
ಬೆಂಗಳೂರು ಎನ್ನುವ ದೊಡ್ಡ ಪಟ್ಟಣವೇ ಹಾಗೆ. ಇಲ್ಲಿ ಮನುಷ್ಯರು ಮತ್ತು ಮನುಷ್ಯತ್ವ ಎನ್ನುವುದಕ್ಕೆ ಬೆಲೆಯೇ ಇಲ್ಲ. ಎಲ್ಲಿ ನೋಡಿದರೂ ದ್ವೇಷ, ಅಸೂಹೆ ತುಂಬಿದ ಜನರೇ ಜಾಸ್ತಿ. ಪ್ರೀತಿಯಿಂದ ಯಾರಾದರು ಮಾತನಾಡಿದರೆ ಅದರ ಹಿಂದೆ ಏನಾದರು ಒಂದು ಲಾಭವನ್ನು ಇಟ್ಟುಕೊಂಡೆ ಮಾತನಾಡುತ್ತಾರೆ. ಇಂತಹ ಕೆಟ್ಟ ಪ್ರಪಂಚದಲ್ಲಿಯೂ ಕೂಡ ಕೆಲವೊಮ್ಮೆ ಒಳ್ಳೆಯವರು ಮತ್ತು ಒಳ್ಳೆಯತನವನ್ನು ಕಾಣಬಹುದು.
ನಾನು ಕೂಡ ಈ ಊರಿನಲ್ಲಿ ಹುಟ್ಟಿದವನಲ್ಲ ಅಥವಾ ಬೆಳೆದವನಲ್ಲ. ಹುಬ್ಬಳ್ಳಿಯಲ್ಲಿ ಓದು ಮುಗಿಸಿ ಕೆಲಸ ಹುಡುಕಿಕೊಂಡು ಈ ಊರಿಗೆ ಬಂದವನು. ಆರು ವರ್ಷದಿಂದ ಈ ಊರಿನಲ್ಲಿ ಕಷ್ಟ ಪಟ್ಟು ಕೆಲಸ ಹುಡುಕಿಕೊಂಡು ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಎರಡು ತಿಂಗಳಿಗೆ ಒಂದು ಸಲ ಊರಿನ ಕಡೆಗೆ ಹೋಗುತ್ತಿರುತ್ತೇನೆ. ಗಣಪತಿ ಹಬ್ಬಕ್ಕೆಂದು ಊರಿಗೆ ಹೋಗಲೆಂದು ಎರಡು ತಿಂಗಳ ಮುಂಚೆಯೇ ಬಸ್ ಬುಕ್ ಮಾಡಿದ್ದೆ. ಏಕೆಂದರೆ ನನಗೆ ಗೊತ್ತು, ಹಬ್ಬ ಹರಿದಿನದಂದು ಬೆಂಗಳೂರು ಬಿಟ್ಟು ಹೊರಗಡೆ ಹೋಗುವುದು ಅಷ್ಟು ಸುಲಭವಲ್ಲ. ನಿಲ್ಲುವುದಕ್ಕೂ ಬಸ್ಸಿನಲ್ಲಿ ಜಾಗ ಇರುವುದಿಲ್ಲ.

ಅಂದು ಮಳೆ ಬೇರೆ ತುಂಬಾ ಜೋರಾಗಿ ಬರುತ್ತಿತ್ತು. ಮೈಯೆಲ್ಲಾ ಒದ್ದೆ ಮಾಡಿಕೊಂಡು ಮೆಜೆಸ್ಟಿಕ್ ತಲುಪಿದೆ. ನಾನು ಊರಿಗೆ ಹೋಗುವ ಬಸ್ಸನ್ನು ಹುಡುಕಿಕೊಂಡು ಹೋಗುವ ಅವಸರದಲ್ಲಿ ಒಬ್ಬ ಹುಡುಗಿಗೆ ಡಿಕ್ಕಿ ಹೊಡೆದೆ. ನಾನು ಡಿಕ್ಕಿ ಹೊಡೆದ ರಭಸಕ್ಕೆ ಅವಳು ಕೆಳಗಡೆ ಬಿದ್ದಳು. ಕೆಸರು ಅವಳ ಮೈಯ್ಯಿಗೆ ಹತ್ತಿಕೊಂಡಿತು. ಅದನ್ನು ಕಂಡು ಅವಳ ಹತ್ತಿರ ಹೋಗಿ ಅಯ್ಯೋ ತಪ್ಪಾಯಿತು ಕ್ಷಮಿಸಿ ಎಂದು ಅವಳ ಮುಖ ನೋಡಿದೆ. ಆಗಲೇ ಗೊತ್ತಾಗಿದ್ದು ಅವಳು ಕುರುಡಿ ಎಂದು. ಪರವಾಗಿಲ್ಲ ಸಾರ್ ದಯವಿಟ್ಟು ನನ್ನ ಕೋಲನ್ನು ಕೊಡಿ ನನಗೆ ಅದು ಇಲ್ಲವೆಂದರೆ ನಡೆದಾಡಲು ಕಷ್ಟವಾಗುತ್ತದೆ ಎಂದಳು. ಅದನ್ನು ಕೇಳಿ ಕೆಳಗೆ ಬಿದ್ದಿದ್ದ ಅವಳ ಕೋಲನ್ನು ಎತ್ತಿ ಕೊಟ್ಟೆ. ಎಲ್ಲಿಗೆ ಹೋಗುತ್ತಿರುವಿರಿ ಎಂದು ಅವಳನ್ನು ಕೇಳಿದೆ. ಅದಕ್ಕೆ ಅವಳು ಹುಬ್ಬಳ್ಳಿಗೆ ಹೋಗಬೇಕು ಅದಕ್ಕೆ ಬಸ್ ಹುಡುಕುತ್ತಿದ್ದೇನೆ ಎಂದು ಹೇಳಿದಳು. ಆಗ ನಾನು ನಿಮ್ಮ ಜೊತೆಯಲ್ಲಿ ಯಾರೂ ಇಲ್ಲವೇ? ಒಬ್ಬರೇ ಹೇಗೆ ಹೋಗುತ್ತೀರಿ ಎಂದು ಕೇಳಿದೆ. ಅದಕ್ಕೆ ಅವಳು, ಹೇಗೋ ಹೋಗುತ್ತೇನೆ ಸಾರ್ ಎಂದಳು. ಅದನ್ನು ಕೇಳಿ ಅವಳನ್ನು ಬಿಟ್ಟು ಹೋಗುವುದಕ್ಕೆ ಮನಸ್ಸೇ ಬರಲಿಲ್ಲ. ಬನ್ನಿ ನಿಮಗೆ ಬಸ್ ಹತ್ತಿಸುತ್ತೇನೆ ಎಂದು ಅವಳ ಕೈ ಹಿಡಿದು ಬಸ್ ಹುಡುಕುತ್ತ ಹೊರಟೆ. ಮೊದಲೇ ಗಣೇಶನ ಹಬ್ಬಕ್ಕೆ ಎಲ್ಲರೂ ಊರಿಗೆ ಹೋಗುತ್ತಿದ್ದಾರೆ, ಪ್ರತಿಯೊಂದು ಬಸ್ ಗಳು ಜನರಿಂದ ಸಿಕ್ಕಾಪಟ್ಟೆ ತುಂಬಿವೆ. ಕೂರಲು ಸೀಟ್ ಸಿಗದೆ ಜನರು ನಿಂತುಕೊಂಡು ಹೋಗುತ್ತಿದ್ದಾರೆ. ಇವಳಿಗೆ ಹೇಗೆ ಖಾಲಿ ಇರುವ ಸೀಟು ಹುಡುಕುವುದು ಎಂದು ತಲೆ ಕೆಟ್ಟಿತು.

ನಾನು ಹೊರಡುವ ಬಸ್ ಬೇರೆ ನನಗೋಸ್ಕರ ಕಾಯುತ್ತಾ ಇದೆ ಇವಳನ್ನು ಬಿಟ್ಟು ಹೇಗಪ್ಪಾ ಹೋಗುವುದು ಎಂದು ಯೋಚಿಸತೊಡಗಿದೆ. ಒಂದು ಕ್ಷಣ ಅವಳ ಮುಖವನ್ನು ನೋಡಿದೆ. ಅದೆಷ್ಟು ಮುಗ್ಧ ಮುಖವೆಂದರೆ ದೇವರು ಅವಳಿಗೆ ಏಕೆ ಕಣ್ಣು ಕಿತ್ತುಕೊಂಡನು ಎಂದೆನಿಸತೊಡಗಿತು. ಅವಳನ್ನು ಬಿಟ್ಟು ಹೋಗಲು ಮನಸ್ಸು ಒಪ್ಪಲಿಲ್ಲ, ಅದಕ್ಕೆ ಅವಳಿಗೆ ನಾನು ಬುಕ್ ಮಾಡಿದ್ದ ಬಸ್ಸಿನ ಹತ್ತಿರ ಕರೆದುಕೊಂಡು ಹೋದೆ. ಸರ್ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರ ಎಂದು ಕೇಳಿದಳು, ಅದಕ್ಕೆ ನಾನೂ ಕೂಡ ಹುಬ್ಬಳ್ಳಿಗೆ ಹೋಗುತ್ತಿದ್ದೇನೆ, ನಿಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ ಬನ್ನಿ ಎಂದೆ. ಅದಕ್ಕೆ ಅವಳು ಗಾಬರಿಗೊಂಡು ಬೇಡ ನಾನು ಒಬ್ಬಳೇ ಹೋಗುತ್ತೇನೆ ಎಂದು ಹೇಳಿದಳು. ಅಯ್ಯೋ ಬಸ್ ಗಳು ಖಾಲಿಯಿಲ್ಲ ನಿಲ್ಲಲೂ ಕೂಡ ಸ್ಥಳವಿಲ್ಲ ಅದಕ್ಕೆ ನಾನು ಹೋಗುವ ಬಸ್ಸಿನಲ್ಲಿ ನಿಮಗೆ ಹೇಗಾದರು ಮಾಡಿ ಒಂದು ಸೀಟ್ ಕೊಡಿಸುತ್ತೇನೆ ಬನ್ನಿ ಎಂದು ಹೇಳಿದೆ. ಅದಕ್ಕೆ ಅವಳು ಸರಿ ಎಂದಳು. ಕೊನೆಗೆ ನಾನು ಇರುವ ಬಸ್ಸಿನಲ್ಲಿ ಸಹ ಪ್ರಯಾಣಿಕರನ್ನು ವಿನಂತಿಸಿ ಅವಳಿಗೆ ಒಂದು ಸೀಟ್ ಕೊಡಿಸಿದೆ. ಅವಳು ತುಂಬಾ ಖುಷಿಯಾಗಿ ನನಗೆ ಧನ್ಯವಾದ ಹೇಳಿದಳು.

ಹುಬ್ಬಳ್ಳಿ ಮುಟ್ಟುವ ತನಕ ಇಬ್ಬರೂ ಜೊತೆಯಲ್ಲಿ ಮಾತನಾಡಲು ಪ್ರಾರಂಬಿಸಿದೆವು. ಅವಳಿಗೆ ಯಾರೂ ಇಲ್ಲ ಒಬ್ಬ ಅನಾಥಳು ಹಾಗು ಬೆಂಗಳೂರಿನ ಒಂದು ಪುಟ್ಟ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿಯಿತು. ಹುಬ್ಬಳ್ಳಿ ಮುಟ್ಟುವಷ್ಟರಲ್ಲಿ ಇಬ್ಬರು ಒಬ್ಬರಿಗೊಬ್ಬರನ್ನು ಸಂಪೂರ್ಣವಾಗಿ ಪರಿಚಯ ಮಾಡಿಕೊಂಡೆವು. ಅದು ಯಾಕೋ ಗೊತ್ತಿಲ್ಲ ಅವಳು ನನಗೆ ತುಂಬಾ ಹಿಡಿಸಿದಳು. ಅವಳಿಗೆ ಕಣ್ಣಿಲ್ಲದಿದ್ದರೇನು ಅವಳ ಮನಸ್ಸು ಸ್ವಚ್ಛವಾಗಿದೆ. ಮದುವೆ ಆದರೆ ಇವಳನ್ನೇ ಆಗಬೇಕು ಎಂದು ತೀರ್ಮಾನಿಸಿದೆ. ಹುಬ್ಬಳ್ಳಿ ಮುಟ್ಟುವಷ್ಟರಲ್ಲಿ ಇಬ್ಬರಿಗೂ ತುಂಬಾ ಸುಸ್ತಾಗಿತ್ತು.
ಅವಳನ್ನು ಸುರಕ್ಷಿತವಾಗಿ ಹುಬ್ಬಳ್ಳಿಯಲ್ಲಿರುವ ಅವಳ ಚಿಕ್ಕಮ್ಮನ ಮನೆಗೆ ಬಿಟ್ಟು ನಾನು ನಮ್ಮ ಮನೆಯ ಕಡೆಗೆ ನಡೆದೆ. ಮನೆ ತಲುಪಿದ ಮೇಲೆ ಅವಳದೇ ನೆನಪು ಬರತೊಡಗಿತು. ಅವಳ ಮುಗ್ಧ ಮುಖವೇ ಕಣ್ಣೆದುರಿಗೆ ಬರತೊಡಗಿತು. ದೇವರು ಏಕೆ ಅವಳ ಕಣ್ಣುಗಳನ್ನು ಕಿತ್ತುಕೊಂಡನು, ಅದೆಷ್ಟು ಕ್ರೂರಿ ಅವನು ಅನ್ನಿಸತೊಡಗಿತು. ಯಾಕೋ ಅವಳನ್ನು ಮತ್ತೆ ನೋಡಬೇಕು ಅನ್ನಿಸತೊಡಗಿತು. ಸಂಜೆ ಅವಳ ಮನೆಯ ಹತ್ತಿರ ಹೋದೆ. ನಾನು ಬಂದಿರುವುದನ್ನು ಕಂಡು ಅವಳ ಚಿಕ್ಕಮ್ಮ ನಗುತ್ತ ಒಳಗಡೆ ಬನ್ನಿ ಎಂದು ಕರೆದರು. ದೀಪ ಎಲ್ಲಿ ಎಂದು ಕೇಳಿದೆ. ನಾನು ಕೇಳುವಷ್ಟರಲ್ಲಿ ಅವಳೇ ಬಂದಳು. ಅವಳನ್ನು ಕಂಡು ತುಂಬಾ ಖುಷಿಯಾಯಿತು. ಇಲ್ಲೇ ಇರಿ ಕಾಫಿ ಮಾಡಿಕೊಂಡು ಬರುತ್ತೇನೆ ಎಂದು ಅವಳ ಚಿಕ್ಕಮ್ಮ ಅಡುಗೆ ಮನೆಯ ಕಡೆಗೆ ಹೊರಟರು. ನಾನು ಮತ್ತು ದೀಪ ಮಾತನಾಡುತ್ತ ಕೂತೆವು. ಬಸ್ಸಿನಲ್ಲಿ ಬರಬೇಕಾದರೆ ಅವಳ ಜೊತೆಗೆ ಅಷ್ಟೊಂದು ಸರಿಯಾಗಿ ಮಾತನಾಡುವ ಅವಕಾಶ ಸಿಕ್ಕಿರಲಿಲ್ಲ, ಅದಕ್ಕೆ ಅವಳ ಬಗ್ಗೆ ಜಾಸ್ತಿ ಏನೂ ಗೊತ್ತಿರಲಿಲ್ಲ. ಮಾತನಾಡುತ್ತ ಅವಳ ಬಗ್ಗೆ ಮತ್ತು ಕುಟುಂಬದ ಬಗ್ಗೆ ಸಂಪೂರ್ಣವಾಗಿ ತಿಳಿಯಿತು. ಚಿಕ್ಕವಯಸ್ಸಿನಲ್ಲಿ ಅಪಘಾತದಲ್ಲಿ ಅವಳು ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ತನ್ನ ಕಣ್ಣನ್ನು ಕಳೆದುಕೊಂಡಳು ಎಂದು ತಿಳಿದು ಮನಸ್ಸಿಗೆ ತುಂಬಾ ಬೇಸರವಾಯಿತು.

ಅವಳ ಚಿಕ್ಕಮ್ಮನೇ ಇವಳಿಗೆ ಎಲ್ಲಾ, ಜೀವನವನ್ನು ನಡೆಸಲು ಬೇರೆ ದಾರಿಯಿಲ್ಲದೆ ಬೆಂಗಳೂರಿಗೆ ಹೋಗಿದ್ದಾಳೆ ಎಂದು ತಿಳಿಯಿತು. ಅದನ್ನು ಕೇಳುತ್ತಲೇ ಅವಳ ಚಿಕ್ಕಮ್ಮನಿಗೆ ನಾನು ದೀಪಳನ್ನು ಮದುವೆ ಆಗಲು ಬಯಸುತ್ತಿದ್ದೇನೆ, ನೀವು ಒಪ್ಪುತ್ತೀರಾ ಎಂದು ಕೇಳಿಯೇ ಬಿಟ್ಟೆ. ಅದನ್ನು ಕೇಳಿ ಒಂದು ನಿಮಿಷ ಅವರಿಬ್ಬರೂ ಮೌನವಾದರು. ನನಗೆ ಗೊತ್ತು ನನ್ನ ಬಗ್ಗೆ ನಿಮಗೆ ಜಾಸ್ತಿ ಗೊತ್ತಿಲ್ಲ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ನಿಮ್ಮನ್ನು ನನ್ನ ಮನೆಗೆ ಕರೆದುಕೊಂಡು ಹೋಗಿ ನನ್ನ ಕುಟುಂಬವನ್ನು ಪರಿಚಯ ಮಾಡಿಸಿಕೊಡುವೆ, ಅವರು ಈ ಮದುವೆಗೆ ಒಪ್ಪೇ ಒಪ್ಪುತ್ತಾರೆ ಎಂದು ಹೇಳಿದೆ. ಅದನ್ನು ಕೇಳಿ ಇಬ್ಬರು ಸ್ವಲ್ಪ ಸಮಯ ಕೊಡಿ ಯೋಚಿಸಿ ಹೇಳುತ್ತೇವೆ ಎಂದು ಹೇಳಿದರು.
ಇತ್ತ ನಮ್ಮ ಮನೆಯಲ್ಲಿ ಈ ವಿಷಯವನ್ನು ತಿಳಿಸಿ ನಮ್ಮ ತಂದೆ ತಾಯಿಯನ್ನು ಒಪ್ಪಿಸಿದೆ. ಮಾರನೆಯ ದಿವಸ ದೀಪ ಮತ್ತು ಅವಳ ಚಿಕ್ಕಮ್ಮ ತಮ್ಮ ಅಭಿಪ್ರಾಯ ತಿಳಿಸಿದರು. ಅದನ್ನು ಕೇಳಿ ತುಂಬಾ ಖುಷಿಯಾಯಿತು, ಏಕೆಂದರೆ ಅವರು ಒಪ್ಪಿಕೊಂಡಿದ್ದರು. ಅಕಸ್ಮಾತ್ ಆಗಿ ಬಸ್ ನಿಲ್ದಾಣದಲ್ಲಿ ಸಿಕ್ಕ ಅವಳು ಇಂದು ನಮ್ಮ ಮನೆಯ ದೀಪವನ್ನು ಬೆಳಗಲು ಬರುತ್ತಿದ್ದಾಳೆ. ಮುಂದಿನ ವಾರ ನಮ್ಮ ಮದುವೆ. ನನಗೆ ಗೊತ್ತು ಅವಳಿಗೆ ಕಣ್ಣಿಲ್ಲ, ಆದರೆ ಅವಳಿಗೆ ಕಣ್ಣಾಗಿ ಸಾಯುವವರೆಗೂ ಜೊತೆಯಲ್ಲೇ ಇರುತ್ತೇನೆ. ನಮ್ಮ ಈ ಮುದ್ದಾದ ಪ್ರೀತಿಗೆ ನೀವು ಆಶೀರ್ವಾದ ಮಾಡುತ್ತೀರ?
For more Stories follow Karunadu Today
Click here to Join Our Whatsapp Group