
ನಮಗೆಲ್ಲ ತಿಳಿದ ಹಾಗೆ ನಮ್ಮ ಭೂಮಿಯು ಶೇಖಡ 70 ರಷ್ಟು ನೀರಿನಿಂದ ಕೂಡಿದೆ. ಪ್ರಪಂಚದೆಲ್ಲೆಡೆ ಅನೇಕ ಸಮುದ್ರಗಳು ಇದ್ದು ಲೆಕ್ಕಕ್ಕೆ ಸಿಗದಷ್ಟು ವಿವಿಧ ಬಗೆಯ ಜೀವ ರಾಶಿಗಳು ಸಮುದ್ರದ ಒಳಗೆ ವಾಸಿಸುತ್ತಿವೆ. ನಮ್ಮ ಬಳಿಯಿರುವ ಅತ್ಯಾದುನಿಕ ತಂತ್ರಜ್ಞಾನ ಬಳಸಿಕೊಂಡು ಹುಡುಕುತ್ತಾ ಹೋದರೂ ಕೂಡ ಇದುವರೆಗೂ ಸಮುದ್ರವು ಅದೆಷ್ಟು ಆಳದಲ್ಲಿದೆ ಮತ್ತು ಅದರಲ್ಲಿ ಅದೆಷ್ಟು ಜೀವರಾಶಿಗಳು ವಾಸಿಸುತ್ತಿವೆ ಎಂದು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಆದರೆ ಪ್ರಪಂಚದಲ್ಲಿ ಇರುವ ಅನೇಕ ಸಮುದ್ರಗಳಲ್ಲಿ ಕೆಲವು ಸ್ಥಳಗಳನ್ನು ಪತ್ತೆ ಮಾಡಲಾಗಿದ್ದು ಆ ಸ್ಥಳಗಳು ಇದುವರೆಗು ಪತ್ತೆ ಮಾಡಲಾದ ಅತ್ಯಂತ ಆಳವಾದ ಸ್ಥಳಗಳಾಗಿವೆ. ಆ ಆಳವಾದ ಸ್ಥಳಗಳಲ್ಲಿ ಅನೇಕ ರಹಸ್ಯಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು ಹುಡುಕುತ್ತಾ ಹೋದಂತೆಲ್ಲ ದಿನೇ ದಿನೇ ಹೊಸ ಹೊಸ ರಹಸ್ಯಗಳು ಸಿಗುತ್ತಲೇ ಇವೆ. ಬನ್ನಿ ಇಂದು ಆ ಸ್ಥಳಗಳ ಕುರಿತು ತಿಳಿದುಕೊಂಡು ಬರೋಣ.
1. ಮರಿಯಾನ ಟ್ರೆಂಚ್
ಟ್ರೆಂಚ್ ಅಂದರೆ ಕನ್ನಡದಲ್ಲಿ ಬೃಹತ್ ಕಂದಕ ಎಂದರ್ಥ. ಪಶ್ಚಿಮ ಪೆಸಿಫಿಕ್ ಮಹಾಸಾಗರದ ಮರಿಯಾನ ಎನ್ನುವ ದ್ವೀಪದಿಂದ 200 ಕಿಲೋಮೀಟರ್ ಪೂರ್ವದಲ್ಲಿ ಇರುವ ಈ ಬೃಹತ್ ಕಂದಕವು ಪ್ರಪಂಚದಲ್ಲಿಯೇ ಅತ್ಯಂತ ಆಳವಾದ ಕಂದಕವಾಗಿದೆ. ಅರ್ಧಚಂದ್ರಾಕಾರದ ಆಕಾರದಲ್ಲಿರುವ ಈ ಕಂದಕವು ಬರೋಬ್ಬರಿ 2550 ಕಿಲೋಮೀಟರ್ ಉದ್ದ ಮತ್ತು 69 ಕಿಲೋಮೀಟರ್ ಅಗಲ ಇದ್ದು 10,911 ಮೀಟರ್ ಆಳವಿದೆ. ಆದರೆ ಕೆಲವು ಸ್ಥಳಗಳಲ್ಲಿ ಇದರ ಆಳವು 11,000 ಮೀಟರ್ ಗಿಂತ ಹೆಚ್ಚಿದೆ. ಇದರ ಅರ್ಥ ಅಕಸ್ಮಾತ್ ಈ ಕಂದಕದಲ್ಲಿ ಭೂಮಿಯ ಮೇಲಿರುವ ಅತ್ಯಂತ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ ಅನ್ನು ಉಲ್ಟಾ ಮಾಡಿ ಇಟ್ಟರು ಕೂಡ ಇನ್ನೂ 2 ಕಿಲೋಮೀಟರ್ ಹೆಚ್ಚು ಆಳದಲ್ಲಿ ಈ ಕಂದಕವಿದೆ. ಇನ್ನು ಈ ಬೃಹತ್ ಕಂದಕದಲ್ಲಿ ಈಜುತ್ತ ಹೋದರೆ ಸಮುದ್ರದ ಮೇಲ್ಭಾಗದಲ್ಲಿ ಇರುವ ಒತ್ತಡಕ್ಕಿಂತ ಹೆಚ್ಚು ಒತ್ತಡ ಇದರ ಆಳದಲ್ಲಿ ಕಾಣಬಹುದಾಗಿದ್ದು ತಾಪಮಾನವು 4 ಡಿಗ್ರೀ ಸೆಲ್ಸಿಯಸ್ ವರೆಗು ಇದೆ. ಸಹಜವಾಗಿ ಇಷ್ಟೊಂದು ಒತ್ತಡ ಮತ್ತು ತಾಪಮಾನವಿರುವ ಪ್ರದೇಶದಲ್ಲಿ ಜೀವಿಗಳು ವಾಸಿಸುವುದಿಲ್ಲ ಆದರೆ ಇಲ್ಲಿ 30 ಸೆಂಟಿಮೀಟರ್ ಉದ್ದದ “flatfish”, ಸೀಗಡಿ ಮೀನುಗಳು ಮತ್ತು ಅನೇಕ ಜೀವಿಗಳು ವಾಸವಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇನ್ನು ಈ ಬೃಹತ್ ಕಂದಕವನ್ನು ಮೊಟ್ಟ ಮೊದಲ ಬಾರಿಗೆ 1875 ರಲ್ಲಿ “ಎಚ್.ಎಂ.ಎಸ್ ಚಾಲೆಂಜರ್” ಎನ್ನುವ ಹಡಗಿನಲ್ಲಿದ್ದ ಬ್ರಿಟಿಷ್ ಸಮುದ್ರಶಾಸ್ತ್ರಜ್ಞರು ಪತ್ತೆ ಹಚ್ಚಿದ್ದರು. ಪ್ರಪಂಚದಲ್ಲಿರುವ ಸಮುದ್ರಗಳ ಅನ್ವೇಷಣೆ ಮಾಡುತ್ತಾ ಹೋಗುತ್ತಿದ್ದ ಈ ಹಡಗು ಅಂದು ಪೆಸಿಫಿಕ್ ಮಹಾಸಾಗರದ ಮರಿಯಾನ ದ್ವೀಪದ ಬಳಿ ಈ ಬೃಹತ್ ಕಂದಕವನ್ನು ಪತ್ತೆ ಮಾಡಿತು. ಅಂದಿನಿಂದ ಇಲ್ಲಿಯವರೆಗು ಈ ಕಂದಕದ ಅನ್ವೇಷಣೆ ಮಾಡುತ್ತಲೇ ಇರುವ ಜಗತ್ತಿನ ಅನೇಕ ಸಮುದ್ರಶಾಸ್ತ್ರಜ್ಞರು ಪ್ರತಿ ವರ್ಷ ಹೊಸ ಹೊಸ ಜೀವಿಗಳನ್ನು ಇಲ್ಲಿ ಪತ್ತೆ ಮಾಡುತ್ತಲೇ ಇರುವರು.
2. ಟೊಂಗ ಟ್ರೆಂಚ್
ಪೆಸಿಫಿಕ್ ಮಹಾಸಾಗರದ ನೈಋತ್ಯ ಭಾಗದಲ್ಲಿರುವ ಈ ಕಂದಕವು ಪ್ರಪಂಚದಲ್ಲಿಯೇ ಅತ್ಯಂತ ಆಳವಾದ ಕಂದಕಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿದೆ. ನಮ್ಮ ಭೂಮಿಯ ಒಳಗಿರುವ ಟೆಕ್ಟಾನಿಕ್ ಫಲಕಗಳು ಹೆಚ್ಚು ಸರಿದಾಡುವುದು ಇದೇ ಕಂದಕದಲ್ಲಿ. ಈ ಕಂದಕದಲ್ಲಿ “horizon deep” ಎನ್ನುವ ಸ್ಥಳವಿದ್ದು ಆ ಸ್ಥಳವು ಬರೋಬ್ಬರಿ 10,800 ಮೀಟರ್ ಆಳವಿದೆ. ಈ ಕಂದಕದಲ್ಲಿ ಆಗಾಗ್ಗೆ ಟೆಕ್ಟಾನಿಕ್ ಫಲಕಗಳು ಸರಿದಾಡುವುದರಿಂದ ಈ ಸಮುದ್ರಕ್ಕೆ ಹತ್ತಿರವಿರುವ ಜಪಾನ್ ದೇಶದಲ್ಲಿ ಜ್ವಾಲಾಮುಖಿ ಪರ್ವತಗಳಲ್ಲಿ ಲಾವಾರಸವು ಹೊರಚಿಮ್ಮುತ್ತದೆ.
3. ಫಿಲಿಪೈನ್ ಟ್ರೆಂಚ್
ಇದು ಪ್ರಪಂಚದಲ್ಲಿರುವ ಮೂರನೆಯ ಅತ್ಯಂತ ಆಳವಾದ ಕಂದಕವಾಗಿದೆ. ಫಿಲಿಪೈನ್ ದೇಶದ ಪೂರ್ವ ಭಾಗದಲ್ಲಿರುವ ಸಮುದ್ರದಲ್ಲಿ ಈ ಕಂದಕವಿದ್ದು ಬರೋಬ್ಬರಿ 1320 ಕಿಲೋಮೀಟರ್ ವರೆಗು ಇದು ವಿಸ್ತಾರವಾಗಿದೆ. ಈ ಕಂದಕದಲ್ಲಿ ಪತ್ತೆ ಮಾಡಲಾದ ಅತ್ಯಂತ ಆಳವಾದ ಸ್ಥಳವೆಂದರೆ “ಗಲಾತಿಯಾ”. ಈ ಸ್ಥಳದಲ್ಲಿ ಆಳವು ಬರೋಬ್ಬರಿ 10540 ಮೀಟರ್ ಇದೆ. ಈ ಕಂದಕದಲ್ಲಿ ನಡೆಸಿರುವ ಸಂಶೋದನೆಯ ಪ್ರಕಾರ ತಿಳಿದುಬಂದ ಸಂಗತಿ ಏನೆಂದರೆ ಇದರ ಒಳಗೆ “ಡ್ಯೂಟೇರಿಯಮ್ ಆಕ್ಸೈಡ್” ಅನಿಲವು ಸಿಗುತ್ತದೆ. ಈ ಅನಿಲವು ಹೈಡ್ರೋಜನ್ ಅನಿಲದ ತರಹ ನಮಗೆ ಬೇಕಾಗಿರುವ ಅತ್ಯಮೂಲ್ಯ ಅನಿಲವಾಗಿದೆ. ಇನ್ನು ಈ ಕಂದಕವು ಫಿಲಿಪೈನ್ಸ್ ದೇಶದ ಲುಜಾನ್ ದ್ವೀಪದ ಪೂರ್ವದಿಂದ ಆರಂಭವಾಗಿ ಇಂಡೋನೇಷ್ಯಾ ದೇಶದ ಮಲುಕು ದ್ವೀಪದ ಬಳಿ ಅಂತ್ಯವಾಗುತ್ತದೆ. ವಿಜ್ಞಾನಿಗಳು ಹೇಳುವ ಪ್ರಕಾರ 9 ಮಿಲಿಯನ್ ವರ್ಷಗಳ ಹಿಂದೆ “ಯುರೇಷಿಯನ್ ಪ್ಲೇಟ್ ಮತ್ತು ಫಿಲಿಪೈನ್ಸ್ ಪ್ಲೇಟ್” ಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಕಾರಣದಿಂದ ಈ ಬೃಹತ್ ಕಂದಕವು ನಿರ್ಮಾಣವಾಗಿದೆ. ಮರಿಯಾನ ಟ್ರೆಂಚ್ ಮತ್ತು ಟೊಂಗ ಟ್ರೆಂಚ್ ಗಳನ್ನು ಪತ್ತೆ ಹಚ್ಚುವುದಕ್ಕಿಂತ ಮೊದಲು ಈ ಟ್ರೆಂಚ್ ಅನ್ನು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಟ್ರೆಂಚ್ ಎಂದು ಪರಿಗಣಿಸಲಾಗಿತ್ತು.
4. ಇಜು ಒಗಸವರ ಟ್ರೆಂಚ್ – Izu ogasawara trench
ಈ ಕಂದಕವನ್ನು ಕೂಡ ನಾವು ಪಶ್ಚಿಮ ಪೆಸಿಫಿಕ್ ಮಹಾಸಾಗರದಲ್ಲಿ ಕಾಣಬಹುದಾಗಿದ್ದು ಇದನ್ನು ಇಜು ಬೋನಿನ್ ಟ್ರೆಂಚ್ ಎಂದು ಕೂಡ ಕರೆಯಲಾಗುತ್ತದೆ. ಜಪಾನ್ ದೇಶದ ಹತ್ತಿರ ಆರಂಭವಾಗುವ ಈ ಟ್ರೆಂಚ್ ಮರಿಯಾನದ ಹತ್ತಿರ ಅಂತ್ಯವಾಗುತ್ತದೆ. ಪೆಸಿಫಿಕ್ ಪ್ಲೇಟ್ ಮತ್ತು ಫಿಲಿಪೈನ್ಸ್ ಸೀ ಪ್ಲೇಟ್ ಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಇಜು ಮತ್ತು ಬೋನಿನ್ ಎನ್ನುವ ದ್ವೀಪಗಳು ಹುಟ್ಟಿಕೊಂಡಿದ್ದು ಅದರ ಜೊತೆಗೆ ಈ ಟ್ರೆಂಚ್ ಕೂಡ ನಿರ್ಮಾಣವಾಗಿದೆ. ಇನ್ನು ಈ ಟ್ರೆಂಚ್ ಒಳಗೆ ಇರುವ ಅತ್ಯಂತ ಆಳವಾದ ಸ್ಥಳವು 9780 ಮೀಟರ್ ಇದೆ.ಇದರೊಂದಿಗೆ ಪ್ರಪಂಚದ ಅತ್ಯಂತ ಆಳವಾದ ಕಂದಕಗಳ ಸ್ಥಳಗಳ ಪಟ್ಟಿಯಲ್ಲಿ ಇದು ನಾಲ್ಕನೆಯ ಸ್ಥಾನದಲ್ಲಿದೆ.
5. ಕುರಿಲ್ ಕಮ್ಚಟ್ಕಾ ಟ್ರೆಂಚ್ – kuril Kamchatka trench
ಇದನ್ನು ಕುರಿಲ್ ಟ್ರೆಂಚ್ ಎಂದು ಕೂಡ ಕರೆಯಲಾಗುತ್ತದೆ. ಪೆಸಿಫಿಕ್ ಮಹಾಸಾಗರದ ವಾಯುವ್ಯ ದಿಕ್ಕಿನಲ್ಲಿ ಇರುವ ಈ ಕಂದಕವು ಜಪಾನ್ ಟ್ರೆಂಚನ್ನು ಕೂಡುತ್ತದೆ. ಈ ಕಂದಕವು 160 ಮಿಲಿಯನ್ ವರ್ಷಗಳ ಹಿಂದೆ ನಿರ್ಮಾಣವಿದೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದು ಆಗಾಗ್ಗೆ ಇಲ್ಲಿ ಟೆಕ್ಟೋನಿಕ್ ಫಲಕಗಳು ಸರಿಯುವುದರಿಂದ ಅನೇಕ ಭೂಕಂಪಗಳು ಇಲ್ಲಿ ಆಗುತ್ತಿರುತ್ತವೆ. ಇದರ ಪರಿಣಾಮವನ್ನು ಹತ್ತಿರದ ಜಪಾನ್ ಮತ್ತು ರಷ್ಯಾ ದೇಶಗಳು ಎದುರಿಸುತ್ತಿರುತ್ತವೆ. ಇನ್ನು ಈ ಬೃಹತ್ ಕಂದಕದಲ್ಲಿ ಇರುವ ಅತ್ಯಂತ ಆಳವಾದ ಸ್ಥಳವೆಂದರೆ 10532 ಮೀಟರ್ ಇದೆ.
Follow Karunadu Today for more Interesting Facts & Stories.
Click here to Join Our Whatsapp Group