ಆಂಜನೇಯ, ಪ್ರಸಿದ್ಧ ರಾಮಭಕ್ತ, ರಾಮಾಯಣದ ದಿವ್ಯಪಾತ್ರಗಳಲ್ಲೊಬ್ಬ, ತಂದೆ ಕೇಸರಿ ಎಂಬ ಕಪಿನಾಯಕ. ತಾಯಿ ಅಂಜನಾ. ವಾಯುವಿನ ಅಂಶದಿಂದ ಜನಿಸಿದವ. ಹುಟ್ಟಿದಾಗಲೆ ಸೂರ್ಯನನ್ನು ಹಣ್ಣೆಂದು ಭ್ರಮಿಸಿ ಹಿಡಿಯಲು ಅಂತರಿಕ್ಷಕ್ಕೆ ಹಾರಿದಾಗ ಇಂದ್ರನ ವಜ್ರಾಯುಧದಿಂದ ಘಾತಿಸಲ್ಪಟ್ಟವ. ಆಗ ಒಂದು ಕೆನ್ನೆ ಸೊಟ್ಟಗಾದುದರಿಂದಲೇ ಹನುಮಂತ ಎಂಬ ಹೆಸರು ಬಂತು.

ಹೀಗೆ ತನ್ನಮಗ ಘಾತಿಸಲ್ಪಟ್ಟಿದ್ದರಿಂದ ವಾಯು ತನ್ನ ಸಂಚಾರವನ್ನು ನಿಲ್ಲಿಸಿದ. ಇಂದ್ರನೇ ಮೊದಲಾದ ದೇವತೆಗಳು ಆಂಜನೇಯನಿಗೆ ಸ್ವೇಚ್ಛಾಮರಣವನ್ನೂ, ವಾಯುವೇಗವನ್ನೂ, ವಾಯುಬಲವನ್ನೂ ಅನುಗ್ರಹಿಸಿ ವಾಯುವನ್ನು ಸಂತೈಸಿದರು. ರಾಮ ಸುಗ್ರೀವರ ನಡುವೆ ಸ್ನೇಹ ಬೆಳೆಯುವುದಕ್ಕೆ ಈತ ಕಾರಣನಾದ. ರಾಮನಿಂದ ಮುದ್ರೆಯುಂಗುರವನ್ನು ಪಡೆದು ಸೀತಾನ್ವೇಷಣೆಗಾಗಿ ದಕ್ಷಿಣಕ್ಕೆ ಹೊರಟ. ಸಮುದ್ರದಾಟುವ ಮೊದಲು ಜಾಂಬವಂತನಿಂದ ತನ್ನ ಜನ್ಮವೃತ್ತಾಂತವನ್ನು ತಿಳಿದು ಸಮುದ್ರವನ್ನು ದಾಟಿ ಸಿಂಹಿಕೆಯೆಂಬ ರಾಕ್ಷಸಿಯನ್ನು ಕೊಂದು, ನಾಗಮಾತೆ ಸುರಸೆಯನ್ನು ಮೆಚ್ಚಿಸಿ, ಮೈನಾಕನಿಂದ ಸತ್ಕøತನಾದ.

ಲಂಕಾಭಿಮಾನಿದೇವತೆಯನ್ನು ನಿಗ್ರಹಿಸಿದ. ರಾವಣನ ಅಂತಃಪುರದಲ್ಲಿ ಹುಡುಕಿ ಅನಂತರ ಅಶೋಕವನದಲ್ಲಿ ಸೀತೆಯನ್ನು ಕಂಡ. ಮುದ್ರೆಯುಂಗುರವನ್ನು ಕೊಟ್ಟು, ಗುರುತಿಗಾಗಿ ಆಕೆಯಿಂದ ಚೂಡಾಮಣಿಯನ್ನು ಪಡೆದು ರಾಮನೊಡನೆ ಮತ್ತೆ ಬರುವುದಾಗಿ ಭರವಸೆ ನೀಡಿದ. ಅಲ್ಲಿಂದ ಹೊರಡುವ ಮುನ್ನ ಅಶೋಕವನವನ್ನು ಹಾಳುಮಾಡಿದ. ತಡೆಯಲು ಬಂದ ರಾಕ್ಷಸರನ್ನು ಕೊಂದ. ರಾವಣನ ಮಗನಾದ ಇಂದ್ರಜಿತುವಿನಿಂದ ಬಂಧಿಯಾಗಿ ಲಂಕೇಶನಾಸ್ಥಾನಕ್ಕೆ ಕರೆದೊಯ್ಯಲ್ಪಟ್ಟ. ಬಾಲದಿಂದ ರಾವಣನ ಸಿಂಹಾಸನಕ್ಕಿಂತಲೂ ಎತ್ತರವಾದ ಆಸನವನ್ನು ರಚಿಸಿಕೊಂಡು ಕುಳಿತ. ತನಗಿಂತ ಎತ್ತರದಲ್ಲಿ ಕುಳಿತ ಈ ಕಪಿಯನ್ನು ಕಂಡು ಸಹಿಸದಾದ ರಾವಣ ಶಿಕ್ಷೆಯಾಗಿ ಬಾಲಕ್ಕೆ ಬೆಂಕಿಹಚ್ಚಿಸಿದರೆ ಅದರಿಂದ ಲಂಕೆಯನ್ನೇ ಸುಟ್ಟ.

ವಿಭೀಷಣನನ್ನು ರಾಮನಿಗೆ ಪರಿಚಯಿಸಿದ. ಧೂಮ್ರಾಕ್ಷ ಎಂಬ ರಾಕ್ಷಸನನ್ನು ಕೊಂದ. ಯುದ್ಧದಲ್ಲಿ ಲಕ್ಷ್ಮಣ ಮುಂತಾದವರು ಮೂರ್ಛೆಹೋದಾಗ ಮಹೌಷಧಿಯಿದ್ದ ಪರ್ವತವನ್ನೇ ಹೊತ್ತು ತಂದ. ಭೀಮನಿಗೆ ವಿಶ್ವರೂಪ ತೋರಿಸಿದ. ಕಲ್ಪಾಂತರದವರೆಗೆ ಭೂಲೋಕದಲ್ಲಿ ಜೀವಿಸಿರಲು ರಾಮನಿಂದ ಅನುಮತಿ ಪಡೆದ. ಈತ ಉಚ್ಚ ಬ್ರಹ್ಮಚಾರಿಯೂ ಅದ್ಭುತ ದೇಹದಾಢ್ರ್ಯವುಳ್ಳವನೂ ಆಗಿದ್ದಾನೆಂಬ ಅಚಲ ನಂಬಿಕೆ ಜನಗಳಲ್ಲಿ ವಾಡಿಕೆಯಾಗಿರುವುದರಿಂದ ಗರಡಿಗಳಲ್ಲಿನ ಏಕೈಕ ಆರಾಧ್ಯದೈವವಾಗಿದ್ದಾನೆ. ಅನೇಕ ಕಡೆ ಶ್ರೀರಾಮನಿಗಿಂತ ಈತನಿಗೇ ಹೆಚ್ಚು ಪ್ರಾಸ್ತ್ಯಸಿಕ್ಕಿದೆ. ಈತನನ್ನು ಕುರಿತ ಹನುಮ ಜಯಂತಿ ಆಚರಣೆಯಲ್ಲಿದೆ. ಈತ ಮುಂದೆ ದ್ವಾಪರಯುಗದಲ್ಲಿ ಭೀಮನಾಗಿಯೂ ಕಲಿಯುಗದಲ್ಲಿ ವೈಷ್ಣವ ಮತಪ್ರಚಾರಕರಾದ ಮಧ್ವಾಚಾರ್ಯರಾಗಿಯೂ ಜನ್ಮ ತಳೆದನೆಂಬ ನಂಬಿಕೆಯಿದೆ.

Follow Karunadu Today for more Spiritual Informations  like this

Click here to Join Our Whatsapp Group