ನಮಗೆಲ್ಲ ಗೊತ್ತಿರುವ ಹಾಗೆ ನಮ್ಮ ದೇಶವನ್ನು ನಾಶ ಮಾಡಲು ಪಾಕಿಸ್ತಾನ ಹಲವಾರು ವರ್ಷಗಳಿಂದ ಕಾಯುತ್ತಲೇ ಇದೆ. ಇದಕ್ಕಾಗಿ ನೇರವಾಗಿ ಹೊಡೆದಾಡುವ ಬದಲು ಅಡ್ಡ ದಾರಿಯ ಮೂಲಕ ನಮ್ಮನ್ನು ತುಳಿಯಲು ನೋಡುತ್ತಿದೆ. ಆ ಅಡ್ಡ ದಾರಿಯೇ ಕಾಶ್ಮೀರದಲ್ಲಿರುವ ಮುಸ್ಲೀಂ ಯುವಕರ ತಲೆ ಕೆಡಿಸಿ ನಮ್ಮ ಭಾರತೀಯ ಸೇನೆಯ ಮೇಲೆ ದಾಳಿ ಮಾಡುವ ಹಾಗೆ ಮಾಡುವುದು. ಪುಲ್ವಾಮಾದಲ್ಲಿ ನಮ್ಮ ಯೋಧರ ಮೇಲೆ ನಡೆದ ಭೀಕರ ದಾಳಿ ಇದಕ್ಕೆ ಉತ್ತಮ ಉದಾಹರಣೆ. ಒಬ್ಬ ಕಾಶ್ಮೀರಿ ಯುವಕ 2016 ರಲ್ಲಿ “ಜೈಶ್-ಈ-ಮೊಹಮ್ಮದ್” ಎನ್ನುವ ಸಂಘಟನೆಗೆ ಸೇರಿಕೊಂಡು ಅವರಿಂದ ತರಬೇತಿ ಪಡೆದು ಮಾಡಿದಂತಹ ಆ ಭೀಕರ ದಾಳಿಯನ್ನು ಭಾರತೀಯರಾದ ನಾವು ಎಂದಿಗೂ ಮರೆಯುವುದಿಲ್ಲ. ಇದೇ ತರಹ ಅನೇಕ ಯುವಕರು ಉಗ್ರಗಾಮಿ ಸಂಘಟನೆಗೆ ಸೇರಿಕೊಂಡು ನಮ್ಮ ಸೈನಿಕರ ಹಾಗು ನಮ್ಮ ದೇಶದ ವಿರುದ್ದ ತಿರುಗಿಬಿದ್ದಿದ್ದಾರೆ.

ನಾವು ಅದೆಷ್ಟೋ ಬಾರಿ ಯಾಕೆ ಈ ಕಾಶ್ಮೀರಿ ಮುಸ್ಲೀಂ ಯುವಕರು ಒಳ್ಳೆಯ ವ್ಯಕ್ತಿಗಳಾಗದೆ ಈ ರೀತಿಯಾದ ದೇಶದ್ರೋಹ ಕೆಲಸಕ್ಕೆ ಇಳಿಯುತ್ತಾರೆ ಎಂದು ಯೋಚಿಸಿದ್ದೇವೆ. ಇದಕ್ಕೆ ಕಾರಣಗಳು ನೂರೆಂಟು ಇರಬಹುದು ಆದರೆ ಕೆಟ್ಟ ಕೆಲಸ ಮಾಡಬೇಕೆಂದರೆ ಅದೇನೇ ಕಾರಣಗಳು ಇದ್ದರೂ ಮಾಡಿಯೇತಿರುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ದೇಶದ ಒಳಗಿರುವ ಅನೇಕ ಕಾಶ್ಮೀರಿ ಯುವಕರನ್ನೇ ತೆಗೆದುಕೊಳ್ಳಿ. ಒಳ್ಳೆಯ ಕಾಲೇಜುಗಳಲ್ಲಿ ಓದಿ ದೊಡ್ಡ ಕಂಪನಿಗಳಲ್ಲಿ ಕೆಲಸದಲ್ಲಿದ್ದರೂ ಕೂಡ ದೇಶ ದ್ರೋಹಿ ಕೆಲಸಗಳನ್ನು ಮಾಡುತ್ತಾರೆ. ಇದನ್ನೆಲ್ಲಾ ಕಂಡು ನಮಗೆಲ್ಲ ಕಾಶ್ಮೀರಿ ಮುಸ್ಲಿಂ ಯುವಕರು ಎಂದರೆ ಸಾಕು ಸಂದೇಹದಿಂದ ನೋಡುವಂತಾಗಿದೆ. ಆದರೆ ಒಂದು ಮಾತು ನೆನಪಿರಲಿ ರಾವಣನ ಸಾಮ್ರಾಜ್ಯದಲ್ಲಿಯೂ ಕೂಡ ರಾಮನನ್ನು ಆರಾಧಿಸುವವರಿದ್ದರು. ನನ್ನ ಮಾತಿನ ಅರ್ಥ ಕಾಶ್ಮೀರದಲ್ಲಿರುವ ಎಲ್ಲಾ ಮುಸ್ಲಿಂ ಯುವಕರು ದೇಶದ್ರೋಹಿ ಕೆಲಸ ಮಾಡುವವರಲ್ಲ. ಅಲ್ಲಿರುವ ಅದೆಷ್ಟೋ ಯುವಕರು ತಮಗೆ ಅದೆಷ್ಟೇ ಕಡು ಬಡತನ ಇದ್ದರೂ ಕೂಡ ದೇಶಕ್ಕೆ ಕೆಟ್ಟದ್ದನ್ನು ಮಾಡದೆ ಇರುವವರಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಪುಲ್ವಾಮದಲ್ಲಿ 44 ಯೋಧರು ಹುತಾತ್ಮರಾದ ಮೇಲೆ ಉಗ್ರರ ವಿರುದ್ಧ ಹೋರಾಡುವ ಸಲುವಾಗಿ ಕಾಶ್ಮೀರದ ಬರೋಬ್ಬರಿ ಎರಡು ಸಾವಿರ ಮುಸ್ಲಿಂ ಯುವಕರು ನಮ್ಮ ಸೇನೆಗೆ ಸೇರಿದ್ದು. ಇಂದು ನಿಮಗೆ ಇಂತಹ ಒಬ್ಬ ಕಾಶ್ಮೀರಿ ಮುಸ್ಲಿಂ ಯುವಕನ ಕಥೆಯನ್ನು ಹೇಳುತ್ತೇನೆ. ಪಾಕಿಸ್ತಾನದ ಕುತಂತ್ರಕ್ಕೆ ಬಲಿಯಾಗಿ ಉಗ್ರಗಾಮಿಯಾಗಿದ್ದ ಆತನು ನಂತರ ಮನಪರಿವರ್ತನೆಯಾಗಿ ನಮ್ಮ ದೇಶ ಸೇವೆ ಮಾಡುವುದಲ್ಲದೆ ವೀರ ಮರಣ ಹೊಂದಿದ್ದಾನೆ. ಆತನ ಕಥೆಯು ಇಂದು ಕಾಶ್ಮೀರದಲ್ಲಿರುವ ಅನೇಕ ಮುಸ್ಲಿಂ ಯುವಕರಿಗೆ ಒಂದು ನಿದರ್ಶನವಾಗಿದೆ. ಬನ್ನಿ ಆ ಕಥೆಯನ್ನು ಹೇಳುತ್ತೇವೆ ಮುಂದೆ ಓದಿ.

ಅವರ ಹೆಸರು “ನಜೀರ್ ಅಹಮದ್ ವಾನಿ”. 1988 ರಲ್ಲಿ ಕಾಶ್ಮೀರದ ಕುಲ್ಗಾಮ ಜಿಲ್ಲೆಯ “ಚೆಕಿ ಅಶುಂಜಿ” ಎನ್ನುವ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದ ಇವರು ಚಿಕ್ಕ ವಯಸ್ಸಿನಿಂದ ಬಡತನದಲ್ಲಿಯೇ ಬೆಳೆದವರು. ಹೊಟ್ಟೆ ಪಾಡಿಗಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಬದುಕುತ್ತಿದ್ದ ಇವರಿಗೆ 1990 ರಲ್ಲಿ ಕಾಶ್ಮೀರದಲ್ಲಿ ಆದ ದಂಗೆಯಿಂದ ತನ್ನ ಕೆಲಸ ಕಳೆದುಕೊಳ್ಳಬೇಕಾಯಿತು. ಮಾಡಲು ಕೆಲಸವಿಲ್ಲದೆ ಅಲೆದಾಡುತ್ತಿದ್ದ ಇವರನ್ನು ಉಗ್ರಗಾಮಿ ಸಂಘಟನೆಯ ಕೆಲವು ಉಗ್ರರು ತಮ್ಮ ಜೊತೆ ಕೆಲಸ ಮಾಡಲು ಹೇಳಿದರು. ಒಳ್ಳೆ ಸಂಬಳ ಸಿಗುತ್ತದೆ ಎಂದು ಆಸೆ ತೋರಿಸಿ ಅವರನ್ನು ಒಬ್ಬ ಉಗ್ರವಾದಿಯನ್ನಾಗಿ ಪರಿವರ್ತಿಸಿದರು. ಆದರೆ ಅದೊಂದು ದಿನ ತಾನು ಮಾಡುತ್ತಿರುವುದು ತಪ್ಪು ಎಂದು ತಿಳಿದು ರಾತ್ರೋ ರಾತ್ರಿ ಅವರಿಂದ ತಪ್ಪಿಸಿಕೊಂಡು ಪಾಕಿಸ್ತಾನದಿಂದ ಕಾಶ್ಮೀರಕ್ಕೆ ಓಡಿ ಬಂದರು. ಕಾಶ್ಮೀರದಲ್ಲಿ ನಡೆಯುತ್ತಿದ್ದ ಹಿಂಸೆ ಕಂಡು ಹಾಗು ತನ್ನ ಹಾಗೆ ಅನೇಕ ಜನರು ಉಗ್ರಗಾಮಿಯಾಗುತ್ತಿದ್ದಾರೆ ಎಂದು ತಿಳಿದು ಉಗ್ರವಾದ ಸಂಘಟನೆಗಳ ವಿರುದ್ದ ಹೋರಾಡಲು ತೀರ್ಮಾನಿಸಿದರು. ಆಗ ಅವರು “ಇಕ್ವಾನ್” ಎನ್ನುವ ಕಾಶ್ಮೀರ ಸರ್ಕಾರದ ಸಂಘಟನೆಗೆ ಸೇರಿಕೊಂಡರು. ಉಗ್ರಗಾಮಿಗಳಾಗಿದ್ದವರು ಮನ ಪರಿವರ್ತನೆಯಾಗಿ ಬಂದರೆ ಅವರನ್ನು ಮಾನವೀಯತೆಯ ಮೇರೆಗೆ ಈ “ಇಕ್ವಾನ್” ಎನ್ನುವ ಸಂಘಟನೆಗೆ ಸೇರಿಸಿಕೊಳ್ಳಲಾಗುತ್ತಿತ್ತು. ಈ ಸಂಘಟನೆಯನ್ನು ಕಾಶ್ಮೀರ ಸರ್ಕಾರ ನೋಡಿಕೊಳ್ಳುತ್ತಿತ್ತು. ಆದರೆ ಕಾಲ ಕಳೆದಂತೆ 2002 ರಲ್ಲಿ ಈ ಸಂಘಟನೆಯನ್ನು ರಾಜಕೀಯ ಕುತಂತ್ರದಿಂದ ಮುಚ್ಚಲಾಯಿತು. ಇದರಿಂದ ವಾನಿ ಅವರ ಜೀವನೋಪಾಯಕ್ಕೂ ಕಲ್ಲು ಹಾಕಿದಂತಾಗುವುದರ ಜೊತೆಗೆ ಉಗ್ರರ ವಿರುದ್ದ ಹೋರಾಡುವ ತಮ್ಮ ಆಸೆಗೂ ನೀರೆರಿಚಿದಂತಾಯಿತು. ಆದರೆ ಇದರಿಂದ ದೃತಿಗೆಡದೆ ಭಾರತೀಯ ಸೇನೆಯಲ್ಲಿ ಸೇರಿಕೊಳ್ಳಲು ತೀರ್ಮಾನಿಸಿದರು. ಅಂದುಕೊಂಡಂತೆ 2004 ರಲ್ಲಿ ಭಾರತೀಯ ಸೇನೆಯ ಭೂದಳಕ್ಕೆ ಸೇರಿಕೊಂಡರು. ಉಗ್ರರನ್ನು ಬೇಟೆ ಆಡುವ ತಮ್ಮ ಕನಸ್ಸಿಗೆ ನಮ್ಮ ಭಾರತೀಯ ಸೇನೆಯು ಪ್ರೋತ್ಸಾಹ ನೀಡುತ್ತ ಅವರಿಗೆ ಸಮಯ ಕಳೆದಂತೆ ಉನ್ನತ ಅಧಿಕಾರಿಯಾಗಿಯೂ ಮಾಡಿತು. ಉಗ್ರರನ್ನು ಬೇಟೆ ಆಡುವುದಲ್ಲದೆ ಯುವಕರನ್ನು ಉಗ್ರವಾದಕ್ಕೆ ಪರಿವರ್ತನೆಗೊಳಿಸುತ್ತಿದ್ದ ಅನೇಕ ನಾಯಕರನ್ನು ಕೂಡ ಬೇಟೆ ಆಡುವುದರೊಂದಿಗೆ ನಮ್ಮ ಸೇನೆಯಲ್ಲಿ ಒಳ್ಳೆಯ ಹೆಸರು ಮಾಡಿದರು. ಒಂದಾನೊಂದು ಕಾಲದಲ್ಲಿ ಬಡತನದಿಂದ ಪರದಾಡುತ್ತಿದ್ದ ಇವರ ಕುಟುಂಬ ವಾನಿಯವರಿಂದ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಶುರು ಮಾಡಿತು. ಇವರ ಶೌರ್ಯವನ್ನು ಮೆಚ್ಚಿ ಎರಡು ಬಾರಿ “ಸೇನಾ ಪದಕ” ನೀಡಲಾಯಿತು. ಅದೆಷ್ಟೋ ಬಾರಿ ನಿನ್ನ ಕುಟುಂಬವನ್ನು ಸಾಯಿಸುತ್ತೇವೆ ಎಂದು ಉಗ್ರಗಾಮಿಗಳು ಇವರಿಗೆ ಧಮಕಿ ಹಾಕಿದ್ದರೂ ಕೂಡ ಹೆದರದೆ ಉಗ್ರರನ್ನು ಬೇಟೆ ಆಡುತ್ತಿದ್ದರು.

ನವೆಂಬರ್ 25, 2018 ರಲ್ಲಿ “ಹಿರಾಪುರ್” ಎನ್ನುವ ಹಳ್ಳಿಯ ಒಂದು ಮನೆಯಲ್ಲಿ ಅಡಗಿದ್ದ ಉಗ್ರರನ್ನು ಬೇಟೆ ಆಡಲು ಭಾರತೀಯ ಸೇನೆ, ಕಾಶ್ಮೀರದ ಪೋಲಿಸ್ ಹಾಗು ಸಿ.ಅರ್.ಪಿ.ಎಫ್ ಜೊತೆಗೂಡಿ ಮದ್ಯರಾತ್ರಿ 12.30 ರ ಸುಮಾರು ಹೋಗಿತ್ತು. ಅದರಲ್ಲಿ ವಾನಿ ಅವರು ಕೂಡ ಇದ್ದರು. ಉಗ್ರರ ಮೇಲೆ ಗುಂಡಿನ ದಾಳಿ ಮಾಡುವ ವೇಳೆಯಲ್ಲಿ ತನ್ನ ಜೊತೆಗಿದ್ದ ಯೋಧನಿಗೆ ಉಗ್ರನೊಬ್ಬನ ಗುಂಡು ತಗುಲಿತ್ತು. ಕೆಳಬಿದ್ದಿದ್ದ ಆತನನ್ನು ಎತ್ತಿಕೊಂಡು ಬರುವ ವೇಳೆಯಲ್ಲಿ ವಾನಿ ಅವರ ಮೇಲೆ ಉಗ್ರರು ಗುಂಡು ಹಾರಿಸಲು ಶುರು ಮಾಡಿದರು. ಆಗ ಆ ಯೋಧನನ್ನು ಕೆಳಗಿಳಿಸಿ ನೇರವಾಗಿ ಆ ಉಗ್ರರ ಹತ್ತಿರ ಹೋಗಿ ಗುಂಡು ಹಾರಿಸಿ ಇದ್ದ ಆರು ಉಗ್ರರಲ್ಲಿ ಮೂವರನ್ನು ಕೊಂದು ಹಾಕಿದರು. ತನ್ನ ಮೈ ಮೇಲೆ ಗುಂಡು ಬಿದ್ದಿರುವದನ್ನು ಲೆಕ್ಕಿಸದೆ ಆ ಉಗ್ರರನ್ನು ಸೆದೆಬಡಿಯುವಲ್ಲಿ ಯಶಸ್ವಿಯಾದರು. ನಂತರ ಉಳಿದ ಮೂವರು ಉಗ್ರರನ್ನು ಕೂಡ ಸೇನೆ ಸದೆಬಡಿಯಿತು. ವಾನಿಯವರ ದೇಹದಿಂದ ಬರುತ್ತಿದ್ದ ರಕ್ತ ಕಂಡು ಅವರನ್ನು ಬದುಕಿಸಲು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿಯ ಮಧ್ಯೆ ಕೊನೆಯುಸಿರೆಳೆದರು. ಅಂದಿಗೆ ತನ್ನ ಜೀವನಕ್ಕೆ ಒಂದು ಅರ್ಥ ಕಂಡುಕೊಂಡ ವಾನಿ ಅವರು ಅದೆಷ್ಟೋ ಕಾಶ್ಮೀರಿ ಮುಸ್ಲಿಂ ಯುವಕರಿಗೆ ಆದರ್ಶ ವ್ಯಕ್ತಿಯಾದರು.

ಇವರ ಈ ಶೌರ್ಯವನ್ನು ಕಂಡು ಭಾರತ ಸರ್ಕಾರ 2019 ರ ಗಣರಾಜ್ಯೋತ್ಸವದ ದಿನದಂದು “ಅಶೋಕ ಚಕ್ರ” ಪ್ರಶಸ್ತಿ ನೀಡಿ ಗೌರವಿಸಿತು. ಕಾಶ್ಮೀರದಲ್ಲಿ ಹುಟ್ಟುವ ಎಲ್ಲಾ ಮುಸ್ಲಿಂ ಯುವಕರು ಕೆಟ್ಟವರಲ್ಲ ದೇಶಕ್ಕಾಗಿ ಪ್ರಾಣ ಕೂಡ ನೀಡುವಂತಹವರಿದ್ದಾರೆ ಎಂದು ತೋರಿಸಿಕೊಟ್ಟ ಇವರಿಗೆ ಒಂದು ಸಲಾಂ.

Follow Karunadu Today for more Interesting Facts & Stories. 

Click here to Join Our Whatsapp Group