ಪ್ರತಿದಿನದಂತೆ ಅಂದೂ ಕೂಡ ಬಸ್ಸಿಗೆ ಕಾಯುತ್ತಾ ಕೂತಿದ್ದೆ, ಆದರೆ ಬಸ್ಸು ಬರದ ಕಾರಣ ಅಣ್ಣ ಕೊಡಿಸಿದ್ದ ಹೊಸ ಮೊಬೈಲ್ನಿಂದ ತೆಗೆದಿದ್ದ ಫೋಟೋಗಳನ್ನು ನೋಡುತ್ತಾ ಕೂತೆ. ಅದೆಲ್ಲಿಂದಲೋ ಬಂದ ಅವಳು ನನ್ನ ಪಕ್ಕದಲ್ಲಿ ಕುಳಿತಳು. ಅಬ್ಬಾ ಎಷ್ಟೊಂದು ಬಿಸಿಲು ಎಂದು ಬಾಟಲಿಯನ್ನು ತೆಗೆದು ನೀರು ಕುಡಿಯಲು ಪ್ರಾರಂಭಿಸಿದಳು. ಬಿಸಿಲಿನ ತಾಪಕ್ಕೆ ನನಗೂ ತುಂಬಾ ಬಾಯಾರಿಕೆ ಆಗಿತ್ತು. ಅವಳು ನೀರು ಕುಡಿಯುತ್ತಿದ್ದನ್ನು ಕಂಡು ಸ್ವಲ್ಪ ನನಗೂ ಕೊಡ್ತೀರಾ ಎಂದು ಕೇಳಿದೆ. ಅದಕ್ಕೆ ಅವಳು ಹಾ ತಗೋಳಿ ಎಂದು ಕೊಟ್ಟಳು. ಹೀಗೆ ಪ್ರಾರಂಭವಾಯಿತು ನನ್ನ ಮತ್ತು ಅವಳ ಸ್ನೇಹ. ನೀರು ಕುಡಿದ ಮೇಲೆ ನಗುತ್ತ ತುಂಬಾ ಥ್ಯಾಂಕ್ಸ್ ರೀ ಈ ಬಿಸಿಲಿಗೆ ತಲೆ ಎಲ್ಲ ನೋಯುತ್ತೆ ಎಂದೆ. ಅದಕ್ಕವಳು ಹೌದು ಕಳೆದ ವರ್ಷಕ್ಕಿಂತ ಈ ವರ್ಷ ತುಂಬಾ ಬಿಸಿಲಿದೆ ಎಂದು ಹೇಳಿ ಮುಗುಳು ನಕ್ಕಳು. ಹಾಗೆಯೇ ಮಾತನಾಡುತ್ತಾ ಇಬ್ಬರು ಒಬ್ಬರಿಗೊಬ್ಬರನ್ನು ಪರಿಚಯ ಮಾಡಿಕೊಂಡೆವು. ಅವಳೂ ಕೂಡ ನನ್ನ ಹಾಗೆಯೇ ಕೆಲಸ ಹುಡುಕಿಕೊಂಡು ದೂರದ ಹುಬ್ಬಳ್ಳಿಯಿಂದ ಬಂದಿದ್ದಾಳೆ ಎಂದು ಗೊತ್ತಾಯಿತು.

”ಆಲ್ ದಿ ಬೆಸ್ಟ್, ನಿನಗೆ ಈ ಕೆಲಸ ಸಿಗುತ್ತದೆ ಜಾಸ್ತಿ ಟೆನ್ಶನ್ ಮಾಡ್ಕೋಬೇಡ” ಎಂದು ನಗುತ್ತ ಅವಳು ನನಗೆ ಹೇಳಿದಳು. ಅವಳ ಮಾತು ಕೇಳಿ ನಿಜವಾಗಿಯೂ ನನಗೆ ಕೆಲಸ ಸಿಕ್ಕಷ್ಟೇ ಖುಷಿಯಾಯಿತು. ಅದೇನೋ ಗೊತ್ತಿಲ್ಲ ಅವಳು ಹೇಳಿದ ಆ ಮಾತಿಗೋ ಅಥವಾ ನನ್ನ ಪರಿಶ್ರಮವೋ ಒಂದು ವರ್ಷದಿಂದ ಕೆಲಸಕ್ಕಾಗಿ ಅಲೆದು ಅಲೆದು ನಂಬಿಕೆಯನ್ನೇ ಕಳೆದುಕೊಂಡಿದ್ದ ನನಗೆ ಅಂದು ಕೆಲಸ ಸಿಕ್ಕಿತು. ಕೊನೆಗೂ ನನ್ನ ಕಷ್ಟದ ದಿನಗಳು ಕಳೆದವು ಎಂದುಕೊಂಡು ಈ ಖುಷಿಯ ಸಮಾಚಾರವನ್ನು ಅವಳಿಗೆ ತಿಳಿಸಲು ಹೊರಗಡೆ ಬಂದೆ. ನಾನು ಹೊರಗಡೆ ಬರುವ ಮುಂಚೆಯೇ ಅವಳು ಬಂದಿದ್ದಳು. ಅವಳ ಬಳಿ ಹೋದಾಗ ನನ್ನನ್ನು ಕಂಡು ನಗುತ್ತ ಏನಾಯಿತು ಇಂಟರ್ವ್ಯೂ ಎಂದು ಕೇಳಿದಳು.

ನನಗೆ ಕೆಲಸ ಸಿಕ್ಕಿತು ಎಂದು ಖುಷಿಯಿಂದ ಅವಳಿಗೆ ಹೇಳಿದೆ. ಅದಕ್ಕೆ ಅವಳು ಅಭಿನಂದನೆಗಳನ್ನು ತಿಳಿಸುತ್ತ ನನಗೂ ಸಿಕ್ಕಿತು ಎಂದು ಹೇಳಿದಳು. ಕೆಲಸ ಸಿಕ್ಕ ಖುಷಿಯಲ್ಲಿ ಇದ್ದ ನನಗೆ ಅವಳಿಗೂ ಕೆಲಸ ಸಿಕ್ಕಿರುವ ವಿಚಾರವನ್ನು ಕೇಳಿ ನಾನು ಹೇಳಿರಲಿಲ್ಲವೇ ಇಬ್ಬರಿಗೂ ಒಂದಲ್ಲ ಒಂದು ದಿನ ಕೆಲಸ ಸಿಕ್ಕೇ ಸಿಗುತ್ತದೆ ಎಂದು ಖುಷಿಯಿಂದ ಹೇಳಿದೆ. ಅದಕ್ಕೆ ಅವಳು ಹೌದು ಎಲ್ಲಾ ನಿಮ್ಮ ಬಾಯಿಯ ಮಾತು, ನೀವು ತುಂಬಾ ಅದೃಷ್ಟ ನನಗೆ ಎಂದಳು. ಇಲ್ಲಾ ನೀವು ಅದೃಷ್ಟ ನನಗೆ, ನೀವು ಹೇಳಿದ ಗುಡ್ ಲಕ್ ನಿಂದ ನನಗೆ ಕೆಲಸ ಸಿಕ್ಕಿದೆ ಎಂದೆ. ಹೀಗೆ ಒಬ್ಬರಿಗೊಬ್ಬರನ್ನು ಹೊಗಳುತ್ತಾ ಬಸ್ ನಿಲ್ದಾಣದ ಕಡೆಗೆ ಹೊರಟೆವು.

“ನಿಮ್ಮ ಹೆಸರನ್ನೇ ಕೇಳೋದು ಮರೆತು ಬಿಟ್ಟೆ” ಎಂದು ಇಬ್ಬರೂ ಒಂದೇ ಸಲ ಹೇಳಿದೆವು. ಅದನ್ನು ಕೇಳಿ ನಕ್ಕೆವು. ಅವಳ ಹೆಸರು ವೈಷ್ಣವಿ ಎಂದು ಹಾಗೂ ನನ್ನ ಹೆಸರು ವಿಶಾಲ್ ಎಂದು ಇಬ್ಬರಿಗೂ ತಿಳಿಯಿತು. ಬಸ್ ನಿಲ್ದಾಣದಲ್ಲಿ ಸಿಕ್ಕ ಅವಳು ನನ್ನ ಸ್ನೇಹಿತಳು ಆಗುವುದಲ್ಲದೆ ನನ್ನ ಮನಸನ್ನು ಕದಿಯುವ ಪೋರಿಯು ಆಗುತ್ತಾಳೆ ಅಂದುಕೊಂಡಿರಲಿಲ್ಲ. ಇಬ್ಬರೂ ಮಾರನೆಯ ದಿನ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಂದೆವು. ಹೀಗೆ ಇಬ್ಬರ ಪ್ರೊಫೆಷನಲ್ ಜೀವನ ಪ್ರಾರಂಭವಾಯಿತು. ಹೀಗೆ ಜೊತೆಯಲ್ಲಿ ಕೆಲಸ ಮಾಡುತ್ತಾ ಒಬ್ಬರಿಗೊಬ್ಬರ ಸ್ನೇಹ ಬೆಳೆಯತೊಡಗಿತು. ಆದರೆ ನನ್ನ ಮನಸಲ್ಲಿ ಅವಳ ಮೇಲೆ ಪ್ರೀತಿ ದಿನೇ ದಿನೇ ಬೆಳೆಯತೊಡಗಿತು. ಆದರೆ ಅವಳಿಗೆ ಹೇಗೆ ನನ್ನ ಪ್ರೀತಿಯನ್ನು ವ್ಯಕ್ತಪಡಿಸುವುದು ಎಂದು ಗೊತ್ತಾಗದೆ ಒದ್ದಾಡುತ್ತ ಇದ್ದೆ. ಎಷ್ಟೋ ಬಾರಿ ಆಗಿದ್ದು ಆಗಲಿ ಹೇಳೇ ಬಿಡೋಣ ಎಂದು ಅವಳ ಮುಂದೆ ಹೋದರೆ ಅವಳ ಮುಖ ನೋಡಿ ಧೈರ್ಯವೇ ಸಾಲುತ್ತಿರಲಿಲ್ಲ.

ಅಂದು ಅವಳ ಹುಟ್ಟು ಹಬ್ಬವಿತ್ತು. ಹೇಗಾದರೂ ಮಾಡಿ ಅವಳಿಗೆ ನನ್ನ ಪ್ರೀತಿಯನ್ನು ಹೇಳಬೇಕು ಎಂದು ತೀರ್ಮಾನಿಸಿ ಅವಳ ಹುಟ್ಟು ಹಬ್ಬಕ್ಕೆ ಒಳ್ಳೆಯ ಉಡುಗರೆಯನ್ನು ತೆಗೆದುಕೊಂಡು ಹೋದೆ. ಅವಳು ಇದ್ದ ಸ್ತಳವನ್ನು ತಲುಪಿದಾಗ ನನಗೆ ಒಂದು ದೊಡ್ಡ ಆಘಾತ ಕಾದಿತ್ತು. ಅವಳು ಒಬ್ಬ ಹುಡುಗನ ಪಕ್ಕ ತುಂಬಾ ಸಲುಗೆಯಿಂದ ಕೂತಿದ್ದಳು. ಯಾರೋ ಸ್ನೇಹಿತ ಇರಬೇಕು ಎಂದು ಒಂದು ಕ್ಷಣ ಅಂದುಕೊಂಡು ಹತ್ತಿರ ಹೋದೆ. ನಾನು ಹತ್ತಿರ ಬಂದಿದ್ದನ್ನು ಗಮನಿಸಿ ಓಹ್ ವಿಶಾಲ್ ಬಾ ಎಂದಳು. ಹುಟ್ಟು ಹಬ್ಬದ ಶುಭಾಶಯಗಳು ವೈಶು ಎಂದು ಅವಳಿಗೆ ಹಾರೈಸಿದೆ. ತುಂಬಾ ಥ್ಯಾಂಕ್ ಯು ಕಣೋ, ಇವನು ನಾನು ಮದುವೆ ಆಗುವ ಹುಡುಗ ವಿಕಾಸ್, ಎಂದು ಆ ಹುಡುಗನನ್ನು ಪರಿಚಯ ಮಾಡಿಸಿದಳು.

ಆ ಮಾತನ್ನುಕೇಳಿ ಹೃದಯವೇ ಒಡೆದು ಹೋದಂತಾಯಿತು. ಯಾರೋ ಫೋನ್ ಮಾಡಿರುವ ತರಹ ನಾಟಕ ಮಾಡಿ ಅಲ್ಲಿಂದ ಹೊರಗಡೆ ಬಂದೆ. ಕಣ್ಣು ಕಂಬನಿಯಿಂದ ಆವರಿಸಿತ್ತು. ಸ್ವಲ್ಪ ಸಮಯದ ನಂತರ ಮತ್ತೆ ಒಳಗಡೆ ಹೋಗಿ ಅವಳಿಗೆ ಇನ್ನೊಮ್ಮೆ ಶುಭಾಶಯಗಳನ್ನು ತಿಳಿಸಿ ಅಲ್ಲಿಂದ ಹೊರಟೆ. ಇಂದಿಗೆ ಆರು ವರ್ಷವಾಯಿತು ಅವಳನ್ನು ಮರೆಯಲು ಪ್ರಯತ್ನ ಮಾಡುತ್ತಿದ್ದೇನೆ. ಆದರೂ ಆಗುತ್ತಿಲ್ಲ. ಅದೇನೋ ಗೊತ್ತಿಲ್ಲ ಪ್ರತಿ ಬಾರಿಯೂ ಅವಳ ಹೆಸರು ಕೇಳಿದಾಗ ಮನಸಲ್ಲಿ ಏನೋ ಒಂದು ತರಹ ಖುಷಿಯಾಗುತ್ತದೆ.ಅಂದು ಬಸ್ ನಿಲ್ದಾಣದಲ್ಲಿ ಸಿಕ್ಕ ಅವಳು ಕೊಟ್ಟ ಈ ನೋವಲ್ಲಿ ಏನೋ ಒಂದು ತರಹದ ಆನಂದವಿದೆ.

For more Stories follow Karunadu Today

Click here to Join Our Whatsapp Group