ನಾವೆಲ್ಲಾ ಹಳೆಯ ಕಾಲದ ಕಥೆಗಳನ್ನು ಕೇಳಿದ್ದೇವೆ. ಅಗ್ನಿ ಕುಂಡದಲ್ಲಿ ಹಾರಿದರೂ ಕೂಡ ಮತ್ತೆ ಬದುಕಿ ಬಂದ ಸೀತಾಮಾತೆ, ಭೀಮನ ಕೈಯಿಂದ ಸತ್ತರೂ ಮತ್ತೆ ಮತ್ತೆ ಬದುಕಿ ಬರುತ್ತಿದ್ದ ಜರಾಸಂದ ಹೀಗೆ ಅನೇಕ ಕಥೆಗಳಲ್ಲಿ ಸಾವಿಗೇ ಚಾಲೆಂಜ್ ಹಾಕಿ ಬದುಕಿ ಬರುವ ಶಕ್ತಿ ಅವರ ಬಳಿ ಇದ್ದದ್ದನ್ನು ನಾವು ಕೇಳಿದ್ದೇವೆ. ಆದರೆ ಆ ಪವಾಡಗಳೆಲ್ಲ ಈಗ ಸಾಧ್ಯವಿಲ್ಲ ಎನ್ನುವುದು ನಮಗೆಲ್ಲ ಗೊತ್ತಿದೆ. ಏಕೆಂದರೆ ಇದು ಕಲಿಯುಗ, ಪಾಪವೇ ತುಂಬಿ ತುಳುಕುತ್ತಿರುವ ಈ ಯುಗದಲ್ಲಿ ಪವಾಡಗಳು ಎಲ್ಲಿಂದ ಬರಬೇಕು ನೀವೇ ಹೇಳಿ. ಸಾವು ಒಮ್ಮೆ ಹತ್ತಿರ ಬಂದರೆ ಸಾಕು ಕರೆದುಕೊಂಡು ಹೋಗದೆ ಬಿಡುವುದಿಲ್ಲ. ಆದರೆ ಕೆಲವು ಜನರಿಗೆ ಮಾತ್ರ ಸ್ವಲ್ಪ ರಿಯಾಯಿತಿ ಕೊಡುತ್ತದೆ. ನಮ್ಮ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಜೀವಿತಾವದಿಯಲ್ಲಿ ಕನಿಷ್ಠಪಕ್ಷ ಒಮ್ಮೆಯಾದರೂ ಸಾವು ಎನ್ನುವುದು ಹತ್ತಿರ ಬಂದು ಒಮ್ಮೆ ಎಚ್ಚರಿಕೆ ನೀಡಿ ಹೋಗುತ್ತದೆ. ಉದಾಹಾರಣೆಗೆ ಎಲ್ಲೋ ಹೋಗುವ ವೇಳೆ ಬೈಕ್ ಮೇಲಿಂದ ಬಿದ್ದು ಸಾಯದೆ ಕೇವಲ ಕೈ ಕಾಲು ಮುರಿದುಕೊಳ್ಳುವುದಾಗಿರಬಹುದು ಅಥವ ಹಾವು ಕಚ್ಚಿದರೂ ಕೂಡ ಸರಿಯಾದ ಸಮಯಕ್ಕೆ ಯಾರೋ ಬಂದು ನಮ್ಮನ್ನು ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸುವುದಾಗಿರಬಹುದು. ಈತರಹದ ಅನೇಕ ಘಟನೆಗಳು ಪ್ರತಿಯೊಬ್ಬರ ಜೀವನದಲ್ಲಿ ನಡೆದಿರುತ್ತವೆ. ಸಾವಿನ ಮನೆಯವರೆಗೂ ಹೋಗಿ ಮರಳಿ ಬಂದ ಅನೇಕ ಉದಾಹರಣೆಗಳು ನಮ್ಮ ಈ ಪ್ರಪಂಚದಲ್ಲಿವೆ. ಆದರೆ ಒಂದೆರಡು ಬಾರಿ ಈ ರೀತಿಯಾಗಿ ಆಗಿ ಬದುಕಿ ಬಂದರೆ ಅವರಿಗೆ ನಿನ್ನ ಹಣೆಬರಹ ಗಟ್ಟಿಯಿದೆ ಅದಕ್ಕೆ ಬದುಕಿರುವೆ ಎಂದು ಹೇಳಬಹುದು ಆದರೆ ಬರೋಬ್ಬರಿ 7 ಬಾರಿ ಸಾವಿನಿಂದ ತಪ್ಪಿಸಿಕೊಂಡು ಬದುಕಿ ಬಂದರೆ ಅಂತಹ ವ್ಯಕ್ತಿಯನ್ನು ನೋಡಿ ಏನೆನ್ನಬೇಕು ನೀವೇ ಹೇಳಿ. ಹೌದು, ಇಲ್ಲೊಬ್ಬ ವ್ಯಕ್ತಿ ಇದ್ದಾರೆ ಆ ಪುಣ್ಯಾತ್ಮನು ಬರೋಬ್ಬರಿ 7 ಬಾರಿ ಸಾವಿನಿಂದ ತಪ್ಪಿಸಿಕೊಂಡು ಬದುಕಿ ಬಂದಿದ್ದಾನೆ. ಇಷ್ಟೇ ಆಗಿದಿದ್ದರೆ ಸುಮ್ಮನಿರಬಹುದಿತ್ತು ತಪ್ಪಿಸಿಕೊಂಡು ಬಂದ ಮೇಲೆ ಆತನ ಜೀವನ ಏನಾಯಿತು ಎಂದು ತಿಳಿದರೆ ನಿಮಗೆ ಸಂತೋಷ ಆಶ್ಚರ್ಯ ಹಾಗು ಸ್ವಲ್ಪ ಅಳು ಕೂಡ ಬರುತ್ತದೆ. ಬನ್ನಿ ಇಂದು ನಿಮಗೆ ಈ ವ್ಯಕ್ತಿಯ ಜೀವನದಲ್ಲಿ ನಡೆದ ನೈಜ ಘಟನೆಯನ್ನು ಹೇಳುತ್ತೇವೆ ಮುಂದೆ ಓದಿ.

ಅವರ ಹೆಸರು “ಫ್ರೇನ್ ಸೆಲಕ್”. ಜೂನ್ 14, 1929 ರಲ್ಲಿ ಅಡ್ರೀಯಾಟಿಕ್ ಸಮುದ್ರದ ಮೇಲಿರುವ “ಕ್ರೋಯಟಿಯನ್(Croatian)” ಎನ್ನುವ ದೇಶದ ಮೇಲೆ ಜನಿಸಿದ ಇವರು ಸಂಗೀತ ಕಲಿಸಿಕೊಡುವ ಗುರುಗಳು. ಬರುವ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿಕೊಡುತ್ತ ಸುಂದರವಾದ ಜೀವನ ನಡೆಸುತ್ತಿದ್ದ ಒಬ್ಬ ಸಾಧಾರಣ ವ್ಯಕ್ತಿ ಇವರು. ಹುಟ್ಟಿ 33 ವರ್ಷಗಳ ನಂತರ ಅಂದರೆ 1962 ರಲ್ಲಿ ಇವರು ಮೊದಲ ಬಾರಿ ಸಾವಿನ ಬಾಗಿಲು ಮುಟ್ಟಿ ಬಂದರು.

ಅದೊಂದು ದಿನ “Sarajevo ನಗರದಿಂದ Dubrovnik” ನಗರಕ್ಕೆ ರೈಲಿನಲ್ಲಿ ಹೋಗುತ್ತಿರುವ ವೇಳೆಯಲ್ಲಿ ಹಳಿತಪ್ಪಿ ನದಿಗೆ ಜಿಗಿದ ರೈಲು 17 ಜನರ ಪ್ರಾಣ ತೆಗೆದುಕೊಂಡಿತು. ಆದರೆ “ಸೆಲಕ್” ಆ ದುರಂತದಲ್ಲಿ ಸಾಯದೆ ಕೈ ಮುರಿದುಕೊಂಡು ಈಜುತ್ತಾ ದಡ ಸೇರಿ ಬದುಕುಳಿದಿದ್ದರು. ಹೇಗೋ ಬದುಕಿ ಉಳಿದೆ ಎಂದು ಸಂತೋಷ ಪಟ್ಟು ಮನೆ ಸೇರಿಕೊಂಡರು. ಈ ದುರ್ಘಟನೆ ಸಂಭವಿಸಿ ಒಂದು ವರ್ಷವೂ ಆಗಿರಲಿಲ್ಲ ಅನಾರೋಗ್ಯಕ್ಕೆ ತುತ್ತಾಗಿದ್ದ ತನ್ನ ತಾಯಿಯನ್ನು ನೋಡಲು “ರಿಜೆಕಾ” ನಗರಕ್ಕೆ ವಿಮಾನದಲ್ಲಿ ಹೋಗುತ್ತಿರುವ ವೇಳೆ ಇದ್ದಕಿದ್ದಂತೆ ವಿಮಾನದ ಬಾಗಿಲು ತೆರೆದುಕೊಂಡು ರಬಸವಾದ ಗಾಳಿಯು ಒಳಗಿದ್ದ ಪ್ರಯಾಣಿಕರನ್ನು ಎಳೆದುಕೊಂಡು ಭೂಮಿಯ ಕಡೆಗೆ ಎಸೆಯಿತು. ಇದರಲ್ಲಿ “ಫ್ರೇನ್ ಸೆಲಕ್” ಕೂಡ ಒಬ್ಬರಾಗಿದ್ದರು. ಅದೆಂತಹ ಅದೃಷ್ಟ ವ್ಯಕ್ತಿ ಈತನೆಂದರೆ ಆಕಾಶದಿಂದ ನೇರವಾಗಿ ಒಂದು ಹೊಲದ ಮೇಲೆ ಹಾಕಿದ್ದ ಹುಲ್ಲಿನ ದೊಡ್ಡ ರಾಶಿಯ ಮೇಲೆ ಬಿದ್ದಿದ್ದ. ವಿಮಾನದಲ್ಲಿದ್ದ 19 ಪ್ರಯಾಣಿಕರು ಸತ್ತರೆ ಇವರು ಮಾತ್ರ ಸಾಯದೆ ಮತ್ತೆ ಬದುಕಿ ಉಳಿದಿದ್ದರು.

ಇದಾದ ನಂತರ ಸಾವಿನ ಬಾಗಿಲನ್ನು ಮೂರನೆಯ ಬಾರಿ ಮುಟ್ಟಿದ್ದು 1966 ರಲ್ಲಿ. ಎಂದಿನಂತೆ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟು ಮನೆಗೆ ಬಸ್ಸಿನಲ್ಲಿ ಬರುತ್ತಿರುವ ವೇಳೆ ನದಿಗೆ ಜಾರಿದ ಬಸ್ಸು ಅದರೊಳಗಿದ್ದ 6 ಜನರ ಪ್ರಾಣ ತೆಗೆದುಕೊಂಡರೆ ಇನ್ನುಳಿದವರು ಬದುಕುಳಿದಿದ್ದರು. ಅದರಲ್ಲಿ ಇವರೂ ಕೂಡ ಒಬ್ಬರಾಗಿದ್ದರು. ಇದರ ನಂತರ 1970 ಮತ್ತು 1973 ರಲ್ಲಿ ಕಾರ್ ಆಕ್ಸಿಡೆಂಟ್ ನಲ್ಲಿ ಬದುಕಿ ಉಳಿದರು. ಬೆಂಕಿ ಹತ್ತಿಕೊಂಡು ಸಂಪೂರ್ಣ ಕಾರು ಸುಟ್ಟು ಕರಕಲಾದರೆ ಇವರೊಬ್ಬರು ಮಾತ್ರ ಅದರಿಂದ ಹೊರಜಿಗಿದು ತನ್ನ ಪ್ರಾಣ ಉಳಿಸಿಕೊಂಡಿದ್ದರು.

ಈ ಎಲ್ಲಾ ಘಟನೆಗಳು ನಡೆದ ಮೇಲೆ ಇವರಿಗೆ ಸಾವು 22 ವರ್ಷಗಳ ಕಾಲ ನೆಮ್ಮದಿಯ ಜೀವನ ನಡೆಸಲು ಅನುಮತಿ ನೀಡಿತು. ತನ್ನ ಜೀವನದಲ್ಲಿ ಆದ ಘಟನೆಗಳಿಂದ ಕುಗ್ಗಿಹೋಗಿದ್ದ ಇವರು 22 ವರ್ಷಗಳ ಕಾಲ ನೆಮ್ಮದಿಯ ಜೀವನ ನಡೆಸಿದರು. ಆದರೆ 1995 ರಲ್ಲಿ ರಸ್ತೆ ದಾಟುವ ವೇಳೆ ಜೋರಾಗಿ ಬರುತ್ತಿದ್ದ ಬಸ್ ಇವರಿಗೆ ಗುದ್ದಿದ ಪರಿಣಾಮ ದೇಹದ ಕೆಲವು ಭಾಗಗಳಿಗೆ ಸಾಕಷ್ಟು ಗಾಯವಾಗುವುದರ ಜೊತೆಗೆ ಸಾಯದೆ ಮತ್ತೆ ಬದುಕುಳಿದಿದ್ದರು. ಇವರ ಜೀವನದ ಕೊನೆಯ ದುರಂತ 1996 ರಲ್ಲಿ ನಡೆಯಿತು. ಅದೊಂದು ದಿನ ಬೇರೆ ಊರಿಗೆ ಬೆಟ್ಟದ ರಸ್ತೆಗಳ ಮೂಲಕ ತನ್ನ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಎದುರುಗಡೆಯಿಂದ ಜೋರಾಗಿ ಬರುತ್ತಿದ್ದ ಲಾರಿಯಿಂದ ತಪ್ಪಿಸಿಕೊಳ್ಳಲು ಹೋಗಿ 300 ಅಡಿಯ ಪ್ರಪಾತಕ್ಕೆ ಕಾರು ಬಿದ್ದಿತ್ತು. ಬೀಳುವ ವೇಳೆಯಲ್ಲಿ ಕಾರಿನಿಂದ ಎಗರಿ ಮರದ ಕೊಂಬೆ ಹಿಡಿದುಕೊಂಡು ಬದುಕುಳಿದಿದ್ದರು.

ಬರೋಬ್ಬರಿ 7 ಬಾರಿ ಸಾವಿನ ಬಾಗಿಲು ಮುಟ್ಟಿ ಬದುಕುಳಿದು ಬಂದ ಮೇಲೆ ಇವರಿಗೆ “ದುರಾದೃಷ್ಟವಂತ ವ್ಯಕ್ತಿ” ಎಂದು ಎಲ್ಲರೂ ಕರೆಯಲು ಶುರು ಮಾಡಿದ್ದರು. ಅದೆಷ್ಟೋ ಜನ ಇವರ ಜೊತೆ ಮಾತನಾಡುವುದನ್ನೇ ಬಿಟ್ಟಿದ್ದರು. ಆತ್ಮೀಯ ಸ್ನೇಹಿತರೂ ಕೂಡ ಇವರಿಂದ ದೂರ ಹೋಗಿದ್ದರು. ಇದನ್ನೆಲ್ಲಾ ಕಂಡು ಮಾನಸಿಕವಾಗಿ ನೊಂದಿದ್ದ ಇವರಿಗೆ ಅದೊಂದು ದಿನ ಅದೃಷ್ಟ ಹುಡುಕಿಕೊಂಡು ಬಂದಿತ್ತು. 2003 ರಲ್ಲಿ ಲಾಟರಿಯಲ್ಲಿ ಬರೋಬ್ಬರಿ 9,60,000 ಸಾವಿರ ಅಮೇರಿಕನ್ ಡಾಲರ್ ಹಣ ಗೆಲ್ಲುವುದರೊಂದಿಗೆ ಅದೃಷ್ಟದ ಬಾಗಿಲನ್ನು ಮುಟ್ಟಿದರು. ಇದರಿಂದ ಜೀವನದುದ್ದಕ್ಕೂ ಕೇವಲ ದುರಾದೃಷ್ಟ ನೋಡಿದ್ದ ಇವರಿಗೆ ಕೊನೆಗೂ ಅದೃಷ್ಟದ ಬಾಗಿಲು ತೆಗೆಯಿತು. ಬಂದ ಹಣದಿಂದ ಒಂದು ಸುಂದರ ದ್ವೀಪದ ಮೇಲೆ ಐಶಾರಾಮಿ ಮನೆ ಕೊಂಡುಕೊಂಡು 7 ವರ್ಷಗಳ ಕಾಲ ಬದುಕಿದ್ದರು. ಆದರೆ 2010 ರಲ್ಲಿ ಈ ಕೋಟಿ ಹಣದಿಂದ ನನಗೆ ಬೇಕಾಗಿರುವ ಸಂತೋಷ ಹಾಗು ಮಾನಸಿಕ ನೆಮ್ಮದಿ ಸಿಗುತ್ತಿಲ್ಲವೆಂದು ತನ್ನ ಸಂಪೂರ್ಣ ಆಸ್ತಿಯನ್ನು ಕುಟುಂಬ ಹಾಗು ಸ್ನೇಹಿತರ ಹೆಸರಿಗೆ ಬರೆದಿಟ್ಟು ತನ್ನ ತಾಯಿ ವಾಸವಾಗಿದ್ದ ಹಳೆಯ ಮನೆಗೆ ಹೋಗಿ ಜೀವನ ನಡೆಸುತ್ತಿದ್ದಾರೆ.

ಅದೇನೇ ಹೇಳಿ 7 ಬಾರಿ ಸಾವಿನಿಂದ ತಪ್ಪಿಸಿಕೊಂಡು ಬಂದ ಇವರನ್ನು ಅದೃಷ್ಟವಂತ ಎನ್ನಬೇಕೆ ಅಥವ ಸಾವು ಯಾವಾಗಲು ಇವರ ಹಿಂದೆ ಬಿದ್ದಿದ್ದಕ್ಕೆ ದುರಾದೃಷ್ಟವಂತ ಎನ್ನಬೇಕೆ ಎನ್ನುವುದು ಮಾತ್ರ ತಿಳಿಯುತ್ತಿಲ್ಲ. ಮತ್ತೆ ಇವರ ಜೀವನದಲ್ಲಿ ಸಾವು ಆಟವಾಡದೆ ಇರಲಿ ಎಂದು ನಾವು ಬಯಸೋಣ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

Follow Karunadu Today for more Interesting Facts & Stories. 

Click here to Join Our Whatsapp Group