಡು ದಶರಥನಿಗೆ ಹೆದರಿಕೆ ಯಾಯಿತು. ‘ಪರಶುರಾಮನಿಗೆ ಕ್ಷತ್ರಿಯರ ಮೇಲಿನ ಕೋಪ ಇನ್ನೂ ಇಳಿದಿಲ್ಲವೆ ?’ ಎಂದು ಆ ಕ್ಷತ್ರಿಯರಾಜ ಹೆದರಿಕೊಂಡ. ‘ನನ್ನ ಮಕ್ಕಳ ಗತಿಯೇನು?’ ಎಂದು ದುಗುಡಗೊಂಡ. ಆದರೂ ನಗುಮುಖದಿಂದ ಪರಶುರಾಮನನ್ನು ಎದುರುಗೊಂಡ. ನಮಸ್ಕಾರ ಮಾಡಿ ಸ್ವಾಗತಿಸಿದ. ಕುಶಲ ಪ್ರಶ್ನೆ ಮಾಡಿದ.

ಪರಶುರಾಮ ದಶರಥನ ಕಡೆಗೆ ಗಮನ ಕೊಡಲೇ ಇಲ್ಲ. ಅವನು ರಾಮನ ಕಡೆತಿರುಗಿ “ರಾಮ ! ನಿನ್ನ ಪರಾಕ್ರಮವನ್ನು ಕೇಳಿದೆ. ಜನಕನ ಬಳಿ ಇದ್ದ ಶಿವಧನುಸ್ಸನ್ನು ನೀನು ಮುರಿದೆಯಂತೆ. ಅದು ನಿಜವಾಗಿಯೂ ಬಹಳ ಪರಾಕ್ರಮದ ಕೆಲಸವೇ ಸರಿ. ಆದರೆ ರಾಮ ! ಇಗೋ, ನನ್ನ ಬಳಿ ಇರುವ ಈ ವಿಷ್ಣು ಧನುಸ್ಸನ್ನು ನೋಡು. ಈ ಧನುಸ್ಸನ್ನೂ, ನೀನು ಮುರಿದ ಧನುಸ್ಸನ್ನೂ ದೇವಶಿಲ್ಪಿ ವಿಶ್ವಕರ್ಮ ನಿರ್ಮಿಸಿದ. ಇವುಗಳಲ್ಲಿ ಒಂದನ್ನು ಶಿವನಿಗೆ ಕೊಟ್ಟಿದ್ದನು. ಅದು ಶಿವಧನುಸ್ಸು ಎಂದು ಹೆಸರು ಪಡೆಯಿತು. ಇನ್ನೊಂದನ್ನು ವಿಷ್ಣುವಿಗೆ ಕೊಟ್ಟಿದ್ದರಿಂದ ಅದು ವಿಷ್ಣುಧನುಸ್ಸು ಎಂದು ಪ್ರಸಿದ್ಧವಾಯಿತು. ವಿಷ್ಣುವು ತನ್ನ ಧನುಸ್ಸನ್ನು ತಮ್ಮ ತಾತನಾದ ಋಚೀಕನಿಗೆ ಕೊಟ್ಟನು. ಆಗಿನಿಂದ ಇದು ನಮ್ಮ ವಂಶದವರ ಬಳಿ ಇದೆ. ನೀನು ಮುರಿದುದು ಶಿವಧನುಸ್ಸು. ನನ್ನ ಬಳಿ ಇರುವುದು ವಿಷ್ಣುದನುಸ್ಸು. ನಿನಗೆ ನಿಜವಾದ ಶಕ್ತಿ ಇದ್ದರೆ ಈ ವಿಷ್ಣುಧನುಸ್ಸನ್ನು ಕೈಲಿಹಿಡಿದು ಕೊಂಡು ಅದಕ್ಕೆ ಬಾಣ ಹೂಡು, ಆಗ ನೀನು ಶಕ್ತಿವಂತನೆಂದು ಒಪ್ಪಿಕೊಳ್ಳುತ್ತೇನೆ” ಎಂದನು.
ಪರಶುರಾಮನು ಹೇಳಿದ ಮಾತುಗಳನ್ನು ರಾಮ ಕೇಳಿದ. ಆ ಮಾತಿನಲ್ಲಿ ಅಡಗಿದ್ದ ದರ್ಪ, ಕೆಣಕು ಭಾವ, ಸವಾಲಿನ ಧ್ವನಿ- ಇವುಗಳಿಂದ ಅವನಿಗೆ ಅಸಾಧ್ಯವಾದ ಕೋಪ ಬಂತು. ಆದರೂ ತಡೆದುಕೊಂಡ. ತಂದೆಯವರ ಎದುರಿಗೆ ಕೋಪ ತೋರಿಸುವುದು ಗೌರವವಲ್ಲ ಎಂದುಕೊಂಡ. ಆದ್ದರಿಂದ ಅವನು ಧ್ವನಿಯನ್ನು ಸೌಮ್ಯಗೊಳಿಸಿ, ಮಾತಿನಲ್ಲಿಯೇ ತನ್ನ ಭಾವನೆಗಳನ್ನು ತುಂಬಿ ಹೀಗೆ ನುಡಿದ. “ಪರಶುರಾಮ ! ನಾನೂ ನಿನ್ನ ಪರಾಕ್ರಮದ ಬಗ್ಗೆ ಕೇಳಿದ್ದೇನೆ. ನೀನು ಹಲವಾರು ರಾಜರನ್ನು ಗೆದ್ದಿರಬಹುದು. ಆದಮಾತ್ರಕ್ಕೆ ಎಲ್ಲ ಕ್ಷತ್ರಿಯರನ್ನೂ ಕೈಲಾಗದವರೆಂದುಕೊಂಡು ಈ ರೀತಿಯಲ್ಲಿ ನೀನು ಕೆಣಕುತ್ತಿರುವುದು ಸರಿಯಲ್ಲ. ಪರಶುರಾಮ ! ನಾನು ಅಶಕ್ತನೆಂದು ಭಾವಿಸಬೇಡ. ನನ್ನ ಬಲವನ್ನು ಕಾಣಬೇಕೆಂದಿದ್ದರೆ ಇದೋ ನೋಡು’ ಎಂದವನೇ ಪರಶುರಾಮನಿಂದ ಆ ವಿಷ್ಣುಧನುಸ್ಸನ್ನು ಸೆಳೆದುಕೊಂಡ. ಲೀಲಾಜಾಲವಾಗಿ ಅದಕ್ಕೆ ಬಾಣ ಹೂಡಿದ.
ನಂತರ ಅದನ್ನು ಪರಶುರಾಮನ ಕಡೆಗೇ ಗುರಿ ಇಟ್ಟ. “ಪರಶುರಾಮ ! ಇಗೋ ನೋಡು ನಾನು ಬಾಣವನ್ನು ಹೂಡಿದ್ದೇನೆ. ನೀನು ನನ್ನ ಗುರು ವಿಶ್ವಾಮಿತ್ರರ ಅಕ್ಕನ ಮೊಮ್ಮಗ. ಹೀಗೆ ಗುರಿವಿನ ಬಳಗದವನಾದ ನಿನ್ನನ್ನು ನಾನು ಕೊಲ್ಲಲಾರೆ. ಆದರೆ ನಾನು ಹೂಡಿದ ಬಾಣ ವ್ಯರ್ಥವಾಗಬಾರದು. ಈಗ ಹೇಳು ಬಾಣವನ್ನು ಬಿಟ್ಟು ನಿನ್ನ ತಪ ಶಕ್ತಿಯನ್ನು ಧ್ವಂಸಗೊಳಿಸಲೋ ಅಥವಾ ಇಚ್ಛೆ ಬಂದ ಕಡಗೆ ನಿನ್ನನ್ನು ವೇಗವಾಗಿ ಕಡೆದೊಯ್ಯಬಲ್ಲ ನಿನ್ನ ಪಾದದ ಶಕ್ತಿಯನ್ನು ಬಲಿ ತೆಗೆದುಕೊಳ್ಳಲೋ?” ಎಂದು ಕೇಳಿದ. ಪರಶುರಾಮ ಮತ್ತಗಾದ. ಅವನ ಗರ್ವ ಇಳಿಯಿತು. ರಾಮನ ಕಡೆಗೆ ತಿರುಗಿ ‘ರಾಮ ! ನನ್ನ ಅಹಂಕರಾರ ಅಳಿಯಿತು. ನೀನು ಅತಿಶ್ರೇಷ್ಠನಾದ ಬಿಲ್ಲುಗಾರ ಎಂಬುದರಲ್ಲಿ ಸಂಶಯವೇ ಇಲ್ಲ. ನಿನಗೆ ಕಲ್ಯಾಣವಾಗಲಿ, ಹೇ ದಾಶರಥೀ ! ನಿನ್ನ ಬಾಣಕ್ಕೆ ನಾನು ನನ್ನ ಪಾದದ ಶಕ್ತಿಯನ್ನು ಕೊಡಲಾರೆ. ಏಕೆಂದರೆ, ಹಿಂದೆ ನಾನು ಕಶ್ಯಪನಿಗೆ ಈ ನೆಲವನ್ನು ದಾನ ಮಾಡಿದಾಗ, ಅವನಿಗೆ ದಾನ ಕೊಟ್ಟ ನೆಲದಲ್ಲಿ ಒಂದು ರಾತ್ರಿಯೂ ಇರುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೆ. ಹೀಗಾಗಿ ನಾನು ಈ ಕ್ಷಣವೆ ಇಲ್ಲಿಂದ ನನ್ನ ತಪಃಕ್ಷೇತ್ರವಾದ ಮಹೇಂದ್ರ ಪರ್ವತಕ್ಕೆ ಹಿಂದಿರುಗಬೇಕಾಗಿದೆ ಆದ್ದರಿಂದ ನೀನು ಬಾಣ ಬಿಟ್ಟು ನನ್ನ ತಪಃಶಕ್ತಿಯನ್ನು ತೆಗೆದುಕೋ” ಎಂದ. ಅದೇ ಪ್ರಕಾರವಾಗಿ ರಾಮನು ಬಾಣ ಬಿಡಲು ಪರಶುರಾಮನ ತಪಃಶಕ್ತಿಯು ನಷ್ಟವಾಯಿತು. ಕೂಡಲೇ ಪರಶುರಾಮನು ತನ್ನ ಪಾದದ ಶಕ್ತಿಯಿಂದ ವಾಯುವೇಗದಲ್ಲಿ ಮಹೇಂದ್ರ ಪರ್ವತದ ಕಡೆಗೆ ಹೊರಟುಬಿಟ್ಟನು.
ಕಾರ್ಗತ್ತಲು ಕಳೆದು ಬೆಳಕಾದಂತಾಯಿತು. ಪರಶುರಾಮನ ಆಗಮನದಿಂದ ಬೆದರಿದ್ದ ಜನರು ಭೀತಿ ಕಳೆದು ಹರ್ಷೋದ್ಗಾರ ಮಾಡಿದರು. ದೇವತೆಗಳೂ, ಋುಷಿಗಳೂ ರಾಮನಿಗೆ ಜಯಕಾರ ಮಾಡಿದರು. ದಶರಥನು ಮಗನನ್ನು ಬಿಗಿದಪ್ಪಿಕೊಂಡ. ರಾಮನ ಪರಾಕ್ರಮದಿಂದ ಎಲ್ಲರೂ ಆನಂದಗೊಂಡರು. ನಿಶ್ಚಿಂತೆಯಿಂದ ಪ್ರಯಾಣವನ್ನು ಮುಂದುವರಿಸಿದರು.
ಅಯೋಧ್ಯೆಯಲ್ಲಿ ಸಂಭ್ರಮವೋ ಸಂಭ್ರಮ. ಮಹಾರಾಜ ದಶರಥನು ತನ್ನ ಮಕ್ಕಳು ಮತ್ತು ಸೊಸೆಯರೊಂದಿಗೆ ನಗರಕ್ಕೆ ಹಿಂದಿರುಗಿತ್ತಿರುವ ಸುದ್ದಿ ತಿಳಿದು ಇಡೀ ಜನತೆಯೇ ಸ್ವಾಗತಕ್ಕೆ ನಿಂತಿತು. ಊರನ್ನೆಲ್ಲಾ ತಳಿರು ತೋರಣಗಳಿಂದ ಅಲಂಕರಿಸಿದರು. ಸ್ವಾಗತ ಕಮಾನುಗಳನ್ನು ಕಟ್ಟಿದರು. ಎತ್ತರವಾದ ಧ್ವಜಸ್ತಂಭಗಳನ್ನು ನೆಟ್ಟು ಪತಾಕೆ ಗಳನ್ನು ಹಾರಿಸಿದರು. ರಾಮನ ಪರಾಕ್ರಮವನ್ನು ಕೊಂಡಾಡುವ ಸ್ವಾಗತ ಗೀತೆಗಳನ್ನು ರಚಿಸಿದರು. ದಶರಥನ ಪರಿವಾರ ಅಯೋಧ್ಯೆ ತಲುಪಿದಾಗ ಮಂಗಳವಾದ್ಯಗಳು ಮೊಳಗಿಸಿದರು. ಬೃಹತ್ ಮೆರವಣಿಗೆಯಲ್ಲಿ ಅವರನ್ನು ಅರಮನೆಗೆ ಕರೆದೊಯ್ಯದ ಭವ್ಯವಾದ ಸ್ವಾಗತ ಸಮಾರಂಭವನ್ನು ನಡೆಸಿದರು ಅರಮನೆಗೆ ಮತ್ತು ಇತರ ಜೋಡಿಯನ್ನು ಎಲ್ಲರೂ ಮೆಚ್ಚಿದರು. ನವದಂಪತಿಗಳನ್ನು ಊರವರೆಲ್ಲಾ ಹಾಡಿ ಹರಸಿದರು. ನವವಿವಾಹಿತರು ಹೊಸ ಜೀವನ ಆರಂಭಿಸಿದರು.
ರಾಮ ಸೀತೆಯರದು ತುಂಬ ಅನುರೂಪವಾದ ದಾಂಪತ್ಯ. ಇಬ್ಬರೂ ಒಂದು ಮನಸ್ಸು ಎರಡು ದೇಹ ಎಂಬಂತೆ ಇದ್ದರು.ಅವರು ಪರಸ್ಪರ ಪ್ರೀತಿಯಿಂದ ಇದ್ದರು. ಧರ್ಮಕಾರ್ಯಗಳನ್ನು ಎಂದಿಗೂ ಮರೆಯಲಿಲ್ಲ. ಬಹಳ ಶ್ರದ್ಧೆಯಿಂದ ಹಿರಿಯರಿಗೆ ಧರ್ಮಾಚರಣೆಯಲ್ಲಿ ನೆರವಾಗುತ್ತಿದ್ದರು. ಗುರು-ಹಿರಿಯರ ಬಳಿ ವಿನಯದಿಂದ, ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಚಿಕ್ಕವರನ್ನು ಪ್ರೀತಿ-ವಿಶ್ವಾಸಗಳಿಂದ ಆದರಿಸುತ್ತಿ ದ್ದರು. ಮನಸ್ಸಿನಲ್ಲಿ ಒಂದು ರೀತಿ, ನಡೆದುಕೊಳ್ಳುವುದೇ ಇನ್ನೊಂದು ರೀತಿ ಎಂಬಂತೆ ಇರಲಿಲ್ಲ. ಎಲ್ಲರೂ ನಮ್ಮವರೇ ಎಂಬಂತಹ ವಿಶಾಲ ಮನಸ್ಸು ಅವರದು. ಅವರ ಆದರ್ಶ ಬದುಕನ್ನು ಕಂಡು ಎಲ್ಲರೂ ಸಂತೋಷಿಸುತ್ತಿದ್ದರು.
Follow Karunadu Today for more Spiritual stories like this
Click here to Join Our Whatsapp Group