
ಯುದ್ಧವೆಂದರೆ ಯಾರಿಗೆ ಭಯವಿಲ್ಲ ನೀವೇ ಹೇಳಿ. ಹೆಣಗಳ ರಾಶಿಯನ್ನು ನೋಡಲು ಯಾರೂ ಇಷ್ಟ ಪಡುವುದಿಲ್ಲ. ಹಾಗಂತ ಸುಮ್ಮನೆ ಇರಲೂ ಸಾದ್ಯವಿಲ್ಲ. ಏಕೆಂದರೆ ಮನುಷ್ಯನ ಗುಣವೇ ಹಾಗಿದೆ, ತನ್ನ ಸ್ವಾರ್ಥಕ್ಕಾಗಿ, ಅತಿಯಾದ ಆಸೆಯಿಂದಾಗಿ ಹಾಗು ತಾನು ಬಲಿಷ್ಠನೆಂದು ನಿರೂಪಿಸಲು ಮತ್ತೊಬ್ಬ ವ್ಯಕ್ತಿಯ ಮೇಲೆ ಯುದ್ದಕ್ಕೆ ಹೋಗುತ್ತಾನೆ. ಈ ಭೂಮಿ ಸೃಷ್ಠಿ ಆದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಯುದ್ದ ಆಗುತ್ತಲೇ ಇವೆ. ಆದರೆ ವ್ಯತ್ಯಾಸವೆಂದರೆ ರಾಜರ ಮದ್ಯೆ ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಯುದ್ದಗಳಲ್ಲಿ ಪ್ರಕೃತಿಯನ್ನು ನಾಶ ಮಾಡುವಂತಹ ಆಯುಧಗಳು ಇರಲಿಲ್ಲ ಆದರೆ ಈಗ ಸಂಪೂರ್ಣ ಭೂಮಿಯನ್ನೇ ನಾಶ ಮಾಡುವಂತಹ ಶಸ್ತ್ರಾಸ್ತ್ರಗಳಿವೆ. ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಅನೇಕ ಭಯಂಕರ ಯುದ್ದಗಳು ಆಗಿರುವುದನ್ನು ಕಾಣಬಹುದು. ಪ್ರಪಂಚದ ಅನೇಕ ದೇಶಗಳ ಮದ್ಯೆ 90 ವರ್ಷಗಳ ಹಿಂದೆ ನಡೆದ ಎರಡು ಪ್ರಪಂಚ ಯುದ್ದಗಳು ಇದಕ್ಕೆ ಒಂದು ಉತ್ತಮ ಉದಾಹರಣೆ. ವಿಶ್ವದ ಬಲಿಷ್ಠ ರಾಷ್ಟ್ರಗಳು ಆಗಿರುವ ಜರ್ಮನಿ, ಅಮೇರಿಕ, ರಷ್ಯಾ, ಜಪಾನ್, ಫ್ರಾನ್ಸ್ ಹೀಗೆ ಅನೇಕ ದೇಶಗಳು ಒಬ್ಬರ ಮೇಲೆ ಒಬ್ಬರು ನಡೆಸಿಕೊಂಡ ದಾಳಿಗಳಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಎರಡೂ ಯುದ್ದಗಳು ಆದ ಮೇಲೆ ಬುದ್ದಿ ಕಲಿತ ಎಲ್ಲಾ ದೇಶಗಳು ಇನ್ನೊಮ್ಮೆ ಯುದ್ದ ಆಗಬಾರದೆಂದು ಅದೇನೇ ಸಮಸ್ಯೆಗಳು ಬಂದರೂ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಅನೇಕ ಸಾವು ನೋವು ಕಂಡ ಮೇಲೆ ಇನ್ನೊಮ್ಮೆ ಯಾವುದೇ ಯುದ್ದ ಆಗಬಾರದೆಂದು ಎಲ್ಲಾ ರಾಷ್ಟ್ರಗಳು ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ಸಮಸ್ಯೆ ಇದ್ದರೂ ಮಾತಿನ ಮೂಲಕವೇ ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಆದರೆ ಕೆಲವು ರಾಷ್ಟ್ರಗಳು ಹಾಗು ವ್ಯಕ್ತಿಗಳು ಮಾತ್ರ ಪಿತೂರಿಗಳ ಮೂಲಕ ಮತ್ತೆ ಯುದ್ದ ಮಾಡಿಸಲು ಸದಾ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪೂರಕವಾಗುವಂತೆ ಸಾಕಷ್ಟು ಶಕ್ತಿಶಾಲಿಯಾಗಿರುವ ಶಸ್ತ್ರಾಸ್ತ್ರಗಳನ್ನು ತಯಾರಿ ಮಾಡಿಕೊಂಡಿದ್ದಾರೆ. ಇಂತಹ ಅಪಾಯಕಾರಿ ಶಸ್ತ್ರಾಸ್ತಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು “ಪರಮಾಣು ಬಾಂಬ್”. ಇದನ್ನು ಮೊಟ್ಟ ಮೊದಲ ಬಾರಿಗೆ ಅಮೆರಿಕವು 1945 ರಲ್ಲಿ ಜಪಾನಿನ ಹಿರೋಷಿಮಾ ಹಾಗು ನಾಗಸಾಕಿ ನಗರಗಳ ಮೇಲೆ ಹಾಕಿ ಪ್ರಯೋಗ ಮಾಡಿತ್ತು. ಈ ಬಾಂಬಿನ ಶಕ್ತಿ ಕಂಡು ಅಂದು ಸಂಪೂರ್ಣ ವಿಶ್ವವೇ ಹೆದರಿತ್ತು. ಎರಡನೆಯ ಪ್ರಪಂಚ ಯುದ್ದ ನಡೆಯುವ ವೇಳೆ ಹಾಕಿದ ಈ ಬಾಂಬ್ ಸಾಕಷ್ಟು ನಾಶ ಮಾಡುವುದರ ಜೊತೆಗೆ ಸಂಪೂರ್ಣ ಭೂಮಿಯನ್ನೇ ನಾಶ ಮಾಡುವ ಸೂಚನೆ ನೀಡಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಜಗತ್ತು ಇನ್ನು ಯಾವುದೇ ಯುದ್ದಗಳು ನಡೆಯಬಾರದೆಂದು ಪ್ರಪಂಚ ಯುದ್ದವನ್ನು ಅಲ್ಲಿಗೆ ನಿಲ್ಲಿಸಿತು.
ಆದರೆ ಮನುಷ್ಯನ ದುರಾಸೆ ಹಾಗು ತಾನು ಬಲಿಷ್ಠನಾಗಬೇಕು ಎನ್ನುವ ಆಸೆಯಿಂದ ಪ್ರಪಂಚದ ಎಲ್ಲಾ ದೇಶಗಳು ಈ ಪರಮಾಣು ಬಾಂಬ್ ಅನ್ನು ಹೊಂದಲು ಶುರುಮಾಡಿದವು. ಆದರೆ ಕೆಲವು ರಾಷ್ಟ್ರಗಳು ಮಾತ್ರ ಶತ್ರುಗಳಿಂದ ತಮಗೆ ಬರುವ ಅಪಾಯದಿಂದ ತಪ್ಪಿಸಿಕೊಳ್ಳಲು ಈ ಪರಮಾಣು ಬಾಂಬ್ ಅನ್ನು ಹೊಂದಿದವು. ಈ ಬಾಂಬ್ ನಿಂದ ಭೂಮಿಗೆ ಅಪಾಯವಿದೆ ಎಂದು ಗೊತ್ತಿದ್ದರೂ ಎಲ್ಲಾ ದೇಶಗಳು ಇದನ್ನು ಹೊಂದಿರುವುದು ವಿಪರ್ಯಾಸ.

ಎರಡನೆಯ ಪ್ರಪಂಚ ಯುದ್ದದ ಬಳಿಕ ಪ್ರಪಂಚದಲ್ಲಿ ತಾನು ಬಲಿಷ್ಠ ರಾಷ್ಟ್ರವಾಗಿ ಎಲ್ಲರ ಮೇಲೂ ದಬ್ಬಾಳಿಕೆ ಮಾಡಬೇಕು ಎನ್ನುವ ದುರಾಸೆಯಿಂದ ಅಮೇರಿಕವು ಬಯಸುತ್ತಿತ್ತು. ಆದರೆ ಇದಕ್ಕೆ ಅಡ್ಡಲಾಗಿ ರಷ್ಯಾ ದೇಶವು ನಿಂತಿತ್ತು. ಅಮೇರಿಕ ಹೋಗುವ ಪ್ರತಿಯೊಂದು ದಾರಿಯಲ್ಲೂ ರಷ್ಯಾ ದೇಶವು ಅಡ್ಡಲಾಗಿ ಬರುತ್ತಿತ್ತು. ಬಾಹ್ಯಾಕಾಶಕ್ಕೆ ಕಳುಹಿಸುವ ಮೊಟ್ಟ ಮೊದಲ ರಾಕೆಟ್ ನಿಂದ ಹಿಡಿದು ದೇಶದ ಪ್ರಗತಿಯಲ್ಲೂ ಈ ಎರಡೂ ದೇಶಗಳು ಒಂದರ ಮೇಲೊಂದು ಜಿದ್ದು ಸಾದಿಸುತ್ತಲೇ ಇದ್ದವು. ಇದನ್ನು “ಕೋಲ್ಡ್ ವಾರ್” ಎಂದು ಕರೆಯುತ್ತಾರೆ. ಆದರೆ 1962 ರಲ್ಲಿಇವರಿಬ್ಬರ ಮಧ್ಯೆ ಇರುವ ದ್ವೇಷದ ಹಗೆಯು ಮಿತಿ ಮೀರಿ ಮತ್ತೊಂದು ವಿಶ್ವ ಯುದ್ಧ ಆಗುವ ಮಟ್ಟಕ್ಕೆ ಹೋಗಿತ್ತು. ಅಕಸ್ಮಾತ್ ಏನಾದರು ಅದು ನಡೆದು ಹೋಗಿದ್ದಿದ್ದರೆ ಈ ಭೂಮಿಯು ಸರ್ವನಾಶವಾಗುತ್ತಿತ್ತು. ಏಕೆಂದರೆ ಎರಡೂ ದೇಶಗಳ ಬಳಿ ಪರಮಾಣು ಬಾಂಬ್ ಇದ್ದಿದ್ದರಿಂದ ಯುದ್ದದ ಪರಿಣಾಮ ತುಂಬಾ ಭಯಂಕರವಾಗಿರುತ್ತಿತ್ತು. ಆದರೆ ಈ ಯುದ್ದ ನಡೆಯದ ಹಾಗೆ ತಡೆಯಲು ದೇವರ ರೂಪದಲ್ಲಿ ಇಬ್ಬರು ವ್ಯಕ್ತಿಗಳು ರಷ್ಯಾ ದೇಶದ ಮಿಲಿಟರಿಯಲ್ಲಿ ಇದ್ದರು. ಆ ಇಬ್ಬರಿಂದಲೇ ಅಂದು ನಡೆಯಬೇಕಾಗಿದ್ದ ದೊಡ್ಡ ಮಟ್ಟದ ಅನಾಹುತ ತಪ್ಪಿದ್ದು. ಈ ಇಬ್ಬರು ತೆಗೆದುಕೊಂಡ ಒಂದೇ ಒಂದು ತೀರ್ಮಾನದಿಂದ ಈ ಭೂಮಿಯು ಇನ್ನೂ ಜೀವಂತವಾಗಿದೆ. ಬನ್ನಿ ಇಂದು ನಿಮಗೆ ಆ ವ್ಯಕ್ತಿಗಳ ಹಾಗು ಅವರು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ. ಮುಂದೆ ಓದಿ.

ನಾನು ನಿಮಗೆ ಹೇಳ ಹೊರಟಿರುವ ಮೊದಲನೆಯ ವ್ಯಕ್ತಿಯ ಹೆಸರು “ವಸಿಲಿ ಆರ್ಖಿಫೋವ”. ರಷ್ಯಾ ದೇಶದ “ಪರಮಾಣು ಸಬ್ಮರೀನ್“ ಒಂದರ ಮೂರು ಕ್ಯಾಪ್ಟನ್ ಆಗಿದ್ದವರ ಪೈಕಿ ಇವರೂ ಒಬ್ಬರಾಗಿದ್ದರು. ಅದು 1962 ರಷ್ಯಾ ಹಾಗು ಅಮೆರಿಕದ ನಡುವೆ ಇದ್ದ ಕೋಲ್ಡ್ ವಾರ್ ಮಿತಿ ಮೀರಿತ್ತು. ಅಮೆರಿಕವು ಟರ್ಕಿ ಮತ್ತು ಇಟಲಿಯಲ್ಲಿ ತನ್ನ ಪರಮಾಣು ಮಿಸೈಲ್ ಅನ್ನು ರಷ್ಯಾದ ಕಡೆ ಮುಖ ಮಾಡಿ ಇಡಲು ನಿರ್ಧರಿಸಿತ್ತು. ಇದನ್ನು ಕಂಡು ರಷ್ಯಾವು ಕ್ಯೂಬಾದ ದ್ವೀಪದಲ್ಲಿ ತನ್ನ ಪರಮಾಣು ಅಸ್ತ್ರಗಳನ್ನು ಅಮೆರಿಕಾದ ಕಡೆಗೆ ಮುಖ ಮಾಡಿ ಇಡಲು ನಿರ್ಧರಿಸಿತ್ತು. ಇದನ್ನು ಹೇಗಾದರೂ ತಪ್ಪಿಸಬೇಕೆಂದು ಅಮೆರಿಕವು ತನ್ನ ನೌಕಾದಳಕ್ಕೆ ಕ್ಯೂಬಾ ದ್ವೀಪದ ಸುತ್ತಲೂ ಆಕ್ರಮಿಸಲು ಆಜ್ಞೆ ನೀಡಿತ್ತು. ಇನ್ನೇನು ಯುದ್ದ ಆರಂಭವಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಎರಡೂ ದೇಶಗಳು ಶಾಂತಿಯುತವಾಗಿ ಸಮಸ್ಯೆ ಬಗೆ ಹರಿಸಿಕೊಂಡವು. ಆದರೆ ಇದನ್ನು ಅರಿಯದೆ ಕ್ಯೂಬಾ ದ್ವೀಪದ ಕಡೆ ಹೊರಟಿದ್ದ ರಷ್ಯಾ ದೇಶದ ಪರಮಾಣು ಸಬ್ಮರೀನ್ ಮೇಲೆ ಅಮೆರಿಕಾದ ನೌಕಾ ಪಡೆಯು ಆಕಸ್ಮಿಕವಾಗಿ ಡೆಪ್ತ್ ಚಾರ್ಜ್ ಬಾಂಬ್ ಹಾಕಿತು. ಇದನ್ನು ಕಂಡು ಯುದ್ದ ಆರಂಭವಾಗಿದೆ ಎಂದು ಆ ಸಬ್ಮರಿನ್ ಒಳಗಿದ್ದವರು ತಿಳಿದರು. ಇದನ್ನು ಖಾತ್ರಿ ಮಾಡಿಕೊಳ್ಳಲು ರಷ್ಯಾ ದೇಶದ ರಾಜಧಾನಿ ಮಾಸ್ಕೋ ನಗರಕ್ಕೆ ಸಂಪರ್ಕಿಸಲು ಪ್ರಯತ್ನಿಸಿದರೆ ರೇಡಿಯೋ ಸಿಗ್ನಲ್ ಗಳು ಸರಿಯಾಗಿ ಕೆಲಸ ಮಾಡದೆ ಸಂಪರ್ಕಿಸಲಾಗಲಿಲ್ಲ. ಆಗ ಆ ಸಬ್ಮರಿನ್ ಒಳಗಿದ್ದ ಮೂರು ಕ್ಯಾಪ್ಟನ್ ಗಳು ಪರಮಾಣು ಬಾಂಬ್ ಅನ್ನು ಪ್ರಯೋಗ ಮಾಡಲು ಮಾತುಕತೆ ನಡೆಸಿದರು. ಇದ್ದ ಮೂವರಲ್ಲಿ ಇಬ್ಬರು ಕ್ಯಾಪ್ಟನ್ಗಳು ಅಮೆರಿಕಾದ ಮೇಲೆ ಪರಮಾಣು ಬಾಂಬ್ ಹಾಕಲು ಒಪ್ಪಿಗೆ ಸೂಚಿಸಿದರೆ ಇನ್ನೊಬ್ಬ ಕ್ಯಾಪ್ಟನ್ ಆಗಿದ್ದ “ವಸಿಲಿ ಆರ್ಖಿಫೋವ” ಮಾತ್ರ ಇದಕ್ಕೆ ವಿರೋಧ ವ್ಯಕ್ತ ಪಡಿಸಿ ಸ್ವಲ್ಪ ತಾಳ್ಮೆಯಿಂದ ಇರಲು ಹೇಳಿದ. ಈ ಸಬ್ಮರೀನ್ ಮೇಲೆ ಯಾವುದೇ ದಾಳಿ ನಡೆದರೂ ತತ್ಕ್ಷಣವೇ ಅಮೆರಿಕಾದ ಮೇಲೆ ಪರಮಾಣು ಬಾಂಬ್ ಹಾಕುವಂತೆ ರಷ್ಯಾ ಸರ್ಕಾರ ಮೊದಲೇ ಆಜ್ಞೆ ನೀಡಿತ್ತು.

ಇದು ತಿಳಿದಿದ್ದರೂ “ವಸಿಲಿ ಆರ್ಖಿಫೋವ” ಮಾತ್ರ ಸಬ್ಮರಿನ್ ಒಳಗಿದ್ದ ಎಲ್ಲರಿಗೂ ಸ್ವಲ್ಪ ತಾಳ್ಮೆಯಿಂದ ಇರುವಂತೆ ಹೇಳಿದ್ದ. ಉಳಿದ ಇಬ್ಬರು ಕ್ಯಾಪ್ಟನ್ ಗಳು ಅಮೆರಿಕಾವು ನಮ್ಮ ಮೇಲೆ ಯುದ್ದ ಸಾರಿದೆ ನಾವು ಪರಮಾಣು ಪ್ರಯೋಗಿಸಲೇ ಬೇಕು ಎಂದು ಎಷ್ಟೇ ಹೇಳಿದರೂ “ವಸಿಲಿ ಆರ್ಖಿಫೋವ” ಮಾತ್ರ ಆ ಇಬ್ಬರು ಕ್ಯಾಪ್ಟನ್ ಗಳಿಗೆ ಇದು ಯುದ್ದವಲ್ಲ ಆತುರದಿಂದ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಹೇಳಿ ಸಮಾಧಾನ ಪಡಿಸಿ ಪರಮಾಣು ಬಾಂಬ್ ಅನ್ನು ಸ್ಪೋಟಿಸುವ ಅವರ ನಿರ್ಧಾರವನ್ನು ಬದಲಿಸಿದ್ದ. ಕೊನೆಗೆ ಆ ಸಬ್ಮರಿನ್ ಸಮುದ್ರದ ಒಳಗಿನಿಂದ ಮೇಲೆ ಬರುತ್ತಿದ್ದಂತೆ ರೇಡಿಯೋ ಸಿಗ್ನಲ್ಗಳ ಮೂಲಕ ಮಾಸ್ಕೋ ನಗರದಲ್ಲಿ ಇರುವ ಕಚೇರಿಗೆ ಸಂಪರ್ಕಿಸಿ ವಿಷಯವನ್ನು ತಿಳಿಸಿದರು. ಆಗ ಯಾವುದೇ ಆಕ್ರಮಣ ಮಾಡದಂತೆ ಅವರಿಗೆ ಆಜ್ಞೆ ನೀಡಲಾಯಿತು. ಇದನ್ನು ಕೇಳಿದ ಉಳಿದಿಬ್ಬರು ಕ್ಯಾಪ್ಟನ್ ಗಳು “ವಸಿಲಿ ಆರ್ಖಿಫೋವ” ಅವರು ತೆಗೆದುಕೊಂಡ ನಿರ್ಧಾರ ಸರಿಯಾಗಿತ್ತು ಎಂದು ಅವರನ್ನು ಪ್ರಶಂಸಿಸಿದರು. ಅಂದು ಅಕಸ್ಮಾತ್ “ವಸಿಲಿ ಆರ್ಖಿಫೋವ” ಅವರು ಅಮೆರಿಕಾದ ಮೇಲೆ ಪರಮಾಣು ಬಾಂಬ್ ಹಾಕಲು ಒಪ್ಪಿಗೆ ನೀಡಿದಿದ್ದಿದ್ದರೆ ದೊಡ್ಡ ಅನಾಹುತ ಆಗುವದರ ಜೊತೆಗೆ ಮೂರನೆಯ ವಿಶ್ವ ಯುದ್ದ ಆಗುತ್ತಿತ್ತು.

ಎರಡನೆಯ ವ್ಯಕ್ಥಿಯ ಹೆಸರು “ಸ್ಟ್ಯಾನಿ ಸ್ಲಾವ್ ಪೆಟ್ರೋವ್”. ಸೆಪ್ಟೆಂಬರ್ 26, 1983 ರಂದು ಇವರು ತೆಗೆದುಕೊಂಡ ಒಂದೇ ಒಂದು ನಿರ್ಧಾರವು ಕೋಟಿ ಜೀವಿಗಳ ಪ್ರಾಣ ಉಳಿಸಿದೆ. ರಷ್ಯಾ ದೇಶದ ವಾಯುಪಡೆಯಲ್ಲಿ ಒಬ್ಬ ಅಧಿಕಾರಿಯಾಗಿದ್ದ ಇವರು ಸೆಪ್ಟೆಂಬರ್ 26, 1983 ರಂದು ಎಂದಿನಂತೆ ತಮ್ಮ ಕಚೇರಿಯಲ್ಲಿ ಕೂತಿದ್ದರು.ಇವರ ಕೆಲಸ ಶತ್ರು ಸೇನೆಯು ಯಾವುದೇ ಮಿಸೈಲ್ ಅನ್ನು ರಷ್ಯಾ ದೇಶದ ಕಡೆಗೆ ಉಡಾಯಿಸಿದರೆ ಅದನ್ನು ಮೇಲಿನ ಅಧಿಕಾರಿಗಳಿಗೆ ತಿಳಿಸುವುದು. ಅಂದು ಒಮ್ಮೆಲೆ ಐದು ಪರಮಾಣು ಬಾಂಬ್ ಗಳು ಅಮೇರಿಕದಿಂದ ರಷ್ಯಾ ಕಡೆಗೆ ಬರುತ್ತಿರುವುದನ್ನು ಸಿಗ್ನಲ್ ಮೂಲಕ ತಿಳಿದು ಗಾಬರಿಯಾಗಿದ್ದರು. ಇದರ ಬಗ್ಗೆ ಕೇವಲ 15 ನಿಮಿಷಗಳಲ್ಲಿ ಮೇಲಿನ ಅಧಿಕಾರಿಗಳಿಗೆ ತಿಳಿಸಬೇಕಿತ್ತು ಆದರೆ ಯಾರಿಗೂ ತಿಳಿಸದೆ ತಾಳ್ಮೆಯಿಂದ ಇರಲು ತೀರ್ಮಾನಿಸಿದರು. ಆ ತಾಳ್ಮೆಯಿಂದಲೇ ಅವುಗಳು ಪರಮಾಣು ಬಾಂಬ್ ಅಲ್ಲ ಸೂರ್ಯನ ಕಿರಣಗಳು ಈ ರೀತಿಯಾಗಿ ನಮಗೆ ತಪ್ಪು ಸಿಗ್ನಲ್ ನೀಡುತ್ತಿವೆ ಎಂದು ತಿಳಿದುಕೊಂಡರು. ಇದರಿಂದ ಅಂದು ಅವರು ತಮ್ಮ ಮೇಲಿನ ಅಧಿಕಾರಿಗಳಿಗೆ ತಿಳಿಸದೆ ತಾವೇ ನಿರ್ಧಾರ ತೆಗೆದುಕೊಳ್ಳುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದರು.
ಅದಕ್ಕೆ ಹೇಳುವುದು ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದೆಂದು. ಅಂದು ಇವರೂ ಕೂಡ ಆತುರದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದಿದ್ದರೆ ಇಂದು ನಾವು ಈ ಭೂಮಿಯ ಮೇಲೆ ಇರುತ್ತಿರಲಿಲ್ಲ. ಯುದ್ದಮಾಡುವುದು ದೊಡ್ಡದಲ್ಲ ಅದರ ಪರಿಣಾಮವನ್ನು ಅನುಭವಿಸುವುದು ಕಷ್ಟ. ಆದರೆ ಬೇಸರದ ಸಂಗತಿಯೆಂದರೆ ಇದನ್ನು ಅರಿಯದೆ ಜಗತ್ತಿನ ಅದೆಷ್ಟೋ ಜನರು ಸುಲಭವಾಗಿ ಯುದ್ದ ಸಾರಲು ಸೋಶಿಯಲ್ ಮೀಡಿಯಾಗಳಲ್ಲಿ ವೀರರಂತೆ ವರ್ತಿಸುತ್ತಾರೆ. ಅಂದು ಈ ಇಬ್ಬರು ರಷ್ಯಾ ದೇಶದ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರದ ಕಥೆಯು ಈಗಿನ ಸೋಶಿಯಲ್ ಮೀಡಿಯಾದಲ್ಲಿ ಯುದ್ದ ಬೇಕೆನ್ನುವ ವೀರರಿಗೆ ಒಂದು ಒಳ್ಳೆಯ ಸಂದೇಶವನ್ನು ನೀಡಿದೆ.
Follow Karunadu Today for more Interesting Facts & Stories.
Click here to Join Our Whatsapp Group