ನಮಗೆ ಎದುರಾಗುವ ಎಲ್ಲಾ ಸಂದರ್ಭಗಳು ನಮ್ಮನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ ಎಂದು ಭಾವಿಸಿ ನಡೆದರೆ ನಮಗೆ ಕೆಲಸ ಮಾಡುವುದರಲ್ಲಿ ಉತ್ಸಾಹ ಹೆಚ್ಚುತ್ತದೆ. ಸಿಗುವ ಎಲ್ಲಾ ಒಳ್ಳೆಯ-ಮತ್ತು ಕೆಟ್ಟ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಜೀವನದಲ್ಲಿ ಬಹು ಬೇಗ ಮೇಲೆ ಹೋಗುತ್ತೇವೆ, ಆಗುವುದೆಲ್ಲ ಒಳ್ಳೆಯದೇ ಎಂಬ ನುಡಿಯನ್ನು ನಾವು ಸದಾ ನೆನಪಿನಲ್ಲಿಟ್ಟುಕೊಂಡರೆ ನಮಗೆ ಎಷ್ಟೇ ಕಷ್ಟ ಎದುರಾದರು ನಾವು ಎದೆಗುಂದುವುದಿಲ್ಲ. ಇದಕ್ಕೆ ಒಂದೊಳ್ಳೆ ಉದಾರಹರಣೆಯನ್ನು ನೀಡುತ್ತೇನೆ, ಇದನ್ನು ಓದಿದ ನಂತರ ನೀವು ಖಂಡಿತವಾಗಿ ಮೇಲಿನ ನುಡಿಯನ್ನು ಪಾಲಿಸುತ್ತೀರ.

ಒಂದೂರಿನಲ್ಲಿ ಒಬ್ಬ ರೈತನು ತನ್ನ ಪರಿವಾರದೊಂದಿಗೆ ಒಂದು ಚಿಕ್ಕ ಜಮೀನಿನಲ್ಲಿ ಮನೆಯನ್ನು ಕಟ್ಟಿಕೊಂಡು ವಾಸವಿದ್ದನು, ರೈತನು ತುಂಬಾ ಬಡವನಾಗಿದ್ದ ಆದರೂ ಅವನು ತುಂಬಾ ಕಷ್ಟ ಪಟ್ಟು ದುಡಿಯುತ್ತಿದ್ದನು. ರೈತ ಬರೀ ಮಳೆಯನ್ನೇ ನೆಚ್ಚಿಕೊಳ್ಳದೆ ತನ್ನ ಹೊಲದಲ್ಲಿ ಭಾವಿಯನ್ನು ಕೊರೆಸಿದ್ದನು.ರೈತನ ಬಳಿ ಒಂದು ಹಸು, ಆಡು, ಮತ್ತು ಒಂದು ಎತ್ತು ಇದ್ದವು. ರೈತ ಅವುಗಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ, ಏಕೆಂದರೆ ಅವನಿಗೆ ಹೊಲ ಬಿಟ್ಟರೆ ಅವುಗಳೇ ದೊಡ್ಡ ಆಸ್ಥಿ. ರೈತ ದಿನ ಬೆಳಗ್ಗೆ ಗೋಧೂಳಿ ವೇಳೆಯಲ್ಲಿ ಎದ್ದು ತನ್ನ ಎತ್ತಿನೊಂದಿಗೆ ಹೊಲಕ್ಕೆ ಹೋಗುತ್ತಿದ್ದನು.ಹೀಗೆ ರೈತನ ಜೀವನ ಸಾಮಾನ್ಯವಾಗಿ ಸಾಗಿತ್ತು.

ಒಂದು ದಿನ ಮಧ್ಯಾಹ್ನ ರೈತ ಹೊಲದಲ್ಲಿ ಊಟ ಮಾಡುತ್ತಿರುವಾಗ ರೈತನ ಎತ್ತು ಹೊಲದಲ್ಲಿದ್ದ ಬಾವಿಗೆ ಹೋಗಿ ಬಿದ್ದಿತು. ರೈತನಿಗೆ ಬಾವಿಯಲ್ಲಿ ಏನೋ ಬಿದ್ದ ಶಬ್ದವಾಗಿ ಊಟ ಬಿಟ್ಟು ತಕ್ಷಣ ಬಾವಿಯ ಕಡೆ ಹೋಗಿ ನೋಡಿದ, ಆತನಿಗೆ ಒಂದು ಕ್ಷಣ ದಿಕ್ಕೇ ತೋಚಲಿಲ್ಲ, ತಾನು ಪ್ರೀತಿಯಿಂದ ಸಾಕಿದ ಎತ್ತು ತನ್ನ ಜೀವನೋಪಾಯವನ್ನು ನಡೆಸುತ್ತಿದ್ದ ಜೀವಿ ನೀರಿನಲ್ಲಿ ಬಿದ್ದು ತನ್ನ ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿದೆ.

ರೈತ ತನ್ನ ಹತ್ತಿರವಿದ್ದ ಹಗ್ಗವನ್ನು ಎಸೆದು ಎತ್ತನ್ನು ಮೇಲೆ ಎಳೆಯಲು ಪ್ರಯತ್ನಿಸಿದ ಆದರೆ ಏನು ಪ್ರಯೋಜನವಾಗಲಿಲ್ಲ, ನಂತರ ಊರಿನ ಇತರರನ್ನು ಕರೆದು ತಂದು ಇಡೀ ರಾತ್ರಿ ಎತ್ತನ್ನು ಮೇಲೆತ್ತಲು ಹಗ್ಗ, ಜಾಲಿ ಮತ್ತು ಇತರೆ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಿದನು. ಎತ್ತು ಸಹಾಯಕ್ಕಾಗಿ ರೋಧಿಸತೊಡಗಿತು, ರೈತನಿಗೂ ಕಣ್ಣೀರು ಬಂದಿತು, ಆದರೆ ಅವನು ಅಸಹಾಯಕನಾಗಿದ್ದನು.ಎಲ್ಲರೂ ಪ್ರಯತ್ನ ಮಾಡಿ ಕೊನೆಗೆ ಕೈಬಿಟ್ಟರು, ಕೊನೆಗೆ ಬೆಳಗಿನ ಜಾವ ಎತ್ತು ರೋಧಿಸುವುದನ್ನು ಕೇಳಿ ತಡೆಯಲಾರದೆ ರೈತ ಮತ್ತೆ ಎಲ್ಲರಿಗೆ ಹೇಳಿದ ಎತ್ತು ಸಾಯುವುದು ಖಚಿತ ಅದಕ್ಕೆ ಭಾವಿಗೆ ಮಣ್ಣು ಹಾಕಿ ಅದನ್ನು ಅಲ್ಲಿಯೇ ಮಣ್ಣು ಮಾಡೋಣ ಎಂದನು, ಅತ್ತ ಎತ್ತು ತಾನು ಹೇಗಾದರೂ ಬದುಕಬೇಕು ಎಂದು ಈಜಿ-ಈಜಿ ಸುಸ್ತಾಗಿತ್ತು.

ರೈತನ ಮಾತು ಕೇಳಿ ಎಲ್ಲರು ಆ ಎತ್ತಿನ ಮೇಲೆ ಮಣ್ಣನ್ನು ಹಾಕತೊಡಗಿದರು, ಮಣ್ಣು ಹಾಕಿದಾಗಲೆಲ್ಲ ಎತ್ತು ತನ್ನ ಮೈಯನ್ನು ಆಕಡೆ ಈಕಡೆ ಬಾಗಿಸತೊಡಗಿತು ಹೀಗೆ ಕೆಲ ಗಂಟೆಗಳ ನಂತರ ಅದೇ ಮಣ್ಣನ್ನು ಬಳಸಿ ಎತ್ತು ಒಂದು ಕಡೆ ನೆಲವನ್ನು ನಿರ್ಮಿಸಿಬಿಟ್ಟಿತ್ತು, ತಕ್ಷಣ ಅದು ಅದರ ಮೇಲೆ ನಿಂತು ಬಿಟ್ಟಿತು, ಬೆಳಗಾಗುತ್ತಿದಂತೆ ಜನ ಎತ್ತು ಮಣ್ಣಿನ ಮೇಲೆ ನಿಂತಿರುವುದನ್ನು ಕಂಡು ಅಚ್ಚರಿಯಾಗಿ ರೈತನಿಗೆ ವಿಷಯ ತಿಳಿಸಿದರು ರೈತ ಖುಷಿಯಾಗಿ ಎತ್ತಿನ ಸಾಹಸವನ್ನು ನೋಡಿ ಮೆಚ್ಚಿದನು, ಕೆಲ ಗಂಟೆಗಳ ನಂತರ ಪಕ್ಕದೂರಿನಿಂದ ಕೆಲ ಜನರನ್ನು ಕರೆಸಿ ರಕ್ಷಣಾ ಕಾರ್ಯವನ್ನು ಮಾಡಿಸಿ ಎತ್ತನ್ನು ಮೇಲೆತ್ತಿದನು, ಎತ್ತಿನ ಸಾಹಸವನ್ನು ಎಲ್ಲಾ ಜನರು ಮೆಚ್ಚಿದರು.

ಹೀಗೆ ನಾವು ಕೂಡ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಮಣ್ಣಿನಂತೆ ಬದಿಗಿಟ್ಟು ಅದನ್ನೇ ನಮ್ಮ ಗೆಲುವಿಗೆ ಅಡಿಪಾಯವನ್ನಾಗಿ ಮಾಡಿಕೊಂಡರೆ ಜೀವನದಲ್ಲಿ ಬಹು ಬೇಗ ಮೇಲೆ ಬರುವುದರಲ್ಲಿ ಎರಡು ಮಾತಿಲ್ಲ.

For more Stories follow Karunadu Today

Click here to Join Our Whatsapp Group