
ತುಂಬಾ ಜನ ಹೇಳುವುದನ್ನು ಕೇಳಿದ್ದೇನೆ ಪ್ರೀತಿಸಿ ಮದುವೆ ಆದವರೇ ಪುಣ್ಯವಂತರು. ಅವರಷ್ಟು ಖುಷಿಯಾಗಿ ಇರೋರು ಯಾರು ಇಲ್ಲ, ಒಬ್ಬರಿಗೊಬ್ಬರು ತುಂಬಾ ಅರ್ಥ ಮಾಡಿಕೊಂಡು ಬದುಕುತ್ತಾರೆ ಅಂತ. ಪ್ರತಿ ಸಲ ನನ್ನ ಸ್ನೇಹಿತರು ಇದನ್ನು ಹೇಳುತ್ತಿದ್ದಾಗ ನನಗೂ ಯಾವುದಾದರೂ ಹುಡುಗಿಯನ್ನು ಪ್ರೀತಿಸಿ ಮದುವೆ ಆಗಬೇಕು ಅನ್ನಿಸುತಿತ್ತು. ಆದರೆ ನನ್ನ ಮುಸುಡಿಗೆ ಯಾವ ಹುಡುಗಿ ಬೀಳುತ್ತಾಳೆ ಅಂತ ಅಂದುಕೊಂಡು ಸುಮ್ಮನಾಗುತ್ತಿದ್ದೆ. ಹೇಗೋ ಜೀವನದಲ್ಲಿ ಇಷ್ಟವಿಲ್ಲದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿ ತಂದೆ ತಾಯಿಯ ಕಾಟ ತಡೆದುಕೊಳ್ಳಲಾರದೆ ಬೆಂಗಳೂರಿಗೆ ಬಂದು ಒಂದು ಒಳ್ಳೆ ಕಂಪನಿ ಅಲ್ಲಿ ಕೆಲಸ ಹುಡುಕಿಕೊಂಡೆ. ಹೇಳಿಕೊಳ್ಳುವಷ್ಟು ಸಂಬಳವೇನು ಇರಲಿಲ್ಲ ಆದರೂ ಬೇರೆ ದಾರಿ ಇಲ್ಲದೆ ಕೆಲಸ ಮಾಡುತ್ತಿದ್ದೆ. ಬಂದ ಸಂಬಳದಲ್ಲೇ ಅಷ್ಟೋ ಇಷ್ಟೋ ದುಡ್ಡನ್ನು ಉಳಿಸಿ ಮನೆಗೆ ಕಳಿಸುತಿದ್ದೆ. ಹೀಗೆ ವರ್ಷಗಳೇ ಸಾಗಿದವು. ಈ ಕಡೆ ಕಂಪನಿ ಅಲ್ಲಿ ಕೆಲಸದ ಒತ್ತಡ ಆ ಕಡೆ ಮನೆಯಿಂದ ವಯಸ್ಸಾಗುತ್ತಿದೆ ನಿನ್ನ ಮದುವೆಗೆ ಹುಡುಗಿ ನೋಡಬೇಕು ಜಾಸ್ತಿ ಸಂಬಳ ಇರುವ ಉದ್ಯೋಗ ನೋಡಿಕೋ ಅನ್ನುವ ಕಾಟ. ಪ್ರತಿ ಸಲ ಮನೆಯಿಂದ ಈ ಮಾತು ಕೇಳಿದಾಗ ಇಲ್ಲೇ ಬೆಂಗಳೂರಿನಲ್ಲಿ ಯಾವುದಾದರು ಒಂದು ಹುಡುಗಿಯನ್ನು ನೋಡಿಕೊಳ್ಳೋಣ ಅನ್ನಿಸುತಿತ್ತು. ಏನು ಮಾಡುವುದು ಈ ಕೆಲಸದ ಒತ್ತಡದಲ್ಲಿ ಹುಡುಗಿಯನ್ನು ಹುಡುಕಿಕೊಳ್ಳುವುದು ಇರಲಿ ಕಣ್ಣು ಎತ್ತಿ ನೋಡುವುದಕ್ಕೂ ಮನಸ್ಸು ಬರುತ್ತಿರಲಿಲ್ಲ.
ಕೊನೆಗೊಂದು ದಿನ ನನ್ನ ಸ್ನೇಹಿತ ಮನೋಜ್ ಅವನು ಕೆಲಸ ಮಾಡುವ ಕಂಪನಿ ಅಲ್ಲಿ ಕೆಲಸ ಕಾಲಿ ಇದೆ ಇಂಟರ್ವ್ಯೂಗೆ ಬಾ ಒಳ್ಳೆ ಸಂಬಳ ಇದೆ ಎಂದು ಹೇಳಿದ. ಹೇಗೋ ಈ ಕೆಲಸ ನನಗೆ ಸಿಕ್ಕರೆ ಸಾಕು ದೇವರೇ ಅಂತ ಅಂದುಕೊಂಡು ಹೋಗಿಯೇಬಿಟ್ಟೆ. ಅಂದುಕೊಂಡಂತೆ ಆ ಕೆಲಸ ನನಗೆ ಸಿಕ್ಕೆಬಿಟ್ಟಿತು. ಮೊದಲು ಪಡೆಯುತ್ತಿದ್ದ ಸಂಬಳಕ್ಕಿಂತ ಹೆಚ್ಚು ಇತ್ತು. ಮೊಬೈಲ್ ಕೈಗೆತ್ತಿಕೊಂಡು ಈ ಖುಷಿ ಸಮಾಚಾರವನ್ನು ಮನೆಯಲ್ಲಿ ತಿಳಿಸೋಣ ಎಂದು ಕರೆ ಮಾಡಿದರೆ ನಮ್ಮ ಅಮ್ಮ ಮೊದಲು ಹೇಳಿದ ಮಾತು ಏನು ಗೊತ್ತಾ? ಹಾಗಾದ್ರೆ ಹುಡುಗಿ ನೋಡ್ತೀವಿ ಮದುವೆ ಆಗಿಬಿಡು ಅಂತ. ಅದೇನ್ ಮದುವೆ ಮದುವೆ ಅಂತ ಸಾಯ್ತೀರಾ ಇವಾಗ ತಾನೇ ಒಳ್ಳೆ ಸಂಬಳ ಇರುವ ಕೆಲಸ ಸಿಕ್ಕಿದೆ ಸ್ವಲ್ಪ ದಿವಸ ತಡೆದುಕೊಳ್ಳಿ ಎಂದು ರೇಗಾಡಿದೆ. ಸರಿ ಆಯಿತು ಬಿಡು ಅಂತ ಅಮ್ಮ ನನ್ನ ಮೇಲೆ ಕೋಪ ಮಾಡಿಕೊಂಡು ಕಾಲ್ ಕಟ್ ಮಾಡಿದಳು. ತಿರುಗಿ ಕಾಲ್ ಮಾಡುವ ಮನಸ್ಸು ನನಗೂ ಇರಲಿಲ್ಲ. ಹೋಗಲಿ ಬಿಡು ಆಮೇಲೆ ಮಾಡಿದರೆ ಆಯಿತು ಅಂತ ಸುಮ್ಮನಾದೆ.
ಅದೊಂದು ಭಾನುವಾರದ ದಿನ ನನ್ನ ಸ್ನೇಹಿತನೊಬ್ಬನ ಮದುವೆಗೆ ಹೋಗಿದ್ದೆ 5 ವರ್ಷಗಳಿಂದ ಒಬ್ಬ ಹುಡುಗಿಯನ್ನು ಅವನು ಪ್ರೀತಿಸುತಿದ್ದನಂತೆ, ಅವನ ಮನೆಯಲ್ಲಿ ಅವರ ಪ್ರೀತಿಯನ್ನು ಒಪ್ಪಿಕೊಂಡು ಮದುವೆ ಮಾಡುತಿದ್ದರು. ಅವರ ಜೋಡಿಯನ್ನು ನೋಡಿದಾಗ ಸ್ವಲ್ಪ ನನಗೆ ಹೊಟ್ಟೆಕಿಚ್ಚು ಆಯಿತು. ಯಾಕೆ ಅಂತೀರಾ? ತುಂಬಾ ಮುದ್ದು ಜೋಡಿ ಅವರದ್ದಾಗಿತ್ತು. ಎಷ್ಟೇ ಆಗಲಿ ಪ್ರೀತಿ ಮಾಡಿ ಮದುವೆ ಆಗುತ್ತಿದ್ದಾರೆ. ಅವರ ಜೀವನವು ಸುಖವಾಗಿರುತ್ತದೆ ಅಂದುಕೊಂಡು ಹೊರಟೆನು. ಅದೇ ಸಮಯದಲ್ಲಿ ನಮ್ಮ ಅಮ್ಮನ ಕರೆ ಬಂತು. ಇವಾಗ ಯಾಕೆ ಅಮ್ಮ ಕರೆ ಮಾಡುತ್ತಿದ್ದಾಳೆ ಏನೋ ವಿಷಯ ಇರಬೇಕು ಎಂದು ಬಂದಿದ್ದ ಕರೆಯನ್ನು ಸ್ವೀಕರಿಸಿದೆನು. ಮರುಕ್ಷಣವೇ ನಿನಗೆ whatsapp ಅಲ್ಲಿ ಒಂದು ಹುಡುಗಿಯ ಫೋಟೋ ಕಳಿಸಿದ್ದೇನೆ ಅದನ್ನು ನೋಡಿ ಹೇಗಿದ್ದಾಳೆ ಆ ಹುಡುಗಿ ಅಂತ ನನಗೆ ಹೇಳು ಅಂದಳು ಅಮ್ಮ.

ಕೊನೆಗೂ ಯಾರವಳು ಎಂದು ಕುತೂಹಲದಿಂದ ನೋಡಿದೆ. ಸೀರೆ ತೊಟ್ಟು ಮುದ್ದಾದ ನಗುವನ್ನು ಬೀರಿ ತುಂಬಾ ಸುಂದರವಾಗಿ ಕಾಣುತ್ತಿದ್ದಳು. ನಿಜ ಹೇಳುತ್ತೇನೆ ಅಲ್ಲಿಯವರೆಗೂ ನನ್ನ ಮನಸಲ್ಲಿ ಯಾವ ಹುಡುಗಿಯ ಮೇಲೂ ಇಷ್ಟೊಂದು ಆಕರ್ಷಣೆ ಆಗಿದ್ದಿಲ್ಲ. ಆದರೆ ಈ ಹುಡುಗಿಯು ನನ್ನ ಮನಸನ್ನು ಕದಿಯುವ ಎಲ್ಲಾ ಲಕ್ಷಣಗಳು ನನ್ನಲ್ಲಿ ಗೋಚರಿಸಿತು. ಮರುಕ್ಷಣವೇ ಅಮ್ಮನಿಗೆ ಕರೆ ಮಾಡಿ ಯಾರವಳು ಅಮ್ಮ ಅಂತ ಕೇಳಿದೆ. ಅದಕ್ಕೆ ಅಮ್ಮ ನಿನಗೆ ಅಂತ ನೋಡಿರುವ ಹುಡುಗಿ. ದಸರಾ ಹಬ್ಬಕ್ಕೆ ಬಂದಾಗ ಅವಳನ್ನು ನೋಡೋಕೆ ಹೋಗೋಣ ಅಂತ ಹೇಳಿದಳು. ಅದಕ್ಕೆ ನಾನು ಸರಿ ಆಯಿತು ಎಂದೆ. ನಿಜ ಹೇಳುತ್ತೇನೆ ಆ ಹುಡುಗಿಯ ಫೋಟೋ ನೋಡಿದ ಮೇಲೆ ಮನಸಲ್ಲಿ ಏನೋ ಒಂಥರ ಬಾವನೆಗಳು ಮೂಡತೊಡಗಿದವು. ಹಿಂದೆಂದೂ ಆ ತರ ನನಗೆ ಆಗಿರಲಿಲ್ಲ. ಅವಳ ಮುದ್ದಾದ ಮುಖವನ್ನೇ ನೋಡುತ್ತಾ ಇರಬೇಕು ಅನ್ನಿಸುತಿತ್ತು ಅದಕ್ಕೆ ಅವಳ ಫೋಟೋವನ್ನೇ ನನ್ನ ಮೊಬೈಲಿನಲ್ಲಿ wallpaper ಆಗಿ ಇಟ್ಟುಕೊಂಡೆ. ಅವಳ ಫೋಟೋ ನೋಡುವುದಕ್ಕೂ ಮುಂಚೆ ಮದುವೆ ಅಂದರೆ ಸಾಕು ಅಷ್ಟೊಂದು ಆಸಕ್ತಿ ತೋರಿಸದ ನಾನು ನಂತರ ಬೇಗ ಮದುವೆ ಆಗಬೇಕು ಅಂತ ಅನ್ನಿಸ ತೊಡಗಿತು.
ದಸರಾ ಹಬ್ಬ ಬಂದೇ ಬಿಟ್ಟಿತು. ಒಂದು ವಾರ ರಜೆ ಹಾಕಿ ಊರ ಕಡೆಗೆ ಹೊರಟೇ ಬಿಟ್ಟೆನು. ಮನೆ ಮುಟ್ಟುವ ತನಕ ಬಸ್ಸಿನಲ್ಲಿ ಅವಳ ಫೋಟೋವನ್ನೇ ನೋಡುತ್ತಾ ನಾನು ಬರುತ್ತಿದ್ದೇನೆ ಇನ್ನು ಕೆಲವೇ ಗಂಟೆಗಳು ಎಂದು ನನ್ನಷ್ಟಕ್ಕೆ ನಾನು ಮಾತನಾಡತೊಡಗಿದೆನು. ಬೆಳಗಿನ ಜಾವ 6 ಗಂಟೆಗೆ ಮನೆ ಸೇರಿದೆನು. ಬಾಗಿಲು ತಟ್ಟಿ ಮಲಗಿದ್ದ ಅಮ್ಮನನ್ನು ಎದ್ದೇಳಿಸಿ ಹೇಗಿದ್ದೆಯ ಅಮ್ಮ ಎಂದು ಕೇಳಿದೆನು.ನಾನು ಚೆನ್ನಾಗಿ ಇದ್ದೇನೆ ಹೋಗು ಸ್ವಲ್ಪ ಹೊತ್ತು ಮಲಗಿಕೋ ಆಮೇಲೆ ಎದ್ದೇಳಿಸುತ್ತೇನೆ ಹುಡುಗಿ ನೋಡುವುದಕ್ಕೆ ಹೋಗೋಣ ಎಂದಳು. ಮೊದಲೇ ಅವಳನ್ನು ನೋಡಬೇಕೆಂದು ತುಂಬಾ ಕುತೂಹಲದಲ್ಲಿ ಇದ್ದ ನನಗೆ ಈ ಮಾತನ್ನು ಕೇಳಿ ನಿದ್ದೆ ಬರಲೇ ಇಲ್ಲ. ಸರಿಯಾಗಿ 11 ಗಂಟೆಗೆ ಅಮ್ಮನ ಜೊತೆ ಅವಳನ್ನು ನೋಡುವುದಕ್ಕೆ ಹೊರಟೇ ಬಿಟ್ಟೆನು.
ಹುಡುಗಿಯ ಮನೆ ಸೇರುವಷ್ಟರಲ್ಲಿ ಸ್ವಲ್ಪ ಸುಸ್ತಾಗಿತ್ತು ಆದರೂ ಅವಳನ್ನು ನೋಡುವ ಕುತೂಹಲ ಕಡಿಮೆ ಆಗಿರಲಿಲ್ಲ. ನಾವು ಬಂದಿದ್ದನ್ನು ಕಂಡು ಅವಳ ಮನೆಯವರು ನಮ್ಮನ್ನು ಬರಮಾಡಿಕೊಂಡು ಅತಿಥಿ ಸತ್ಕಾರ ಪ್ರಾರಂಬಿಸಿದರು. ನನ್ನ ಕಣ್ಣುಗಳು ಅವಳನ್ನೇ ಹುಡುಕುತ್ತಿದ್ದವು. ಕೊನೆಗೆ ಹಸಿರು ಸೀರೆಯನ್ನು ತೊಟ್ಟು ನನ್ನನು ನೋಡಲು ಹೊರಗಡೆ ಬಂದೇ ಬಿಟ್ಟಳು. ಎಷ್ಟು ಸುಂದರವಾಗಿದ್ದಳು ಎಂದರೆ ನೋಡಲು ಎರಡು ಕಣ್ಣು ಸಾಲಲಿಲ್ಲ. ಅವಳು ತೊಟ್ಟ ಆ ಸೀರೆಯಲ್ಲಿ ತುಂಬಾ ಲಕ್ಷಣವಾಗಿ ಕಾಣುತ್ತಿದ್ದಳು. ನಿಜ ಹೇಳುತ್ತೇನೆ ಅಲ್ಲಿಯವರೆಗೂ ಯಾವ ಹುಡುಗಿಯ ಮೇಲೂ ಇಷ್ಟೊಂದು ಮನಸ್ಸು ಆಗಿರಲಿಲ್ಲ. ಅವಳನ್ನು ನೋಡಿದ ಕ್ಷಣವೇ ನನಗೆ ಮನಸಲ್ಲಿ ಪ್ರೀತಿ ಹುಟ್ಟಿತು.

ಮನೆಗೆ ತಿರುಗಿ ಹೋದ ಮೇಲೆ ಅಮ್ಮ ನನ್ನ ಅಭಿಪ್ರಾಯ ಕೇಳಿದಳು. ಹಿಂದೂ ಮುಂದೂ ಯೋಚಿಸದೆ ನನಗೆ ಒಪ್ಪಿಗೆ ಇದೆ ಎಂದು ಹೇಳಿದೆ. ಅಮ್ಮನಿಗೂ ಕೂಡ ಆ ಹುಡುಗಿ ಇಷ್ಟವಾಗಿದ್ದಳು. ನಮ್ಮೂರಲ್ಲೇ ಒಂದು ಪುಟ್ಟ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಳು. ನನ್ನಷ್ಟು ಹೆಚ್ಚಿಗೆ ಸಂಬಳವಿಲ್ಲವಾದರೂ ನನ್ನಷ್ಟು ಒತ್ತಡವಿರುವ ಕೆಲಸವೇನಲ್ಲ ಅವಳದು.ಅವಳನ್ನು ಮದುವೆಯಾದರೆ ಖುಷಿಯಾಗಿ ಇರುತ್ತೇನೆ ನಾನು ಎಂದು ಮನಸಲ್ಲಿ ಅನ್ನಿಸಿತು ಅದಕ್ಕೆ ಅಮ್ಮನ ಎದುರು ನನಗೆ ಒಪ್ಪಿಗೆ ಇದೆ ಎಂದು ಹೇಳಿದ್ದು. ಸ್ವಲ್ಪ ದಿನದ ನಂತರ ಅವಳ ಮನೆಯವರ ಅಭಿಪ್ರಾಯವನ್ನು ಕೇಳಿದೆವು ಅವರೂ ಕೂಡ ಒಪ್ಪಿಗೆ ಸೂಚಿಸಿದರು. ಹೇಗಾದರು ಮಾಡಿ ಅವಳ ಫೋನ್ ನಂಬರ್ ಪಡೆದುಕೊಂಡು ಅವಳ ಜೊತೆ ಮಾತನಾಡಬೇಕು ಅಂತ ಒಂದು ದಿನ ಅಮ್ಮನ ಹತ್ತಿರ ಧೈರ್ಯ ಮಾಡಿ ಕೇಳಿಯೇ ಬಿಟ್ಟೆ.ನಗುತ್ತ ಅಮ್ಮ ಸರಿ ಸರಿ ಅವಳ ಅಮ್ಮನ ಹತ್ತಿರ ಮಾತನಾಡಿ ಸಂಜೆಯ ಒಳಗೆ ಕೊಡುತ್ತೇನೆ ಇರು ಎಂದು ಹೇಳಿದಳು. ಸಂಜೆಯ ತನಕ ಕಾದೆ. ಅಮ್ಮನ ಕರೆ ಬಂತು. ಕೊನೆಗೂ ಅವಳ ನಂಬರ್ ಕೊಟ್ಟೇಬಿಟ್ಟಳು.

ನಂಬರ್ ಸಿಕ್ಕ ಮರುಕ್ಷಣವೆ ಅವಳಿಗೆ ಕರೆ ಮಾಡಿದೆ. ಮೊದಲು ಏನು ಮಾತಾಡಬೇಕು ಅಂತ ತಿಳಿಯಲಿಲ್ಲ. ನಂತರ ಧೈರ್ಯದಿಂದ ಅವಳ ಜೊತೆ ಮಾತನಾಡತೊಡಗಿದೆ. ಹೀಗೆ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು ಮೊದಲು ಸ್ನೇಹಿತರಾದೆವು. ಕೊನೆಗೂ ನಮ್ಮಿಬ್ಬರ ನಿಶ್ಚಿತಾರ್ತ ಮತ್ತು ಮದುವೆ ಎರಡು ಬಲು ಬೇಗನೆ ಆಯಿತು. ಪ್ರೀತಿಸಿ ಮದುವೆ ಆದವರೇ ತುಂಬಾ ಖುಷಿಯಿಂದ ಇರುತ್ತಾರೆ ಎಂದು ತಿಳಿದಿದ್ದ ನನಗೆ ಮದುವೆ ಆಗಿ ಪ್ರೀತಿಸಿದವರು ಹೆಚ್ಚು ಖುಷಿಯಾಗಿ ಇರುತ್ತಾರೆ ಎಂದು ತಿಳಿದಿದ್ದು ಇವಳನ್ನು ಮದುವೆಯಾದ ಮೇಲೆ. ನಿಜ ಹೇಳುತ್ತೇನೆ ಇವತ್ತಿಗೆ ಮದುವೆಯಾಗಿ ಎರಡು ವರ್ಷವಾಯಿತು ಸಣ್ಣ ಪುಟ್ಟ ಜಗಳಗಳು ಬಿಟ್ಟರೆ ಇಬ್ಬರೂ ತುಂಬಾ ಅನ್ಯೋನ್ಯವಾಗಿ ಇದ್ದೇವೆ. ಎಲ್ಲರಿಗೂ ನಾನು ಹೇಳಲು ಇಷ್ಟ ಪಡುವುದು ಏನೆಂದರೆ ಗಂಡ ಹೆಂಡತಿಯು ಚೆನ್ನಾಗಿ ಇರಲು ಪ್ರೀತಿ ಮಾಡಿಯೇ ಮದುವೆ ಆಗಬೇಕು ಎಂದೇನಿಲ್ಲ, ಮದುವೆ ಆಗಿಯೂ ಪ್ರೀತಿ ಮಾಡಬಹುದು.
For more Stories follow Karunadu Today
Click here to Join Our Whatsapp Group