ಎಷ್ಟು ಕಣಪ್ಪ ಈ ಪೀಪಿ ಎಂದು ಕೇಳುತ್ತಾ ಬಗಲಲ್ಲಿ ಎತ್ತಿಕೊಂಡಿದ್ದ ನಮ್ ಅಣ್ಣನ ಮಗಳು ಶ್ವೇತಾಳ ಮೂಗಿನಿಂದ ಬರುತ್ತಿದ್ದ ಗೊಣ್ಣೆಯನ್ನು ವರೆಸುತ್ತ ಜೋತು ಮೋರೆ ಹಾಕಿಕೊಂಡಿದ್ದಳು ನಮ್ ಅಮ್ಮ. ಅವಳ ಜೊತೆಯಲ್ಲಿ ಹೋಗಿದ್ದ ತಪ್ಪಿಗಾಗಿ ಕೈಯಲ್ಲಿ ಅಕ್ಕನಿಗಾಗಿ ತೆಗೆದುಕೊಂಡಿದ್ದ ಬಳೆಗಳು ಹಾಗೂ ಚಪ್ಪಲಿಗಳನ್ನು ಹಿಡಿದುಕೊಂಡಿದ್ದೆ. ಅದೇನ್ ಜನ ಅಂತೀರಾ ರೀ ಕಾಲು ಇಡುವುದಕ್ಕೆ ಜಾಗವಿಲ್ಲ. ಮೊದಲೇ ನಮ್ ಸಿದ್ದಾರೂಡ ಮಠದ ಜಾತ್ರೆ, ಸುತ್ತಾ ಮುತ್ತ ಇರುವ ಎಲ್ಲಾ ಊರಿಂದ ಜನ ಬರ್ತಾರೆ. ನೋಡೋಕೆ ಎರಡು ಕಣ್ಣು ಸಾಲಲ್ಲ ಅಷ್ಟು ಜನ ಸೇರಿರ್ತಾರೆ.

ಪ್ರತಿ ವರ್ಷದಂತೆ ಈ ವರ್ಷವು ಕೂಡ ನನ್ನ ಕೆಲಸಕ್ಕೆ ರಜೆ ಹಾಕಿ ಜಾತ್ರೆಗೆ ಬಂದಿದ್ದೆ. ಆದರೆ ಈ ವರ್ಷ ನೋಡಿದಷ್ಟು ಜನರನ್ನು ಕಳೆದ ವರ್ಷ ನೋಡಿರಲಿಲ್ಲ ರೀ. ಎಲ್ಲಿ ನೋಡಿದರೂ ಬಿಳಿ ಪಂಜಿ ದೋತಿ ಹಾಕಿಕೊಂಡಿರುವ ಶುದ್ದ ಉತ್ತರ ಕರ್ನಾಟಕದ ಮುದುಕರು, ಬಾಯಲ್ಲಿ ಎಲೆಅಡಿಕೆ ಹಾಕಿಕೊಂಡು ತಲೆ ತುಂಬಾ ಮಲ್ಲಿಗೆ ಹೂವು ಹಾಗೂ ಇಳಕಲ್ ಸೀರೆ ಉಟ್ಟುಕೊಂಡಿರುವ ಮುದುಕಿಯರು, ಲಂಗಾ ದಾವಣಿ ಉಟ್ಟುಕೊಂಡು ಕಿಲಕಿಲ ಅಂತ ನಗುತ್ತ ಆ ಅಂಗಡಿಯಿಂದ ಈ ಅಂಗಡಿಗೆ ಓಡಾಡುತ್ತಿರುವ ಹುಡುಗಿಯರು, ಆ ಹುಡುಗಿಯರನ್ನು ನೋಡುತ್ತಾ ಬಾಯಿ ಬಾಯಿ ಬಿಟ್ಟುಕೊಂಡು ನಿಂತಿರುವ ಹುಡುಗರು. ಇಂಥ ಗದ್ದಲದಲ್ಲಿ ನಿಲ್ಲುವುದಕ್ಕೆ ನನ್ನಿಂದ ಆಗುತ್ತಿಲ್ಲ, ಆದರೂ ಅಮ್ಮನ ಜೊತೆ ಬಂದಿರುವ ಕಾರಣಕ್ಕೆ ನಿಲ್ಲಲೇಬೇಕಿತ್ತು. ಅದೇನ್ ಕರ್ಮಾನೋ ಅಂತ ಬೈದುಕೊಳ್ಳುತ್ತಾ ಎಡಗಡೆ ತಿರುಗಿದೆ ನೋಡ್ರಿ, ಹಸಿರು ಬಣ್ಣದ ಚೂಡಿದಾರವನ್ನು ತೊಟ್ಟು ಹಣೆಗೆ ಕೆಂಪು ಬಣ್ಣದ ಕುಂಕುಮ ಹಚ್ಚಿಕೊಂಡು ಬಳೆಗಳನ್ನು ಆರಿಸುತ್ತಿದ್ದ ಒಂದು ಸುಂದರವಾದ ಹುಡುಗಿ ಕಂಡಳು. ಅದೇನ್ ಚೆಂದ ಅಂತೀರಾ, ಎಷ್ಟೋ ಹುಡುಗಿಯರನ್ನು ನೋಡಿದ್ದೇನೆ ಆದರೆ ಇವಳ ತರಹ ಯಾರನ್ನು ನೋಡಿರಲಿಲ್ಲ.

 

ತುಂಬಾ ಮುದ್ದಾಗಿ ಕಾಣುತ್ತಿದ್ದಳು ಆ ಹಸಿರು ಬಣ್ಣದ ಚೂಡಿದಾರದಲ್ಲಿ. ಹೇಯ್ ಅದು ಸರಿ ಇಲ್ಲ ಈ ಬಳೆ ಚೆನ್ನಾಗಿದೆ ಎನ್ನುತ್ತಾ ಅವಳ ಸ್ನೇಹಿತರ ಜೊತೆ ಉಲ್ಲಾಸದಿಂದ ಬಳೆಗಳನ್ನು ಆರಿಸುತ್ತಾ ಇದ್ದಳು. ಬಾಯಿ ಬಿಟ್ಟುಕೊಂಡು ಅವಳ ಮುದ್ದಾದ ನಗು ನೋಡುತ್ತಾ ನಿಂತುಬಿಟ್ಟೆ. ಅಂತು ಇಂತೂ ಸಿದ್ದಪ್ಪಜ್ಜನ ಜಾತ್ರೆಯಲ್ಲಿ ನಮ್ಮಮ್ಮನಿಗೆ ಮುದ್ದಾದ ಸೊಸೆ ಸಿಕ್ಕಳು ಅಂದುಕೊಂಡು ಹೇಗಾದ್ರು ಮಾಡಿ ಇವಳನ್ನು ಪರಿಚಯ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಿದೆ.

ಕೈಯಲ್ಲಿ ಇದ್ದ ಸಾಮಾನುಗಳನ್ನು ಅಮ್ಮನಿಗೆ ಕೊಟ್ಟು ಹತ್ತು ನಿಮಿಷ ಇಲ್ಲೇ ಇರು ಶ್ವೇತಳಿಗೆ ಬಳೆ ಕೊಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಶ್ವೇತಳನ್ನು ಎತ್ತಿಕೊಂಡು ಬಳೆ ಅಂಗಡಿ ಹತ್ತಿರ ಹೊರಟೇ ಬಿಟ್ಟೆ. ನಾನು ಬರುತ್ತೇನೆ ಇರೋ ಅಂತ ಅಮ್ಮ ಕೂಗುತ್ತಿದ್ದರೂ ಕೇಳಿಸಿಯೂ ಕೇಳಿಸದ ತರಹ ನಟಿಸಿ ಬಳೆ ಅಂಗಡಿ ಹತ್ತಿರ ಬೇಗ ಬೇಗ ಹೊರಟೆ. ಆ ಮುದ್ದಾದ ಹುಡುಗಿಯ ಹತ್ತಿರ ಹೋಗುತ್ತಿದ್ದಂತೆ ಎದೆಯ ಬಡಿತ ಜೋರಾಗತೊಡಗಿತು. ಗಟ್ಟಿ ಧೈರ್ಯ ಮಾಡಿ ಅವಳ ಪಕ್ಕದಲ್ಲಿ ನಿಂತುಕೊಂಡೆ.ಬಳೆಗಳನ್ನು ಆರಿಸುವ ನೆಪದಲ್ಲಿ ಅವಳ ಕಡೆ ಕದ್ದು ಕದ್ದು ನೋಡತೊಡಗಿದೆ. ದೂರದಿಂದ ನೋಡಿದಾಗ ಎಷ್ಟು ಮುದ್ದಾಗಿ ಕಾಣುತ್ತಿದ್ದಳೋ ಅದರ ಎರಡರಷ್ಟು ಮುದ್ದಾಗಿ ಹತ್ತಿರದಿಂದ ಕಾಣುತ್ತಿದ್ದಳು.ಲೋ ಚಿಕ್ಕಪ್ಪ ನನಗೆ ಬಳೆ ಆರಿಸು ಅಂತ ಶ್ವೇತ ಬೈಯ್ಯಲು ಶುರು ಮಾಡಿದಳು. ಜೀವನದಲ್ಲಿ ಮೊದಲ ಬಾರಿಗೆ ಬಳೆ ಆರಿಸುತ್ತಾ ಇದ್ದೇನೆ. ಅದು ಹೆಂಗ್ ಆರಿಸಬೇಕು ಅಂತಾನೆ ಗೊತ್ತಾಗುತ್ತಿಲ್ಲ.

ಬರಿ ಕೈಯಲ್ಲಿ ಹೋದರೆ ನಮ್ ಅಮ್ಮ ನನ್ನ ಜನ್ಮ ಜಾಲಾಡಿಬಿಡ್ತಾಳೆ.ಹೆಂಗಪ್ಪ ಆರಿಸೋದು ಅಂತ ಯೋಚನೆ ಮಾಡುತ್ತಾ ಇರುವಾಗ ತಲೆಯಲ್ಲಿ ಒಂದು ಉಪಾಯ ಹೊಳೆಯಿತು. ಪಕ್ಕದಲ್ಲಿ ಇದ್ದ ಆ ಮುದ್ದಾದ ಹುಡುಗಿಯ ಸಹಾಯ ಕೇಳಿದರೆ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಬಹುದು ಎಂದು ಯೋಚಿಸಿದೆ. ಅಂದುಕೊಂಡ ಹಾಗೆ ಹಲೋ ಸ್ವಲ್ಪ ಸಹಾಯ ಮಾಡ್ತೀರಾ ಅಂತ ಹೇಳೇಬಿಟ್ಟೆ. ನನ್ನ ಮಾತು ಕೇಳಿಸಿಕೊಂಡು ಆ ಕಡೆಯಿಂದ ನನ್ನ ಕಡೆಗೆ ತಿರುಗಿದಳು. ಮೊದಲ ಬಾರಿಗೆ ಅವಳ ಮುದ್ದಾದ ಮುಖವನ್ನು ನೇರವಾಗಿ ನೋಡಿದೆ. ಬಾಯಿ ಬಿಟ್ಟುಕೊಂಡು ಆ ಮುದ್ದಾದ ಕಣ್ಣುಗಳನ್ನು ನೋಡುತ್ತಾ ಇದ್ದಾಗ ಲೋ ಚಿಕ್ಕಪ್ಪ ಬಳೆ ಕೊಡ್ಸೋ ಅಂತ ನಮ್ಮ ಕೋತಿಮರಿ ಶ್ವೇತ ನನ್ನನ್ನು ಎಚ್ಚರಿಸಿದಳು. ಹಾ ಸರಿ ಅಂತ ಆ ಮುದ್ದಾದ ಹುಡುಗಿಯ ಕಡೆ ಸ್ವಲ್ಪ ಬಳೆ ಆರಿಸೋಕೆ ಸಹಾಯ ಮಾಡುತ್ತೀರಾ ಅಂತ ಮತ್ತೇ ಕೇಳಿದೆ. ಹೂ ಸರಿ ಅಂತ ಅವಳು ಶ್ವೇತಳಿಗೆ ಬಳೆ ಆರಿಸೋಕೆ ಶುರುಮಾಡಿದಳು.

ಎಷ್ಟು ಮುದ್ದಾಗಿ ಆರಿಸುತ್ತಾ ಇದ್ದಳು ಎಂದರೆ ನಮ್ ಅಣ್ಣನ ಮಗಳಿಗೆ ಇಷ್ಟೊಂದು ಸೊಗಸಾಗಿ ಆರಿಸೋಳು ನಮ್ಮ ಮಗಳಿಗೆ ಇನ್ನೆಷ್ಟು ಚೆನ್ನಾಗಿ ಆರಿಸುತ್ತಾಳೋ ಅಂತ ಮನಸಲ್ಲಿ ಅಂದುಕೊಳ್ಳುತಿದ್ದೆ. ಬಳೆ ಆರಿಸಿದ ಮೇಲೆ ನಿಮ್ಮ ಮಗಳು ತುಂಬಾ ಮುದ್ದಾಗಿದ್ದಾಳೆ ಅಂತ ಅಂದಳು, ಅದಕ್ಕೆ ನಾನು ಅಯ್ಯೋ ಅವಳು ನನ್ನ ಮಗಳು ಅಲ್ಲ ನಮ್ ಅಣ್ಣನ ಮಗಳು ಎಂದೆ. ಅದಕ್ಕೆ ಅವಳು ಅಯ್ಯೋ ಸಾರೀ ನಿಮ್ಮ ಮಗಳು ಅಂತ ಅಂದುಕೊಂಡೆ ಅಂತ ಹೇಳಿ ನಕ್ಕಳು. ಆ ನಗು ನೋಡಿ ಮನದಲ್ಲಿ ಅವಳ ಮೇಲೆ ಪ್ರೀತಿ ಶುರುವಾಗುವ ಎಲ್ಲಾ ಲಕ್ಷಣಗಳು ಕಂಡುಬಂತು. ಚಿಕ್ಕಪ್ಪ ಅಕ್ಕ ಆರಿಸಿದ ಬಳೆ ತುಂಬಾ ಚೆನ್ನಾಗಿದೆ ಎಂದು ಶ್ವೇತ ಅದೇ ಸಮಯದಲ್ಲಿ ಹೇಳಿದಳು. ಸಿಕ್ಕ ಅವಕಾಶವನ್ನೇ ಉಪಯೋಗಿಸಿ ಹೌದ ಪುಟ್ಟ ನಿಮ್ ಅಕ್ಕನ ಹೆಸರು ಏನು ಕೇಳು ಅಂತ ಹೇಳಿದೆ. ಅಕ್ಕ ನಿನ್ ಹೆಸರು ಏನು ಅಂತ ಶ್ವೇತ ಕೇಳಿದಳು.

ಅದಕ್ಕೆ ಆ ಮುದ್ದಾದ ಹುಡುಗಿ ನನ್ನ ಹೆಸರು ಜಾನಕಿ ಪುಟ್ಟ ಎಂದು ಹೇಳಿ ಶ್ವೇತಳ ಕೆನ್ನೆಗೆ ಮುತ್ತು ಕೊಟ್ಟಳು. ಅದನ್ನು ಕಂಡು ಅಯ್ಯೋ ನನ್ನ ಕೆನ್ನೆಗೆ ಯಾವಾಗ ಸಿಗುತ್ತದೋ ಅಂದುಕೊಂಡೆ. ನಂತರ ನಾನು ಬರುತ್ತೇನೆ ಬೈ ಎಂದು ಹೇಳಿ ಹೊರಟೆ ಹೋದಳು. ಮತ್ತೆ ಅವಳನ್ನು ಯಾವಾಗ ನೋಡುತ್ತೇನೋ, ಅಥವ ನೋಡುವುದೇ ಇಲ್ಲವೋ ಅಂತ ಅಂದುಕೊಂಡು ಅಲ್ಲಿಂದ ಅಮ್ಮನಿರುವ ಕಡೆಗೆ ಹೊರಟೆ. ಯಾಕೋ ಇಷ್ಟೊತ್ತು ಬೇಗ ಬರೋಕೆ ಆಗಲ್ವ ಅಂತ ಬಯ್ಯುತ್ತಾ ಪರವಾಗಿಲ್ಲ ನಿನಗೂ ಬಳೆಗಳನ್ನು ಆರಿಸೋಕೆ ಬರುತ್ತೆ ಅಂತ ಹೇಳಿದಳು. ಅದಕ್ಕೆ ಶ್ವೇತ ಅಯ್ಯೋ ಅಜ್ಜಿ ಅದನ್ನ ಆರಿಸಿದ್ದು ಚಿಕ್ಕಪ್ಪ ಅಲ್ಲ ಅಲ್ಲಿ ಒಬ್ಬ ಅಕ್ಕ ಇದ್ದಳು ಅವಳು ಅಂತ ಅಂದೇ ಬಿಟ್ಟಳು. ಅನುಮಾನದ ನೋಟದಿಂದ ಅಮ್ಮ ನನ್ನ ಕಡೆಗೆ ನೋಡೋಕೆ ಶುರುಮಾಡಿದಳು. ಯೇ ಮುದುಕಿ ಅದೆಲ್ಲಾ ಏನಿಲ್ಲ ನಡಿ ನಡಿ ಅಂತ ಮನೆ ಕಡೆ ಹೊರಟೆವು.

ಜಾನಕಿಯನ್ನು ನೋಡಿದ ಆ ಕ್ಷಣದಿಂದ ಇವತ್ತಿನವರೆಗೂ ಅವಳದೇ ನೆನಪು. ಮತ್ತೆ ಎಲ್ಲಿ ಸಿಕ್ತಾಳೋ, ಅವಳು ಎಲ್ಲಿ ಇರ್ತಾಳೆ, ಅವಳನ್ನು ಇನ್ನೊಮ್ಮೆ ನೋಡಬೇಕು ಅಂತೆಲ್ಲ ಅನ್ನಿಸುತ್ತಾ ಇದೇ. ಆದರೆ ಅದು ಆಗುವುದೋ ಇಲ್ಲವೋ ಗೊತ್ತಿಲ್ಲ. ಹೇಗಾದರು ಮಾಡಿ ಅವಳು ಇನ್ನೊಮ್ಮೆ ಸಿಗಲಿ ಅಂತ ದೇವರ ಹತ್ತಿರ ಪ್ರತಿದಿನ ಪ್ರಾರ್ತಿಸುತ್ತಾ ಇದ್ದೇನೆ. ನನ್ನ ಪರವಾಗಿ ಸ್ವಲ್ಪ ನೀವು ದೇವರ ಹತ್ತಿರ ಪ್ರಾರ್ಥಿಸುತ್ತಿರಾ ಪ್ಲೀಸ್?

For more Stories follow Karunadu Today

Click here to Join Our Whatsapp Group