ಈ ನಮ್ಮ ಬ್ರಹ್ಮಾಂಡದಲ್ಲಿ ಸೃಷ್ಟಿಯಾಗಿರುವ ಪ್ರತಿಯೊಂದು ವಸ್ತುವು ಗಣಿತದ ಆದಾರದ ಮೇಲೆಯೇ ಸೃಷ್ಟಿಯಾಗಿದೆ. ಇಂತಹ ಒಂದು ವಿದ್ಯೆಯನ್ನು ಅರಿತ ಅದೆಷ್ಟೋ ಗಣಿತ ಶಾಸ್ತ್ರಜ್ಞರು ನಮ್ಮ ಭೂಮಿಯ ಮೇಲೆ ಇರುವರು. ನಮ್ಮ ದೇಶದಿಂದ ಪ್ರಪಂಚಕ್ಕೆ ಈ ಗಣಿತದ ಮೂಲಕ ಕೊಡುಗೆ ನೀಡಿರುವ ಅನೇಕ ಶಾಸ್ತ್ರಜ್ಞರು ಇರುವರು. ಅವರುಗಳಲ್ಲಿ “ಆರ್ಯಭಟ, ರಾಮಾನುಜನ್, ಸಿ.ಆರ್.ರಾವ್ ಮತ್ತು ಹರೀಶ್ ಚಂದ್ರ” ಹೀಗೆ ಅನೇಕರಿದ್ದಾರೆ. ಇವರೆಲ್ಲರ ಬಗ್ಗೆ ನೀವುಗಳು ನಿಮ್ಮ ಶಾಲೆಯ ಪುಸ್ತಕದಲ್ಲೋ, ಕಾಲೇಜಿನಲ್ಲೋ ಅಥವ ಇನ್ನೆಲ್ಲೋ ಓದಿಯೇತಿರುತ್ತೀರ. ಆದರೆ ಇಂದು ನಿಮಗೆ ನೀವೆಂದು ಕೇಳಿರದ ಒಬ್ಬ ಮಹಾನ್ ಗಣಿತ ಶಾಸ್ತ್ರಜ್ಞರ ಕುರಿತು ತಿಳಿಸಿಕೊಡುತ್ತೇನೆ. ಅವರ ಕಥೆಯನ್ನು ಕೇಳಿದ ಮೇಲೆ ನಿಮಗೆ ಒಂದೆಡೆ ಹೆಮ್ಮೆಯಾದರೆ ಇನ್ನೊಂದೆಡೆ ಕಣ್ಣೀರು ಬರುತ್ತದೆ. ಬನ್ನಿ ಆ ಮಹಾನ್ ವ್ಯಕ್ತಿಯ ಸಂಪೂರ್ಣ ಜೀವನ ಕಥೆಯನ್ನು ತಿಳಿದುಕೊಳ್ಳೋಣ.

ಅವರ ಹೆಸರು “ವಸಿಷ್ಠ ನಾರಾಯಣ ಸಿಂಗ್”, ಹುಟ್ಟಿದ್ದು ಏಪ್ರಿಲ್ 2, 1942 ರಂದು ಬಿಹಾರದ ಬಸಂತ್ಪುರ್ ಎನ್ನುವ ಪುಟ್ಟ ಗ್ರಾಮದಲ್ಲಿ. ಇವರ ತಂದೆ “ಲಾಲ್ ಬಹಾದೂರ್ ಸಿಂಗ್ ಮತ್ತು ತಾಯಿ ಲಹಸೋ ದೇವಿ”. ಇವರ ತಂದೆಯು ಒಬ್ಬ ಪೊಲೀಸ್ ಪೇದೆಯಾಗಿದ್ದರು ಮತ್ತು ತಾಯಿ ಮನೆಯಲ್ಲಿ ಇರುತ್ತಿದ್ದರು. ವಸಿಷ್ಠ ಅವರು ಒಬ್ಬ ಸಾದಾರಣ ಬಾಲಕನ ತರಹ ಇರಲಿಲ್ಲ, “ನೇತಾರತ್ ರೆಸಿಡೆಂಶ್ಚಿಯಲ್” ಶಾಲೆಯಲ್ಲಿ ಇವರು ಓದುತ್ತಿರುವ ವೇಳೆಯಲ್ಲಿಯೇ ಇವರು ಗಣಿತದಲ್ಲಿ ಅದೆಷ್ಟು ಪರಿಣಿತರು ಎನ್ನುವುದು ಆ ಶಾಲೆಯ ಶಿಕ್ಷಕರಿಗೆ ತಿಳಿದಿತ್ತು. 5ನೇ ತರಗತಿಯಲ್ಲಿ ಇದ್ದಾಗ 12ನೇ ತರಗತಿಯ ಗಣಿತದ ಪ್ರಶ್ನೆಗಳನ್ನು ಇವರು ಉತ್ತರಿಸುತ್ತಿದ್ದರು. ಇವರ ಈ ಬುದ್ದಿಶಕ್ತಿಯನ್ನು ಕಂಡು ಶಾಲೆಯಲ್ಲಿ ಎಲ್ಲರು ಅಚ್ಚರಿಗೊಂಡಿದ್ದರು. ಗಣಿತದ ಕುರಿತಾದ ಇವರ ಈ ಆಸಕ್ತಿಯನ್ನು ಕಂಡು 1961 ರಲ್ಲಿ ಇವರಿಗೆ ಪಟ್ನಾ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳ ಕಾಲ ಗಣಿತದಲ್ಲಿ “ಬಿ.ಎಸ್.ಇ” ಮಾಡಲು ಅನುಮತಿ ನೀಡಲಾಯಿತು. ಅಲ್ಲಿ ಓದುತ್ತಿರುವ ವೇಳೆಯಲ್ಲಿ ಅದೆಷ್ಟೋ ಬಾರಿ ಗಣಿತದ ಉಪನ್ಯಾಸಕರಿಗೇ ಗಣಿತವನ್ನು ಸುಲಭವಾಗಿ ಕಲಿಸುವ ವಿಧಾನವನ್ನು ಹೇಳಿಕೊಡುತ್ತಿದ್ದರು, ಗಣಿತದಲ್ಲಿ ಅಷ್ಟೊಂದು ಪರಿಣತರಿದ್ದರು ವಸಿಷ್ಠ ಅವರು. ಗಣಿತದಲ್ಲಿ ಇವರಿಗಿದ್ದ ಅದ್ಬುತ ಪ್ರತಿಬೆಯನ್ನು ಕಂಡು ಸಂಪೂರ್ಣ ಬಿಹಾರದ ಜನರು ಅಚ್ಚರಿಪಟ್ಟಿದ್ದರು. ಇವರ ಬಳಿ ಈ ಅದ್ಬುತ ಪ್ರತಿಬೆ ಇದ್ದ ಕಾರಣ ಪಟ್ನಾ ವಿಶ್ವವಿದ್ಯಾಲಯವು ಇವರಿಗೆ “ಬಿ.ಎಸ್.ಇ” ಯಲ್ಲಿ ಒಮ್ಮೆಲೆ ಕೊನೆಯ ವರ್ಷದ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ನೀಡಿತು. ಆ ಪರೀಕ್ಷೆಯಲ್ಲಿ ಪಟ್ನಾ ವಿಶ್ವವಿದ್ಯಾಲಯಕ್ಕೆ ಪ್ರಥಮ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಅದೊಂದು ದಿನ ಅಮೆರಿಕದ “ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ” ಉಪನ್ಯಾಸಕರಾಗಿದ್ದ ಪ್ರಸಿದ್ದ ಗಣಿತಶಾಸ್ತ್ರಜ್ಞ “ಜಾನ್ ಎಲ್ ಕೆಲ್ಲಿ” ಅವರು ಭಾರತಕ್ಕೆ ಯಾವುದೋ ಒಂದು ಸಂಶೋದನೆಯ ಕೆಲಸದ ಮೇರೆಗೆ ಭೇಟಿ ನೀಡಿದ್ದರು. ಆಗ ಅವರಿಗೆ ವಸಿಷ್ಠ ಅವರ ಕುರಿತು ತಿಳಿಯಿತು. ಅಮೆರಿಕಾಕ್ಕೆ ತೆರಳುವ ಮುನ್ನ ವಸಿಷ್ಠ ಅವರನ್ನು ಒಮ್ಮೆ ಭೇಟಿ ಮಾಡಬೇಕೆಂದು ತೀರ್ಮಾನಿಸಿದ ಕೆಲ್ಲಿ ಅವರು ನೇರವಾಗಿ ವಸಿಷ್ಠ ಅವರನ್ನು ಹುಡುಕುತ್ತ ಬಿಹಾರದ ಅವರ ಮನೆಗೆ ತೆರಳಿದರು. ವಸಿಷ್ಠ ಅವರ ಮನೆಗೆ ತೆರಳುವು ಮುನ್ನ ಕೆಲ್ಲಿ ಅವರು ಕಠಿಣವಾದ ಗಣಿತದ ಸವಾಲನ್ನು ಸಿದ್ದಪಡಿಸಿಕೊಂಡು ಹೋಗಿದ್ದರು. ವಸಿಷ್ಠ ಅವರನ್ನು ಭೇಟಿಯಾದ ಕೆಲ್ಲಿ ಅವರು ನಿಮ್ಮ ಬಗ್ಗೆ ತುಂಬಾ ಕೇಳಿರುವೆ, ನೀವು ನಿಜವಾಗಿಯು ಗಣಿತದಲ್ಲಿ ಪರಿಣಿತರಾಗಿದ್ದರೆ ಈ ಸವಾಲನ್ನು ಬಿಡಿಸಿ ನನಗೆ ತೋರಿಸಿ ಎಂದು ಹೇಳಿದರು. ಆಗ ವಸಿಷ್ಠ ಅವರು ಕೆಲ್ಲಿ ಅವರು ನೀಡಿದ ಸವಾಲನ್ನು ಸುಲಭವಾಗಿ ಬಿಡಿಸಿ ಕೆಲ್ಲಿ ಅವರಿಗೆ ಅಚ್ಚರಿ ಮೂಡಿಸಿದ್ದರು. ಇದನ್ನು ಕಂಡು ಕೆಲ್ಲಿ ಅವರು ನಿಮಗೆ ಅಮೆರಿಕದಲ್ಲಿ ಬಹುದೊಡ್ಡ ಜೀವನವಿದೆ ನನ್ನ ಜೊತೆ ಬನ್ನಿ ಎಂದು ಕರೆದರು. ಕೆಲ್ಲಿ ಅವರ ಮಾತಿಗೆ ಸಂತೋಷಗೊಂಡ ವಸಿಷ್ಠ ಅವರು ಅಮೆರಿಕಕ್ಕೆ ತೆರಳಲು ಒಪ್ಪಿದರು.

ಕೆಲ್ಲಿ ಅವರ ಜೊತೆ ಅಮೆರಿಕಾಕ್ಕೆ ಹೋದ ವಸಿಷ್ಠ ಅವರು “ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ” “ಸೈಕಲ್ ವೆಕ್ಟರ್ ಬಾಹ್ಯಾಕಾಶ ಸಿದ್ಧಾಂತ” ದಲ್ಲಿ ಪಿಎಚ್‌ಡಿ ಮಾಡಿ ಅಮೆರಿಕದ ಪ್ರಸಿದ್ದ ಬಾಹ್ಯಾಕಾಶ ಸಂಸ್ಥೆಯಾದ ನಾಸಾದಲ್ಲಿ ವಿಜ್ಞಾನಿಯಾಗಿ ಕೆಲಸ ಪಡೆದುಕೊಂಡರು. ನಾಸಾದಲ್ಲಿ ವಿಜ್ಞಾನಿಯಾಗಿ ಕೆಲಸ ಪಡೆದುಕೊಂಡ ಮೇಲೆ ವಸಿಷ್ಠ ಅವರ ಪ್ರತಿಬೆಯನ್ನು ಕಂಡು ಅದೊಂದು ದಿನ ನಾಸಾವೆ ದಂಗಾಗಿತ್ತು. ನಾಸಾದ ಆಪೋಲೋ ಮಿಷನ್ ನಡೆಯುತ್ತಿರುವ ಸಂದರ್ಭದಲ್ಲಿ ಎರಡು ಕಂಪ್ಯೂಟರ್ ಗಳು ವೈರಸ್ ದಾಳಿಗೆ ಒಳಗಾಗಿ ಕಾರ್ಯ ವಹಿಸುವುದನ್ನೇ ನಿಲ್ಲಿಸಿದ್ದವು. ಆಗ ವಸಿಷ್ಠ ಅವರು ಆ ಕಂಪ್ಯೂಟರ್ ಗಳು ಮಾಡುವ ಕೆಲಸವನ್ನು ಇವರೊಬ್ಬರೆ ಮಾಡಿ ಆಪೋಲೋ ಮಿಷನ್ ಗೆ ಬೇಕಾಗಿದ್ದ ಗಣಿತದ ಸೂತ್ರವನ್ನು ಕಂಡು ಹಿಡಿದುಕೊಟ್ಟಿದ್ದರು. ನೀವೇ ಯೋಚಿಸಿ ಎರಡು ಕಂಪ್ಯೂಟರ್ ಗಳು ಸೇರಿ ಬಿಡಿಸುವ ಗಣಿತದ ಸವಾಲನ್ನು ಇವರೊಬ್ಬರೆ ಬಿಡಿಸಿದ್ದರೆಂದರೆ ಅದೆಂತಹ ಮಹಾನ್ ಗಣಿತ ಶಾಸ್ತ್ರಜ್ಞ ಇವರಿರಬೇಕೆಂದು. ಇವರ ಈ ಪ್ರತಿಭೆಯನ್ನು ಕಂಡು ಅಮೆರಿಕ ಸರ್ಕಾರ ಇವರಿಗೆ ಅಮೆರಿಕದಲ್ಲಿಯೇ ಶಾಶ್ವತವಾಗಿ ನೆಲೆಸುವ ಅವಕಾಶವನ್ನು ಮತ್ತು ನಾಸಾದಲ್ಲಿ ಉನ್ನತ ಹುದ್ದೆಯನ್ನು ನೀಡುವ ಅವಕಾಶವನ್ನು ನೀಡಿತ್ತು. ಆದರೆ ವಸಿಷ್ಠ ಅವರು ಅದನ್ನು ತಿರಸ್ಕರಿಸಿ ಭಾರತಕ್ಕೆ ಮರಳಿ ಇಲ್ಲಿನ ವಿಧ್ಯಾರ್ಥಿಗಳಿಗೆ ಗಣಿತದ ಕುರಿತು ತರಬೇತಿ ನೀಡಲು ತೀರ್ಮಾನಿಸಿದರು.

1971 ರಲ್ಲಿ ಭಾರತಕ್ಕೆ ಮರಳಿದ ಇವರು ಕಾನ್ಪುರ್ ನಗರದಲ್ಲಿರುವ “ಐ.ಐ.ಟಿ” ಯಲ್ಲಿ ಉಪನ್ಯಾಸಕರಾಗಿ ಕಾರ್ಯವಹಿಸಲು ಶುರು ಮಾಡಿದರು. ಇದಾದ ಬಳಿಕ 8 ತಿಂಗಳ ನಂತರ ಮುಂಬೈ ನಗರದಲ್ಲಿರುವ “ಟಿ.ಐ.ಎಫ್.ಆರ್” ನಲ್ಲಿ ಕಾರ್ಯ ವಹಿಸಿದರು. 1973 ರಲ್ಲಿ ಕೋಲ್ಕತ್ತಾ ನಗರದಲ್ಲಿರುವ ಐ.ಎಸ್.ಐ ನಲ್ಲಿ ಶಾಶ್ವತ ಉಪನ್ಯಾಸಕರಾಗಿ ಕಾರ್ಯ ವಹಿಸಲು ಶುರು ಮಾಡಿದರು. ಹೀಗೆ ದೇಶದ ಪ್ರಸಿದ್ದ ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯ ವಹಿಸಲು ಶುರುಮಾಡಿದ ವಸಿಷ್ಠ ಅವರ ಜೀವನವು ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಅವರ ತಂದೆ ತಾಯಿ ಇವರಿಗೆ ಮದುವೆ ಮಾಡಲು ಮುಂದಾಗಿ ಇವರಿಗೆ ಇಷ್ಟವಿಲ್ಲದಿದ್ದರು ಕೂಡ ಬಲವಂತವಾಗಿ ಮದುವೆ ಮಾಡಿಸಿದರು. ಮದುವೆಯ ಬಳಿಕ ಇವರ ಜೀವನದಲ್ಲಿ ಬಹು ದೊಡ್ಡ ತಿರುವು ಕಂಡಿತು. ಮದುವೆಯಾದ ಹೆಂಡತಿಯ ಜೊತೆ ಕಾಲ ಕಳೆಯಲು ಇವರಿಗೆ ಇಷ್ಟವಿರಲಿಲ್ಲ. ಸದಾ ಕಾಲ ಗಣಿತದ ಅನೇಕ ಸವಾಲುಗಳನ್ನು ಬಿಡಿಸುತ್ತ ಮನೆಯಲ್ಲಿ ಕೂರುತ್ತಿದ್ದರು.

ದಿನಗಳು ಕಳೆದಂತೆ ವಸಿಷ್ಠ ಅವರ ಮನಸ್ಥಿತಿಯು ಇದ್ದಕ್ಕಿದ್ದಂತೆ ಬದಲಾಗತೊಡಗಿತು. ನೋಡ ನೋಡುತ್ತಿದ್ದಂತೆ ಇವರಿಗೆ ವಿಚಿತ್ರವಾದ ಹುಚ್ಚನ ತರಹದ ಕಾಯಿಲೆ ಬಂತು. ಇದನ್ನು ಕಂಡ ಇವರ ಹೆಂಡತಿಯು ಇವರಿಗೆ ವಿಚ್ಛೇದನೆ ನೀಡಿ ಹೋದಳು. ಇವರ ರೋಗವನ್ನು ಸರಿಪಡಿಸಲು ಪಟ್ನಾ ಸರ್ಕಾರವು ಇವರಿಗೆ ಚಿಕಿತ್ಸೆ ಕೊಡಿಸಿತು. ಚಿಕಿತ್ಸೆ ತೆಗೆದುಕೊಳ್ಳುವ ವೇಳೆಯಲ್ಲಿ ಅನೇಕ ಜನರು ಇವರ ಬಳಿ ಬಂದು ತಮ್ಮ ಬಳಿ ಇರುವ ಗಣಿತದ ಸವಾಲನ್ನು ವಸಿಷ್ಠ ಅವರಿಗೆ ನೀಡಿ ಅದನ್ನು ಬಿಡಿಸಲು ಹೇಳುತ್ತಿದ್ದರು. ಇವರಿಗೆ ಮಾನಸಿಕ ಕಾಯಿಲೆ ಇದ್ದರೂ ಕೂಡ ಆ ಗಣಿತದ ಸವಾಲುಗಳನ್ನು ಬಿಡಿಸುತ್ತಿದ್ದರು. ಇವರು ಬಿಡಿಸುತ್ತಿದ್ದ ಸವಾಲುಗಳನ್ನು ತಾವೇ ಬಿಡಿಸಿರುವುದಾಗಿ ಹೇಳಿಕೊಂಡು ಅನೇಕ ಜನರು ಹೆಸರು ಮಾಡಿಕೊಂಡಂತಹ ಘಟನೆಗಳು ಕೂಡ ನಡೆದವು. ಇವೆಲ್ಲವನ್ನೂ ಕಂಡು ವಸಿಷ್ಠ ಅವರಿಗೆ ಸಾಕಷ್ಟು ನೋವಾಗುತ್ತಿತ್ತು. ಕೆಲವರು ಹೇಳುವ ಪ್ರಕಾರ ಇವರ ಈ ಪರಿಸ್ಥಿತಿಗೆ ಮದುವೆಯಾಗಿದ್ದ ಹೆಂಡತಿಯೇ ಕಾರಣವಂತೆ. ವಸಿಷ್ಠ ಅವರು ಬಿಡಿಸಿ ಇಡುತ್ತಿದ್ದ ಗಣಿತದ ಸವಾಲುಗಳನ್ನು ಬೆಂಕಿಹಚ್ಚಿ ಅದೆಷ್ಟೋ ಬಾರಿ ಸುಟ್ಟು ಹಾಕಿದ್ದಳಂತೆ ಆ ಮಹಾ ತಾಯಿ, ಅದನ್ನು ಕಂಡು ಇವರು ಈ ರೀತಿ ಹುಚ್ಚನ ಹಾಗೆ ಆಗಿದ್ದರು ಎಂದು ಹೇಳುತ್ತಾರೆ.

ಹೀಗೆ 11 ವರ್ಷಗಳ ಕಾಲ ಚಿಕಿತ್ಸೆ ಪಡೆದುಕೊಂಡ ಮೇಲೆ ವಸಿಷ್ಠ ಅವರನ್ನು ಪಟ್ನಾ ಸರ್ಕಾರವು ಇಂತಹ ಮಹಾನ್ ಗಣಿತಶಾಸ್ತ್ರಜ್ಞರನ್ನು ನಾವು ಈ ರೀತಿ ಹುಚ್ಚಾಸ್ಪತ್ರೆಯಲ್ಲಿ ಇಡುವುದು ಸರಿಯಲ್ಲವೆಂದು ಅವರಿಗಾಗಿಯೇ ಒಂದು ವಿಶೇಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿತು. ಕೊನೆಗೆ ಅಲ್ಲಿ ಸರಿ ಹೋಗಿ ಮನೆಗೆ ಮರಳಿದರು . ಆದರೆ ಅದೊಂದು ದಿನ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋದ ವಸಿಷ್ಠ ಅವರು 1989 ರಿಂದ 1993 ರವರೆಗು ಯಾರಿಗೂ ಕಾಣಸಿಗುವುದಿಲ್ಲ. ಎಲ್ಲೆಡೆ ಇವರನ್ನು ಹುಡುಕಿದ ಇವರ ಕುಟುಂಬದವರು ಇವರು ಸಿಗದೆ ಇರುವುದನ್ನು ಕಂಡು ಸತ್ತು ಹೋಗಿದ್ದಾರೆ ಎಂದು ಭಾವಿಸಿದ್ದರು. ಆದರೆ ಕೊನೆಗೆ ಇವರ ತಮ್ಮನಿಗೆ ಪಟ್ನಾ ಬಳಿಯ ಒಂದು ರಸ್ತೆಯಲ್ಲಿ ಹುಚ್ಚನ ಹಾಗೆ ವಸಿಷ್ಠ ಅವರು ಇರುವುದನ್ನು ಕಾಣುತ್ತಾರೆ.ಆಗ ಅವರ ಹತ್ತಿರ ಹೋದಾಗ ಗಣಿತದ ಕುರಿತಾದ ಅನೇಕ ಸೂತ್ರಗಳನ್ನು ವಸಿಷ್ಠ ಅವರು ಬಡಬಡಿಸುತ್ತಿದ್ದರು.

ನವೆಂಬರ್ 14, 2019ರಂದು ಪಟ್ನಾ ಮೆಡಿಕಲ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ ವಶಿಷ್ಠ ಅವರು ನಮ್ಮ ದೇಶ ಕಂಡ ಅಪ್ರತೀಮ ಗಣಿತ ಶಾಸ್ತ್ರಜ್ಞರಾಗಿದ್ದರು.

Follow Karunadu Today for more Interesting Facts & Stories. 

Click here to Join Our Whatsapp Group