ಅವಾಗ ತಾನೇ ಶಾಲೆಯಿಂದ ಬಂದು ಮುಖ ತೊಳೆಯುತ್ತಿದ್ದೆ, ಅಮ್ಮನ ಕಿರುಚಾಟ ಶುರುವಾಯಿತು, ಬೇಗ ಬೇಗ ಮುಖ ತೊಳೆದು ಮಾಡಿರುವ ಮ್ಯಾಗಿ ತಿಂದು tutionಗೆ ತಯಾರಾಗು, ಅದು ಬಿಟ್ಟು ಆ ಪಕ್ಕದ ಮನೆಯ ಸತೀಶನ ಜೊತೆ ಆಟ ಆಡುವುದಕ್ಕೆ ಹೋದರೆ ಅಪ್ಪನಿಗೆ ಹೇಳಿ ನಿನಗೆ ಶಿಕ್ಷೆ ಕೊಡಿಸುತ್ತೇನೆ. ಮೊದಲೇ ಆಯಾಸವಾಗಿದೆ ಅದರಲ್ಲಿ ನಮ್ ಅಮ್ಮನ ಕಿರುಚಾಟ ಬೇರೆ, ನೀವೇ ಹೇಳಿ ನಾನು ಏನ್ಮಾಡಲಿ ಸತೀಶನ ಬಿಟ್ಟು ಇರೋಕೆ ನನಗೆ ಆಗಲ್ಲ ನಾವಿಬ್ಬರು ತುಂಬಾ ವರ್ಷಗಳಿಂದ ಒಳ್ಳೆಯ ಸ್ನೇಹಿತರು. ತಲೆಗೆ ಹತ್ತದೆ ಇರುವ ವಿದ್ಯೆ ಕಲಿತು ನನ್ನ ಸಮಯ ಹಾಳು ಮಾಡಿಕೊಳ್ಳುವುದಕಿಂತ ಸತೀಶನ ಜೊತೆ ಇದ್ದರೆ ಆಟವಾದರು ಆಡಬಹುದು. ಟ್ಯೂಷನ್ ಹೋಗುತ್ತೇನೆ ಅಂತ ಹೇಳಿ ಸತೀಶನ ಜೊತೆ ಆಡುವುದಕ್ಕೆ ಮೈದಾನಕ್ಕೆ ತೆರಳಿ ಅಪ್ಪನ ಕೈಯಲ್ಲಿ ಎಷ್ಟೋ ಸಲ ಸಿಕ್ಕಿಹಾಕಿಕೊಂಡು ಒದೆ ತಿಂದಿದ್ದೇನೆ. ಇಷ್ಟೆಲ್ಲಾ ಆದರೂ ಅವನ ಜೊತೆ ಆಡುವದು ಮಾತ್ರ ನಿಲ್ಲಿಸೋಕೆ ನನ್ನಿಂದ ಸಾದ್ಯವಿಲ್ಲ. ಅಂದ ಹಾಗೆ ನಾನು ಯಾರು ಅಂತ ಕೇಳುತಿದ್ದೀರಾ..? ನನ್ನ ಹೆಸರು ಸುಧಾ, ಮನೆಯಲ್ಲಿ ಎಲ್ಲರು ಪ್ರೀತಿ ಇಂದ ರಾಣಿ ಎಂದು ಕರೆಯುತ್ತಾರೆ, ಯಾಕೆ ಅಂತೀರಾ? ನಾನು ನಮ್ ಅಪ್ಪನ ಒಬ್ಬಳೇ ಮುದ್ದಿನ ಮಗಳು ಅದಕ್ಕೆ.

ಅಂದ ಹಾಗೆ ಯಾಕೆ ನಾನು ಸತೀಶನ ಜೊತೆ ಬಹಳ ಆಟ ಆಡುತ್ತೇನೆ ಎಂದು ಕೇಳುತಿದ್ದೀರಾ? ಏನು ಮಾಡಲಿ ನಮ್ಮ ಕಾಲೋನಿಯಲ್ಲಿ ಇರುವ ಶ್ವೇತ ಮತ್ತು ಗ್ರೀಷ್ಮ ನನ್ನ ಜೊತೆ ಆಟ ಆಡಲು ಬರುವುದಿಲ್ಲ, ಅವರು ಪುಸ್ತಕದ ಹುಳಗಳು, ಯಾವಾಗ ನೋಡಿದರು ಕಬ್ಬಿಣಕ್ಕೆ ಅಂಟಿಕೊಂಡಿರುವ ಆಯಸ್ಕಾಂಥದಂತೆ ಪುಸ್ತಕಕ್ಕೆ ಅಂಟಿಕೊಂಡಿರುತ್ತಾರೆ. ಇದನ್ನು ನೋಡಿಯೇ ನನ್ ಅಮ್ಮ ಅವರನ್ನು ನೋಡಿ ಕಲೆತಿಕೋ ಎಂದು ಬೈಯುತ್ತಿರುತ್ತಾರೆ. ಆದರೆ ನನಗೆ ಓದು ಅಂದರೆ ಒಂದು ಕಿಲೋಮೀಟರ್ ಓಡಿ ಹೋಗಬೇಕು ಅನ್ನಿಸುತ್ತದೆ. ನನ್ನ ಹಾಗೆ ಸತೀಶನು ಕೂಡ, ಅದಕ್ಕೆ ನಂಗೆ ಸತೀಶನ ಜೊತೆ ಆಟ ಆಡುವುದಕ್ಕೆ ತುಂಬಾ ಇಷ್ಟ.

ಎಂದಿನಂತೆ ಅದೊಂದು ದಿನ ಶಾಲೆಯಿಂದ ಮನೆಗೆ ಮರಳಿ ಬಂದೆ, ಪ್ರತಿ ದಿನ ತಡವಾಗಿ ಬರುತ್ತಿದ್ದ ಅಪ್ಪ ಅವತ್ತು ಬೇಗ ಬಂದಿದ್ದ. ಒಂದು ಕಡೆ ಆಶ್ಚರ್ಯ ಹಾಗು ಸಂತೋಷ ಮತ್ತೊಂದು ಕಡೆ ಬೇಜಾರ್ ಆಯಿತು, ಯಾಕೆಂದರೆ ಸತೀಶನ ಜೊತೆ ಆಡುವುದಕ್ಕೆ ಅಪ್ಪ ಒಪ್ಪುವುದಿಲ್ಲ. ಹಾಕಿರುವ ಶೂ ಬಿಚ್ಚಬೇಕಾದರೆ ಇಲ್ಲಿ ಬಾ ರಾಣಿ ಎಂದು ಅಪ್ಪ ಕರೆದ. ಏನಪ್ಪಾ ಎಂದು ಹತ್ತಿರ ಹೋದೆ, ಅಪ್ಪ ನನ್ನ ತಲೆ ಸವರುತ್ತ ನಾಳೆ ನಿನ್ನ ಜೊತೆ ಶಾಲೆಗೆ ಬರುವೆ ನಿಮ್ಮ ಶಾಲೆಯ ಮುಖ್ಯೋಪಾದ್ಯಯವರನ್ನು ಬೇಟಿ ಮಾಡಬೇಕು ಎಂದು ಹೇಳಿದರು. ಆಶರ್ಯದಿಂದ ಯಾಕೆ ಅಪ್ಪ ಎಂದು ಕೇಳಿದೆ, ಆಗ ನಗುತ್ತ ನಿಮ್ ಅಪ್ಪನಿಗೆ ಬೇರೆ ಊರಿನಲ್ಲಿ ಕೆಲಸ ಸಿಕ್ಕಿದೆ ಮಗಳೆ, ಆದಷ್ಟು ಬೇಗ ಈ ಊರನ್ನು ಬಿಡಬೇಕು ಅದಕ್ಕೆ ನಿನ್ನನ್ನು ಕೂಡ ಶಾಲೆಯಿಂದ ಬಿಡಿಸಿ ಹೋಗುತ್ತಿರುವ ಹೊಸ ಊರಿನಲ್ಲಿ ಒಳ್ಳೆಯ ಶಾಲೆಗೆ ಸೇರಿಸಬೇಕು ಅದಕ್ಕೆ ನಿಮ್ಮ ಶಾಲೆಯ ಮುಖ್ಯೋಪಾದ್ಯರ ಜೊತೆ ಮಾತಾಡಬೇಕು ಎಂದು ಹೇಳಿದರು.ಇದನ್ನು ಕೇಳಿ ನನಗೆ ಆಕಾಶವೇ ತಲೆಯ ಮೇಲೆ ಬಿದ್ದ ಹಾಗೆ ಆಯಿತು. ಅಂದುಕೊಂಡಂತೆ ಅಪ್ಪ ಮಾರನೆಯ ದಿವಸ ಶಾಲೆಗೆ ಬಂದು ನಮ್ಮ ಮುಖ್ಯೋಪಾದ್ಯರ ಜೊತೆ ಮಾತನಾಡಿ ನನ್ನನ್ನು ಶಾಲೆಯಿಂದ ಬಿಡಿಸಿದರು.

ನಿಜವಾಗಿಯೂ ನನಗೆ ಬೇಸರವಾಗಿದ್ದು ಶಾಲೆ ಬಿಟ್ಟಿದಕ್ಕೆ ಅಲ್ಲ, ಸತೀಶನ ಜೊತೆ ನಾನು ಆಡುತ್ತಿದ್ದ ದಿವಸಗಳು ಕೊನೆಯಾಯಿತು ಎಂದು. ಕೊನೆಗೆ ಊರು ಬಿಡುವ ಹಿಂದಿನ ದಿವಸ ಇಬ್ಬರು ಜೊತೆಯಲ್ಲಿ ತೆಗೆಸಿಕೊಂಡಿದ್ದ ಫೋಟೋವನ್ನು ಹರಿದು ನೆನಪಿಗಾಗಿ ಅವನ ಫೋಟೋವನ್ನು ನಾನು ಹಾಗೂ ನನ್ನ ಫೋಟೋವನ್ನು ಅವನು ಇಟ್ಟುಕೊಂಡೆವು. ಮಾರನೆಯ ದಿವಸ ಅಳುತ್ತ ಅವನ ಮುಖ ನೋಡುತ್ತಾ ಅಪ್ಪನ ಕಾರು ಹತ್ತಿ ಹೊರಟೇಬಿಟ್ಟೆವು. ಜೀವನದಲ್ಲಿ ನನಗೆ ಅಂತ ಇದ್ದ ಒಬ್ಬ ಒಳ್ಳೆಯ ಸ್ನೇಹಿತ ನನ್ನಿಂದ ದೂರವಾದ ದಿವಸವದು.

ವರ್ಷಗಳು ಕಳೆದವು, ಹೊಸ ಊರಿನಲ್ಲಿ ಹೊಸ ಗೆಳೆಯರು ಸಿಕ್ಕರು. ಆದರೆ ಯಾರು ಕೂಡ ಸತೀಶನ ತರಹ ಇರಲಿಲ್ಲ. ಎಲ್ಲರೂ ಪುಸ್ತಕದ ಹುಳಗಳೇ. ಸತೀಶನನ್ನು ತುಂಬಾ ನೆನಪಿಸಕೊಳ್ಳತೊಡಗಿದೆ. ಆಟವಾಡಲು ಒಬ್ಬ ಒಳ್ಳೆಯ ಗೆಳಯ ಅಥವಾ ಗೆಳತಿ ಮನೆಯ ಹತ್ತಿರ ಸಿಗಲಿಲ್ಲ. ಇದರಿಂದ ತುಂಬಾ ಬೇಸರವಾಗತೊಡಗಿತು. ಹೇಗೋ ನನ್ನ ಬಾಲ್ಯವನ್ನು ಕಳೆದೆ. ಹೀಗೆ 12 ವರ್ಷಗಳು ಕಳೆದವು. ನನ್ನ ದ್ವಿತೀಯ PUC ನಂತರ ಮೆಡಿಕಲ್ ಓದಲು ಬೇರೆ ಊರಿಗೆ ಹೋಗಲೇಬೇಕಾದ ಪರಿಸ್ಥಿತಿ ಬಂತು. ಆಗ ನನ್ನ ತಲೆಯಲ್ಲಿ ಬಂದ ಊರಿನ ಹೆಸರೇ ಸತೀಶನ ಊರು, ನಾನು ಇದ್ದ ಊರಿನಲ್ಲಿ ಯಾವ ಒಂದು ಒಳ್ಳೆಯ ಮೆಡಿಕಲ್ ಸಂಸ್ಥೆ ಇರದ ಕಾರಣ ನನ್ನ ಅಪ್ಪನು ಕೂಡ ನನ್ನನ್ನು ಬೇರೆ ಊರಿಗೆ ಕಳುಹಿಸುವ ಬಗ್ಗೆ ಮನೆಯಲ್ಲಿ ಅಮ್ಮನ ಎದುರು ಪ್ರಸ್ತಾಪ ಮಾಡಿದ್ದರು. ಹೇಗೋ ಸತೀಶನು ಇದ್ದ ಊರಿಗೆ ಮೆಡಿಕಲ್ ಕಲಿಯಲು ಬಂದೆ. ಆದರೆ ನನ್ನಲ್ಲಿ ಕಾಡುತಿದ್ದ ಪ್ರಶ್ನೆ ಏನೆಂದರೆ ಅವನು ಮೊದಲಿನ ತರಹ ಇರುತ್ತಾನೋ ಅಥವ ಬದಲಾಗಿರುತ್ತಾನೋ ಎಂದು. 12 ವರ್ಷಗಳ ನಂತರ ಅವನು ಇರುವ ಊರಿಗೆ ಹೋಗುತ್ತಿದ್ದೇನೆ. ಮೊದಲು ಅವನ ಮನೆಗೆ ಹೋಗಿ ನಂತರ ಹಾಸ್ಟೆಲ್ಗೆ ಹೋಗೋಣ ಅಂದುಕೊಂಡು ಅವನು ಇದ್ದ 12 ವರ್ಷಗಳ ಹಿಂದಿನ ಮನೆಗೆ ಹೋಗುತ್ತಿದ್ದೆ. ಅವನ ನೋಡುವ ಆತುರದಲ್ಲಿ ದಾರಿಯಲ್ಲಿ ಎದುರುಗಡೆ ಬರುತ್ತಿದ್ದ ಒಬ್ಬ ಹುಡುಗನಿಗೆ ಡಿಕ್ಕಿ ಹೊಡೆದೆ. ಕೈಯಲ್ಲಿದ್ದ ನನ್ನ ಬ್ಯಾಗ್ ಮತ್ತು ಮೊಬೈಲ್ ಕೆಳಗೆ ಬಿತ್ತು. ಮೊಬೈಲಿನಲ್ಲಿ ಸತೀಶನ ಫೋಟೋವನ್ನು wallpaper ಮಾಡಿ ಇಟ್ಟಿದ್ದೆ. ಮೊಬೈಲ್ ಬಿದ್ದ ರಬಸಕ್ಕೆ ನನ್ನ ಮೊಬೈಲ್ ಒಡೆದು ಹೋಯಿತು. ಅದನ್ನು ಕಂಡು ತುಂಬಾ ಕೋಪ ಬಂದಿತು, ಏಕೆಂದರೆ ಅದರಲ್ಲಿ ಸತೀಶನ ಫೋಟೋವನ್ನು ಸ್ಕ್ಯಾನ್ ಮಾಡಿ ಇಟ್ಟುಕೊಂಡಿದ್ದೆ.

ಆ ಹುಡುಗನಿಗೆ ಬಾಯಿಗೆ ಬಂದ ಹಾಗೆ ಬಯ್ಯತೊಡಗಿದೆ. ಹಾಗೆಯೇ ಬಯ್ಯುತ್ತಾ ನನ್ನ ಎಡಗಡೆಗೆ ಬಿದ್ದಿದ್ದ ಒಂದು ಫೋಟೋವನ್ನು ನೋಡಿದೆ. ಅದು ಬಾಲ್ಯದಲ್ಲಿ ತೆಗೆಸಿಕೊಂಡ ನನ್ನ ಫೋಟೋ ಆಗಿತ್ತು. ನನಗೆ ಆಶ್ಚರ್ಯವಾಯಿತು, ನನ್ನ ಫೋಟೋ ಇಲ್ಲಿ ಏಕೆ ಬಿದ್ದಿದೆ ಎಂದು. ನೋಡ ನೋಡುತ್ತಿದ್ದಂತೆ ಆ ಹುಡುಗ ಬಿದ್ದಿರುವ ಫೋಟೋವನ್ನು ಎತ್ತಿಕೊಂಡು ತನ್ನ ಜೇಬಿನಲ್ಲಿ ಇಟ್ಟುಕೊಂಡನು. ಆಶ್ಚರ್ಯದಿಂದ ಹೇ ಅದು ನನ್ನ ಫೋಟೋ ನಿನಗೆ ಹೇಗೆ ಸಿಕ್ಕಿತು ಎಂದು ಕೇಳಿದೆ. ಅದಕ್ಕೆ ಆ ಹುಡುಗ ನನ್ನ ಮುಕವನ್ನೇ ನೋಡುತ್ತಾ ನಗಲು ಶುರುಮಾಡಿದ. ಅವಾಗಲೇ ನನಗೆ ಗೊತ್ತಾಗಿದ್ದು ಅದು ಸತೀಶನೇ ಅಂತ. 12 ವರ್ಷದ ಹಿಂದೆ ಇದ್ದ ಅದೇ ನಗುವು ಈಗಲೂ ಹಾಗೆಯೇ ಇತ್ತು. ನಂತರ ಇಬ್ಬರೂ ಮಾತನಾಡುತ್ತಾ ಅವನ ಮನೆಯ ಕಡೆ ನಡೆದವು. ದಾರಿಯುದ್ದಕ್ಕೂ ಇಬ್ಬರು ನಮ್ಮ 12 ವರ್ಷದ ಜೀವನದ ಬಗ್ಗೆ ಮಾತನಾಡುತ್ತಾ ಇದ್ದೆವು. ಇದೆಲ್ಲದರ ಮದ್ಯೆ ನನಗೆ ತಿಳಿದ ಸಂಗತಿ ಎಂದರೆ ಅವನಿಗೂ ಕೂಡ ನಮ್ಮ ಕಾಲೇಜ್ನಲ್ಲಿಯೇ ಮೆಡಿಕಲ್ ಸೀಟ್ ಸಿಕ್ಕಿತ್ತು. ಬಾಲ್ಯದ ಗೆಳೆಯನ ಜೊತೆ ಮತ್ತೆ ದಿನಗಳು ಸಿಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಆದರೆ ನನಗೆ ಮತ್ತೆ ಸಿಕ್ಕಿದೆ. ಎಷ್ಟು ಅದೃಷ್ಟವಂತ ಅಲ್ಲವೆ ನಾನು?

For more Stories follow Karunadu Today

Click here to Join Our Whatsapp Group