ಕೆಲವರಿಗೆ ಎಷ್ಟು ಅವಕಾಶ ಸಿಕ್ಕರೂ ಜೀವನದಲ್ಲಿ ಸಫಲರಾಗುವುದಿಲ್ಲ ಯಾಕೆ ಎಂಬುದು ಅವರಿಗೆ ಸಹ ಗೊತ್ತಿರುವುದಿಲ್ಲ. ಆದರೆ, ನಿಜ ಹೇಳಬೇಕೆಂದರೆ ಅವರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಅದಕ್ಕೆ ಒಂದು ಸರಿಯಾದ ಉದಾಹರಣೆಯಂತಿದೆ ಈ ಕಥೆ.

ಅದೊಂದು ಊರಿನಲ್ಲಿ ಒಂದೊಮ್ಮೆ ಗ್ರಂಥಾಲಯಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಳ್ಳುತ್ತದೆ ಅದರಲ್ಲಿರುವ ಲಕ್ಷಾಂತರ ಗ್ರಂಥಗಳು ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗುತ್ತವೆ. ಆ ಘಟನೆಯಲ್ಲಿ ಹಾಗೋ ಹೀಗೋ ಒಂದು ಪುಸ್ತಕ ಉಳಿದುಕೊಳ್ಳುತ್ತದೆ.

ಆ ಪುಸ್ತಕವನ್ನು ಒಬ್ಬ ಬಡ ವ್ಯಕ್ತಿಯೊಬ್ಬ ಕೊಳ್ಳಲು ಮುಂದಾದನು. ತನ್ನ ಬಳಿಯಿದ್ದ ಅಲ್ಪ-ಸ್ವಲ್ಪ ಉಳಿತಾಯದ ಹಣದಲ್ಲಿ ಆ ಪುಸ್ತಕವನ್ನು ಖರೀದಿಸಿ ಮನೆಗೆ ತಂದನು. ಕಡಿಮೆ ಬೆಲೆಗೆ ಸಿಕ್ಕ ಆ ಪುಸ್ತಕವನ್ನು ಕಂಡು ಅವನಿಗೆ ತುಂಬಾ ಖುಷಿಯಾಗಿತ್ತು.

ಮನೆಗೆ ಬಂದ ತಕ್ಷಣ ಆ ಪುಸ್ತಕವನ್ನು ತೆರೆದು ನೋಡಿದನು, ಅವನಿಗೆ ತುಂಬಾ ನಿರಾಸೆಯಾಯಿತು ಏಕೆಂದರೆ ಆ ಪುಸ್ತಕ ಸಂಪೂರ್ಣವಾಗಿ ಖಾಲಿಯಾಗಿತ್ತು, ಬರೀ ಬಿಳಿ ಹಾಳೆಗಳು ತುಂಬಿದ್ದವು, ಉಳಿತಾಯದ ಹಣವನ್ನು ನಿಷ್ಪ್ರಯೋಜಕ ಪುಸ್ತಕಕ್ಕೆ ನೀಡಿದೆನೆಂದು ಕೋಪದಿಂದ ಪುಸ್ತಕವನ್ನು ಎಸೆದ, ಅದರಿಂದ ಒಂದು ಪತ್ರ ಹೊರಬಿದ್ದಿತು.

ಆ ವ್ಯಕ್ತಿ ಕುತೂಹಲದಿಂದ ಆ ಪತ್ರವನ್ನು ತೆರೆದು ಓದಿದನು ಅದರಲ್ಲಿ ಒಂದು ಚಮತ್ಕಾರಿ ಕಲ್ಲಿನ ಬಗ್ಗೆ ಬರೆಯಲಾಗಿತ್ತು. ಅದೇನೆಂದರೆ ಸಮುದ್ರ ದಂಡೆಯ ಬಳಿ ಸಿಗುವ ಆ ಕಲ್ಲನ್ನು ಯಾವುದೇ ಲೋಹದ ವಸ್ತುವಿಗೆ ಉಜ್ಜಿದರೆ ಆ ವಸ್ತುವು ಬಂಗಾರವಾಗುತ್ತದೆ ಎಂದು, ಆ ಪತ್ರದಲ್ಲಿ ಆ ಕಲ್ಲು ಇತರೆ ಕಲ್ಲುಗಳಂತೆ ತಣ್ಣಗೆ ಇರುವ ಬದಲಾಗಿ ಸ್ವಲ್ಪ ಬಿಸಿಯಾಗಿರುತ್ತದೆ, ಇದೇ ಅದನ್ನು ಪತ್ತೆ ಹಚ್ಚುವ ರೀತಿ ಎಂದು ತಿಳಿಸಲಾಗಿತ್ತು.

ಆ ಪತ್ರವನ್ನು ಓದಿದ ನಂತರ ಆ ವ್ಯಕ್ತಿಗೆ ಎಲ್ಲಿಲ್ಲದ ಸಂತೋಷವಾಯಿತು. ತಕ್ಷಣವೇ ಮಾರನೇ ದಿನ ಸಮುದ್ರ ದಂಡೆಗೆ ಹೊರಟೆ ಬಿಟ್ಟ. ಸಮುದ್ರದ ದಂಡೆಯ ಮೇಲೆ ಅನೇಕ ಕಲ್ಲುಗಳಿದ್ದವು. ಅದಕ್ಕೆ ಅವನು ಒಂದೊಂದೇ ಕಲ್ಲನ್ನು ಪರೀಕ್ಷಿಸಿದ ನಂತರ ಆ ಕಲ್ಲು ಮತ್ತೆ ಕೈಗೆ ಸಿಗಬಾರದೆಂದು ಅದನ್ನು ಸಾಗರಕ್ಕೆ ಎಸೆಯುತ್ತಿದ್ದನು.

ಹೀಗೆ 3 ದಿನ ಕಳೆದವು, ನಾಲ್ಕನೇ ದಿನ ಕೊನೆಗೂ ಅವನಿಗೆ ಆ ಚಮತ್ಕಾರಿ ಕಲ್ಲು ಸಿಕ್ಕೇ ಬಿಟ್ಟಿತು. ಆದರೆ ವಿಪರ್ಯಾಸವೆಂದರೆ ಅದನ್ನು ಅವನು ಅಕಸ್ಮಾತ್ ಆಗಿ ಸಮುದ್ರಕ್ಕೆಸೆದನು, ಅವನಿಗೆ ನಿತ್ಯ ಸತತವಾಗಿ ಕಲ್ಲುಗಳನ್ನು ಸಮುದ್ರಕ್ಕೆ ಎಸೆದು ಅಭ್ಯಾಸವಾಗಿದ್ದರಿಂದ ಆ ಕಲ್ಲನ್ನು ಕೂಡ ಎಸೆದು ಬಿಟ್ಟಿದ್ದನು.

ಇದರಿಂದ ನಮಗೆ ತಿಳಿಯುವುದೇನಂದರೆ ನಮಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ನಾವು ಸರಿಯಾಗಿ ಪರಿಶೀಲಿಸಬೇಕು, ನಂತರ ನೂರು ಬಾರಿ ಯೋಚಿಸಿ ಕೈಬಿಡಬೇಕು, ಇಲ್ಲದ್ದಿದರೆ ಆ ವ್ಯಕ್ತಿ ಸಿಕ್ಕ ಕಲ್ಲನ್ನು ಸಮುದ್ರಕ್ಕೆ ಎಸೆದ ಹಾಗೆ ನಾವು ಸಹ ಸಿಕ್ಕ ಒಂದು ಸುವರ್ಣ ಅವಕಾಶವನ್ನು ಕಳೆದುಕೊಂಡ ಹಾಗೆ ಆಗುತ್ತದೆ.

For more Stories follow Karunadu Today

Click here to Join Our Whatsapp Group