ನೂರೆಂಟು ಸಲ ಸ್ನಾನ ಎಂಬ ಈ ವಾಕ್ಯವು ನಮ್ಮ ಜೀವನದಲ್ಲಿ ಶಾಂತಿ ಮತ್ತು ತಾಳ್ಮೆಯ ಸಂಕೇತವಾಗಿದೆ.ಅದು ಹೇಗೆ ಎನ್ನುವ ಪ್ರಶ್ನೆ ನಿಮಗೆ ಕಾಡುತ್ತಿರುತ್ತದೆ,ನಿಮ್ಮ ಈ ಪ್ರಶ್ನೆಗೆ ಒಂದು ಕಥೆಯ ಮುಖಂತರ ನಿಮಗೆ ತಿಳಿಸುತ್ತೇನೆ ಬನ್ನಿ.

ಒಂದು ಪುಟ್ಟ ಹಳ್ಳಿಯಲ್ಲಿ ರಾಮನ ಪರಮ ಭಕ್ತರದ ಶ್ರೀ ರಾಮದಾಸರು ಇದ್ದರು .ಅವರು ಪ್ರತಿ ದಿನ ರಾಮ ಜಪ ಮಾಡುತ್ತ ನದಿಗೆ ಸ್ನಾನ ಮಾಡಲು ಹೋಗುತಿದ್ದರು.ಆದರೆ ಅದೇ ಊರಿನಲ್ಲಿ ನೆಲೆಸಿದ್ದ ಒಬ್ಬ ವ್ಯಕ್ತಿಗೆ ರಾಮದಾಸರೆಂದರೆ ಆಗುತ್ತಿರಲಿಲ್ಲ. ಏಕೆಂದರೆ ರಾಮದಾಸರು ಪ್ರತಿ ದಿನ ರಾಮನ ಜಪ ಮಾಡುತ್ತ ಆ ವ್ಯಕ್ತಿಯ ಮನೆ ಮುಂದೆಯೇ ನದಿಗೆ ಸ್ನಾನ ಮಾಡಲು ಹೋಗುತ್ತಿರುತ್ತಾರೆ ಅದು ಅವರಿಗೆ ಆಗುತ್ತಿರಲಿಲ್ಲ. ಇದಕ್ಕೆ ಏನಾದರೂ ಉಪಾಯ ಮಾಡಬೇಕೆಂದುಕೊಂಡು ರಾಮದಾಸರು ಬರುವ ಹೊತ್ತಿಗೆ ಸರಿಯಾಗಿ ಮನೆಯ ಮಾಳಿಗೆಯ ಮೇಲೆ ಹತ್ತಿ ನಿಂತುಕೊಂಡಿದ್ದನು. ಅವರು ರಾಮನಾಮ ಮಂತ್ರ ಜಪ ಮಾಡುತ್ತಾ ತನ್ನ ಮನೆಯ ಮುಂದೆ ಬರುವ ಹೊತ್ತಿಗೆ ಸರಿಯಾಗಿ ಆ ಮನುಷ್ಯನು ಅವರ ಮೇಲೆ ಉಗುಳಿಬಿಟ್ಟನು. ಅರೆ ನನ್ನ ಮೈ ಮೈಲಿಗೆ ಆಯಿತು ಎಂದು ಒಂದೂ ಮಾತನ್ನು ಆಡದೆ ಶಾಂತಚಿತ್ತರಾಗಿಯೆ ಮತ್ತೆ ಸ್ನಾನಕ್ಕೆಂದು ನದಿಗೆ ತೆರಳಿದರು. ಸ್ನಾನ ಮಾಡಿ ಆ ಮನೆಯ ಮುಂದೆ ಬಂದ ತಕ್ಷಣ ಆ ಮನುಷ್ಯ ಮತ್ತೆ ಉಗುಳಿದ. ಅವರು ಏನೊಂದನ್ನೂ ಮಾತನಾಡದೆ ಶಾಂತಿಯಿಂದ ಮತ್ತೆ ಸ್ನಾನಕ್ಕೆ ತೆರಳಿದರು. ಹೀಗೆ ಆ ಮನುಷ್ಯನು ನೂರೆಂಟು ಸಲ ಉಗುಳಿದನು. ರಾಮದಾಸರು ನೂರೆಂಟು ಸಲ ಸ್ನಾನ ಮಾಡಿದರು.

ಅಷ್ಟಾದರೂ ಶ್ರೀ ರಾಮದಾಸರು ವಿಚಲಿತರಾಗದೆ ಶಾಂತ ಚಿತ್ತದಿಂದಲೇ ಇದ್ದರು. ಮುಂದೆ ಆ ಮನುಷ್ಯನಿಗೆ ಉಗುಳಲು ಉಗುಳೇ ಇಲ್ಲದಂತಾಗಿ ಬಾಯಿ ಒಣಗಿ ನಿತ್ರಾಣವಾಯಿತು. ನಾನು ಇಷ್ಟು ಸಲ ಉಗುಳಿದರೂ ಒಂದು ಮಾತನ್ನೂ ಆಡದೇ ಶಾಂತರಾಗಿ ಇದ್ದಾರೆಂದರೆ ಇವರೆಂಥಾ ಮಹಾತ್ಮರಪ್ಪಾ! ಇಂಥವರಿಗೆ ನಾನು ಎಂತಹ ಅಪಚಾರ ಮಾಡಿದೆನು? ಎಂದು ಆ ಮನುಷ್ಯನು ಮನದೊಳಗೆ ಬಹುವಿಧದಿಂದ ಪಶ್ಚಾತ್ತಾಪಪಡುತ್ತ”ನಾನು ಎಂಥಾ ಪಾಪಿ ನಿಮ್ಮಂತಹ ಮಹಾತ್ಮರಿಗೆ ಅಜ್ಞಾನದಿಂದ ಘನಘೋರವಾದ ಅಪಚಾರ ಮಾಡಿದೆನು. ನನಗೆ ಕ್ಷಮೆ ಮಾಡಿರಿ” ಎಂದು ಅವರ ಪಾದಕ್ಕೆ ಬಿದ್ದನು. ಆಗ ರಾಮದಾಸರು, ಆ ಮನುಷ್ಯನ ಕೈ ಹಿಡಿದು ಮೇಲಕ್ಕೆ ಎಬ್ಬಿಸಿ, ”ಮಗೂ, ನೀನೇನೂ ತಪ್ಪು ಮಾಡಿಲ್ಲ. ನೂರೆಂಟು ಸಲ ಸ್ನಾನ ಮಾಡಿ ಶ್ರೀರಾಮ ದೇವರ ಪೂಜೆ ಮಾಡಬೇಕು ಎಂದು ನಾನು ಒಂದು ಸಲ ಅಂದುಕೊಂಡಿದ್ದೆ. ಅದು ಇವತ್ತು ನೆರವೇರಿತು. ಎಷ್ಟು ಸಲ ಮಾಡಬೇಕೆಂದರೂ ಅದು ಮುಂದೆ ಮುಂದೆ ಹೋಗುತ್ತಿತ್ತು. ಆ ಸಂಕಲ್ಪವನ್ನು ಇವತ್ತು ನಿನ್ನಿಂದ ಆ ದೇವರೇ ನೆರವೇರಿಸಿದ್ದಾನೆ” ಎಂದರು.

ಹೀಗೆ ಶಾಂತಿ, ಜೀವನದಲ್ಲಿ ಎಂತಹ ಪರಿವರ್ತನೆ ಮಾಡುತ್ತದೆ? ಅದರ ಫಲ ಆಗಲೇ ಸಿಗುವುದಿಲ್ಲ. ಮುಂದೆ ಪಕ್ವ ಕಾಲ ಬಂದಾಗ ಅದರ ಫಲ ಸಿಗುತ್ತದೆ.
ಶ್ರೀ ರಾಮದಾಸರು ಶಾಂತಿಯಿಂದ ಇದ್ದದ್ದಕ್ಕೆ ಆ ಮನುಷ್ಯನು ಸಾತ್ವಿಕನಾದನು ಮತ್ತು ಶ್ರೀರಾಮದಾಸರ ಇಷ್ಟವೂ ನೆರವೇರಿತು.

ಅದರಂತೆ ಸಾಧನೆಯಲ್ಲಿ ಸಾಗಿದಾಗ ದೈಹಿಕವಾಗಿ, ಹಾಗೂ ಮಾನಸಿಕವಾಗಿ ಅನೇಕ ರೀತಿಯ ಇತಿಬಾಧೆಗಳು ಬರುತ್ತವೆ. ಅವೆಲ್ಲವುಗಳನ್ನು ಶಾಂತಿ ಹಾಗೂ ತಾಳ್ಮೆಯಿಂದ ಸಹಿಸಿಕೊಂಡು ಮುಂದೆ ಮುಂದೆ ಸಾಗಿದಾಗಲೇ ಸಾಧಕ ಸಾಧನೆಯ ಪರಕಾಷ್ಠತೆಯನ್ನು ತಲುಪುತ್ತಾನೆ.

Follow Karunadu Today for more Policy stories like this

Click here to Join Our Whatsapp Group