
ಜಾತಿ, ಈ ಜಗತ್ತಿನಲ್ಲಿ ಇಂದಿಗೂ ಕಾಡುತ್ತಿರುವ ಒಂದು ದೊಡ್ಡ ಪೀಡೆ. ಯಾವ ಜಾತಿ ಆದರೇನು ನಮ್ಮೆಲ್ಲರ ಮೈಯಲ್ಲಿ ಹರಿಯುತ್ತಿರುವ ರಕ್ತವು ಒಂದೇ ತಾನೇ? ಆದರೂ ಜನರು ಮಾಡಿಕೊಂಡಿರುವ ಈ ಜಾತಿ ಅನ್ನುವ ಪೀಡೆಯು ಎಷ್ಟೋ ಜೀವನವನ್ನೇ ಹಾಳು ಮಾಡಿದೆ. ಅದರಲ್ಲಿ ನನ್ನ ಜೀವನವೂ ಕೂಡ ಒಂದು. ಹೌದು ಈ ಜಾತಿಯು ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿದೆ. ಅದು ಹೇಗೆ ಎಂದು ನಿಮಗೆ ಹೇಳುತ್ತೇನೆ ಕೇಳಿ. ರಾಜೀವ್ ಮತ್ತೆ ನಾನು ಆರು ವರ್ಷದಿಂದ ಪ್ರೀತಿಸುತ್ತಿದ್ದೆವು. ನನ್ನ ಎಲ್ಲಾ ಕಷ್ಟದಲ್ಲಿ ಅವನು ಸಹಾಯ ಮಾಡುತ್ತಿದ್ದ. ಇಬ್ಬರು ಒಂದೇ ಕಾಲೇಜಿನಲ್ಲಿ ಓದಿ ನಂತರ ಒಂದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆವು. ನೂರಾರು ಕನಸುಗಳನ್ನು ಕಟ್ಟಿಕೊಂಡು ಇಬ್ಬರೂ ಹಗಲು ರಾತ್ರಿ ಎನ್ನದೆ ದುಡಿದೆವು. ಅಮ್ಮನಿಲ್ಲದ ಅವನು ಯಾವಾಗಲು ನನ್ನನ್ನು ಅವನ ತಾಯಿಯೆಂದು ತಿಳಿದುಕೊಳ್ಳುತ್ತಿದ್ದ. ಚಿಕ್ಕವನಿದ್ದಾಗಿನಿಂದ ಬಡತನದಲ್ಲೇ ಬೆಳೆದ ಅವನು ನೂರಾರು ಕಷ್ಟಗಳನ್ನು ಎದುರಿಸಿ ಜೀವನದಲ್ಲಿ ಸಾದನೆ ಮಾಡಬೇಕೆನ್ನುವ ಆಸೆ ಹೊಂದಿದ್ದ. ಅವನ ಪಾಲಿಗೆ ನಾನೇ ಎಲ್ಲಾ ಆಗಿದ್ದೆ. ಆದರೆ ನಮ್ಮ ಈ ಪ್ರೀತಿ ನಮ್ಮಿಬ್ಬರ ಮನೆಯಲ್ಲಿ ಅರ್ಥವಾಗಲಿಲ್ಲ. ಅವನ ತಂದೆಯು ನೀನೆನಾದರು ಆ ಹುಡುಗಿಯನ್ನು ಮದುವೆ ಆದರೆ ನನ್ನ ಸಾವು ನೋಡಬೇಕಾಗುತ್ತದೆ ಎಂದು ಹೆದರಿಸಿದರು.
ನನ್ನ ತಂದೆ ತಾಯಿಯೂ ಕೂಡ ಬೇರೆ ಜಾತಿಯ ಹುಡುಗ ಅವನು, ಅವನನ್ನು ನೀನು ಮದುವೆ ಆದರೆ ನಮ್ಮ ಮಾನ ಮರಿಯಾದೆ ಎಲ್ಲವೂ ಹಾಳಾಗುತ್ತದೆ, ಅವನನ್ನು ಮದುವೆ ಆಗುವುದಾದರೆ ನಮ್ಮಿಬ್ಬರ ಸಾವು ನೋಡುತ್ತೀಯ ಎಂದು ಹೆದರಿಸಿದರು. ಇಬ್ಬರೂ ಇದರ ಬಗ್ಗೆ ಚರ್ಚೆ ಮಾಡಿದೆವು. ಅಮ್ಮನನ್ನು ಕಳೆದುಕೊಂಡಿರುವ ಅವನು ಈಗ ನನ್ನಿಂದ ಅಪ್ಪನನ್ನು ದೂರ ಮಾಡಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ, ಅದಕ್ಕಾಗಿ ನಾನು ನಮ್ಮ ಮನೆಯಲ್ಲಿ ತೋರಿಸಿದ ಹುಡುಗನನ್ನೇ ಮದುವೆ ಆಗುತ್ತೇನೆ ಎಂದು ಹೇಳಿದೆ. ಅದಕ್ಕೆ ಅವನು ಕಣ್ಣೀರು ಇಡುತ್ತ ದಯವಿಟ್ಟು ನನ್ನನ್ನು ಬಿಟ್ಟು ಹೋಗಬೇಡ ಎಂದು ಹೇಳಿದನು. ಕಲ್ಲು ಮನಸ್ಸಿನ ಹುಡುಗಿಯ ತರಹ ಅಂದು ಅವನನ್ನು ದೂರ ಮಾಡಿಬಿಟ್ಟೆ. ನನ್ನ ತಂದೆ ತಾಯಿಯು ತೋರಿಸಿದ ಹುಡುಗನನ್ನೇ ಮದುವೆ ಆದೆ. ಜಾತಿ ಬೇರೆ ಅನ್ನುವ ಒಂದೇ ಕಾರಣಕ್ಕೆ ಪ್ರೀತಿಸಿದ ಹುಡುಗನನ್ನು ಬಿಟ್ಟು ಗೊತ್ತಿಲ್ಲದ ಇನ್ನ್ಯಾವುದೋ ಹುಡುಗನಿಗೆ ನನ್ನ ಕುತ್ತಿಗೆ ನೀಡಿ ತಾಳಿ ಕಟ್ಟಿಸಿಕೊಂಡೆ.

ಇಂದಿಗೆ ಮದುವೆ ಆಗಿ ಆರು ತಿಂಗಳು ಆಯಿತು. ಈ ಆರು ತಿಂಗಳಿನಲ್ಲಿ ನನ್ನ ಜೀವನ ಏನಾಗಿದೆ ಎಂದು ಹೇಳುತ್ತೇನೆ ಕೇಳಿ. ಮದುವೆ ಆಗಿ ಹದಿನೈದು ದಿನಗಳು ಆಗಿರಲಿಲ್ಲ ನನ್ನ ಗಂಡನು ನನ್ನನ್ನು ಕೆಲಸದಿಂದ ಬಿಡಿಸಿದನು. ಕಾರಣ ಕೇಳಿದರೆ ನನಗಿಂತ ಜೀವನದಲ್ಲಿ ಮುಂದೆ ಹೋಗಬೇಕು ಎನ್ನುವ ದುರಾಸೆ ಏನು ನಿನಗೆ ಎಂದು ಕೊಂಕು ಮಾತನಾಡಿದನು. ಜಗಳ ಮಾಡಿದ್ದಕ್ಕೆ ಇದೇನಾ ನಿಮ್ಮ ತಂದೆ ತಾಯಿ ನಿನಗೆ ಕಲಿಸಿರುವ ಪಾಠ ಎಂದು ನನ್ನ ಅತ್ತೆ ನನ್ನ ಮೇಲೆ ರೇಗಾಡಿದರು. ರಾಣಿಯ ತರಹ ಇದ್ದ ನನ್ನನ್ನು ಮನೆ ಕೆಲಸದವರ ತರಹ ಮಾಡಿಕೊಂಡರು. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಕತ್ತೆಯ ತರಹ ದುಡಿಸಿಕೊಂಡರು. ಎಷ್ಟೋ ಬಾರಿ ಹುಷಾರಿಲ್ಲದಿದ್ದರೂ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟು ಮಾನವೀಯತೆಯನ್ನು ತೋರುತ್ತಿರಲಿಲ್ಲ. ಒಬ್ಬಳೇ ಆಸ್ಪತ್ರೆಗೆ ಹೋಗುತ್ತಿದ್ದೆ.
ನನ್ನ ಗಂಡ ರಾತ್ರಿ ಮನೆಗೆ ಬರುವಾಗ ಕುಡಿದುಕೊಂಡು ಬರುತ್ತಿದ್ದ. ನನ್ನನ್ನು ಕೆಟ್ಟ ಮಾತುಗಳಲ್ಲಿ ನಿಂದಿಸುತ್ತಾನೆ. ಮದುವೆಗೆ ಮುಂಚೆ ಒಂದು ಕಸದ ಕಡ್ಡಿಯನ್ನು ಈ ಕಡೆಯಿಂದ ಆ ಕಡೆಗೆ ತೆಗೆದು ಹಾಕದೆ ರಾಣಿಯ ಹಾಗೆ ಇದ್ದ ನನಗೆ ಇಂದು ಅವನು ಕುಡಿದು ಕಕ್ಕಿಕೊಂಡ ವಾಂತಿಯನ್ನು ಬಳೆಯುವಷ್ಟು ಕೆಟ್ಟ ಪರಿಸ್ಥಿತಿ ಬಂದಿದೆ. ಕುಡಿದ ನಶೆಯಲ್ಲಿ ಅವನು ನನ್ನ ಮೈಯ್ಯ ಮೇಲೆ ಎಗರಿ ಮಾಡಿದ ಅತ್ಯಾಚಾರವು ಇಂದು ಒಂದು ಮಗುವನ್ನು ನನ್ನ ಹೊಟ್ಟೆಯಲ್ಲಿ ಸಾಕುತ್ತಿದ್ದೇನೆ. ಅದೆಷ್ಟೋ ಬಾರಿ ಸಾಯಬೇಕು ಎಂದು ಯೋಚಿಸಿದಾಗ ನನ್ನ ಹೊಟ್ಟೆಯಲ್ಲಿ ಇರುವ ಮಗುವು ಬೇಡ ಅಮ್ಮ ದಯವಿಟ್ಟು ನನ್ನನ್ನು ಕೊಲ್ಲಬೇಡ ಎಂದು ಹೇಳುವ ಮಾತು ಕೇಳಿಸುತ್ತದೆ. ನಾನು ಒಬ್ಬ ಗರ್ಭಿಣಿ ಹೆಂಗಸು ಎಂದು ನೋಡದೆ ಮನೆಯಿಂದ ದುಡ್ಡು ತೆಗೆದುಕೊಂಡು ಬಾ ಎಂದು ಪೀಡಿಸುತ್ತಾರೆ. ಇದನ್ನೆಲ್ಲಾ ನನ್ನ ತಂದೆ ತಾಯಿಗೆ ಹೇಳಿದಾಗ ಸಂಸಾರದಲ್ಲಿ ಇದೆಲ್ಲಾ ಇರುತ್ತದೆ ದಯವಿಟ್ಟು ನಮ್ಮನ್ನು ಪೋಲಿಸ್ ಸ್ಟೇಷನ್ ಮೆಟ್ಟಿಲಿನ ವರೆಗೂ ಕರೆದುಕೊಂಡು ಹೋಗಬೇಡ ಎಂದು ಹೇಳಿದರು.
ಪ್ರೀತಿಸಿದ ಹುಡುಗನ ಜೊತೆಗೆ ಮದುವೆಯಾಗಿ ಹಾಯಾಗಿ ಇರಬೇಕಿದ್ದ ನಾನು ಇಂದು ನರಕ ಅನುಭವಿಸುತ್ತಾ ಇದ್ದೇನೆ. ತಂದೆ ತಾಯಿ ಹೇಳಿದ ಹಾಗೆಯೇ ಪ್ರೀತಿಸಿದ ಹುಡುಗನನ್ನು ದೂರ ಮಾಡಿ ಒಂದೇ ಜಾತಿಯ ಹುಡುಗನನ್ನು ಮದುವೆ ಆದೆ, ಆದರೆ ಇಂದು ಅನ್ನಿಸುತ್ತಿದೆ ಈ ಪ್ರಪಂಚದಲ್ಲಿ ಮನುಷ್ಯತ್ವವಿಲ್ಲದ ಮನುಷ್ಯರೇ ಈ ಜಾತಿಗಳನ್ನು ಮಾಡಿಕೊಂಡಿರುವವರು ಎಂದು. ನನ್ನ ತರಹ ಅದೆಷ್ಟು ಜನರು ಈ ಜಾತಿಯ ಬಲೆಯಲ್ಲಿ ಸಿಕ್ಕು ಅವರ ಜೀವನವನ್ನು ನರಕ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಇಂದು ನನ್ನ ಜೀವನವನ್ನು ಹಾಳು ಮಾಡಿದ ಆ ನಿಮ್ಮ ಜಾತಿ ಪದ್ದತಿಗೆ ನನ್ನ ದಿಕ್ಕಾರವಿರಲಿ.
For more Stories follow Karunadu Today
Click here to Join Our Whatsapp Group